ಮಂಗಳವಾರ, ಫೆಬ್ರವರಿ 25, 2020
19 °C
ವಾಡಿ: ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ನೇತಾಜಿ ಜನ್ಮ ದಿನಾಚರಣೆ

‘ಬಂಡವಾಳಶಾಹಿಗೆ ಸಮಾಜವಾದಿ ಕ್ರಾಂತಿ ಉತ್ತರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ‘ದೇಶದಲ್ಲಿ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿದೆ. ಇದಕ್ಕೆ ಪರ್ಯಾಯವಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಮಾತ್ರ ಉತ್ತರ ನೀಡಬಲ್ಲದು’ ಎಂದು ಎಸ್‌ಯುಸಿಐ (ಕಮ್ಯುನಿಷ್ಟ್) ಪಕ್ಷದ ರಾಯಚೂರು ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನೇತಾಜಿ ಸುಭಾಷಚಂದ್ರ್ ಬೋಸ್ ಅವರ 123ನೇ ಜನ್ಮದಿನಾಚರಣೆಯ ನಿಮಿತ್ತ ಈಚೆಗೆ ಎಐಡಿವೈಓ, ಎಐಡಿಎಸ್ಓ ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಂಟಿಯಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.  

ಜನಪರ ಮುಖವಾಡ ಹೊತ್ತ ಬಂಡವಾಳಶಾಹಿ ಪೋಷಿತ ಸರ್ಕಾರಗಳು, ಜನರ ಹಿತ ಕೈಬಿಟ್ಟಿವೆ. ಇದಕ್ಕಾಗಿ ಜನರು ಇನ್ನೊಂದು ಕ್ರಾಂತಿಗೆ ಸಜ್ಜಾಗಬೇಕು. ಅದುವೇ  ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ. ಇದು ನೇತಾಜಿ ಸುಭಾಸ್ ಚಂದ್ರ ಭೋಸ್ ಅವರ ಕನಸಾಗಿತ್ತು ಎಂದರು. 

ದುಡಿಮೆಯಿಂದ ಸೃಷ್ಟಿಯಾದ ಸಂಪತ್ತು ದೇಶದ ಪ್ರತಿ ಪ್ರಜೆಗೂ ಸೇರುವಂತಾಗಬೇಕು. ಅಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎನ್ನುವುದು ನೇತಾಜಿ ಅವರ ಕನಸಾಗಿತ್ತು. ಅದಕ್ಕಾಗಿ ಐಎನ್ಎ ಸೈನ್ಯದ ಮೂಲಕ ಹೋರಾಟ ನಡೆಸಿದ್ದರು ಎಂದರು.

ಸಾಹಿತಿ ಕಾಶಿನಾಥ ಹಿಂದಿನಕೇರಿ ಮಾತನಾಡಿ, 'ಖಾಸಗೀಕರಣದ ಭೂತ ತನ್ನ ಕಬಂಧ ಬಾಹುಗಳನ್ನು ಚಾಚಿ ಎಲ್ಲವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ನಿರುದ್ಯೋಗ ಎಲ್ಲೆಡೆ ತಾಂಡಾವಾಡುತ್ತಿದೆ. ದುಡ್ಡಿನ ಭರಾಟೆಯಲ್ಲಿ ಜನತಂತ್ರ ಕರಗಿ ಹೋಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ನೇತಾಜಿ ಜೀವನ ಚರಿತ್ರೆ ಕುರಿತು ಮಾತನಾಡಿದರು.

ಎಐಡಿವೈಒ ಸ್ಥಳೀಯ ಕಾರ್ಯದರ್ಶಿ ಮಲ್ಲಿನಾಥ ಹುಂಡೆಕಲ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಗಳ ಸದಸ್ಯರಾದ  ಗೌತಮ ಪರ್ತೂರಕರ, ಶರಣು.ವಿ.ಕೆ, ಆರ್.ಕೆ. ವೀರಭದ್ರಪ್ಪಾ, ಮುಖಂಡರಾದ ಗುಂಡಣ್ಣ ಎಮ್.ಕೆ ಶರಣು ಹೇರೂರ, ಶಿವಕುಮಾರ ಆಂದೋಲಾ, ಮಲ್ಲಣ ದಂಡಬಾ, ಶರಣು ದೋಶೆಟ್ಟಿ, ಶ್ರೀಶರಣ ಹೊಸಮನಿ, ಗೌತಮ ಪರತೂರಕರ, ಆರ್.ಜಿ.ವೆಂಕಟೇಶ, ರಾಜು ಒಡೆಯರ, ದವಲಪ್ಪ ದೋರೆ ಇದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)