ಪ್ರಜಾವಾಣಿ ಪತ್ರಿಕೆ ಹಂಚಲು ಸೈಕಲ್ ಏರಿ ಹೊರಟ ಪತ್ರಿಕಾ ವಿತರಕ...
ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ನಾನು ಮೂಲತಃ ಅನುಕೂಲಸ್ಥೆ. ತಕ್ಕ ಆಸ್ತಿಯೂ ಇದೆ. ಮನೆಯಲ್ಲಿ ಊಟ ಬಡಿಸಿ ಕೊಡುವ ತನಕ ತಿನ್ನುತ್ತಿರಲಿಲ್ಲ. ಅಂಥವಳು ಪತ್ರಿಕಾ ವಿತರಕಿಯಾಗುವೆ ಎಂದಾಗ ಎಲ್ಲರೂ ಆಡಿಕೊಂಡಿದ್ದೇ ಹೆಚ್ಚು. ಆದರೆ ನನ್ನ ನಿರ್ಧಾರ ಅಚಲವಾಗಿತ್ತು. ಧೈರ್ಯದಿಂದ ಪತ್ರಿಕೆ ವಿತರಣೆ ಆರಂಭಿಸಿದೆ. ನನ್ನ ಜಡತ್ವಕ್ಕೆ ಅದು ಮದ್ದು ಅರೆದು ಬದುಕಿಗೆ ಚೈತನ್ಯವೂ ನೀಡಿತು. ನನಗೀಗ ಹೆಮ್ಮೆಯಿದೆ.ಶಾರದಾ ಪಾಟೀಲ ರಾಮಮಂದಿರ ವೃತ್ತ ಕಲಬುರಗಿ
ಪ್ರಜಾವಾಣಿ’ ಪತ್ರಿಕೆಗೆ ₹1 ಇದ್ದಾಗಿನಿಂದ ಪೇಪರ್ ಮಾರುತ್ತಿದ್ದೇನೆ. ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಬಂದೆ. ‘ಪ್ರಜಾವಾಣಿ’ ಬಿಟ್ಟು ಬೇರೆ ಪೇಪರನ್ನೇ ನಾನು ಮಾರಲ್ಲ. ಐದು ಪೇಪರ್‌ನಿಂದ ಈಗ 35 ಪೇಪರ್‌ಗಳಿಗೆ ಹೆಚ್ಚಿದೆ. 3–4ನೇ ತರಗತಿ ಕಲಿತಿದ್ದ ನನಗೆ ಅಕ್ಷರ ಜ್ಞಾನ ಕೊಟ್ಟಿದ್ದು ಪ್ರಜಾವಾಣಿ ಎನ್ನಬಹುದು.ಬಸವರಾಜ ಹುಬ್ಬಳ್ಳಿ ಬಿಳವಾರ ಯಡ್ರಾಮಿ ತಾಲ್ಲೂಕು
ಪತ್ರಿಕಾ ವಿತರಣೆ ನನ್ನ ಪಾಲಿಗೆ ಸರ್ಕಾರಿ ಕೆಲಸಕ್ಕೆ ಸಮ. ಸ್ನೇಹಿತನೊಬ್ಬ ಈ ಕ್ಷೇತ್ರಕ್ಕೆ ಪರಿಚಯಿಸಿದ. ಕಳೆದ 20 ವರ್ಷಗಳಲ್ಲಿ ಪ್ರಾಮಾಣಿಕವಾಗಿ ಸೈಕಲ್ ಹೊಡೆದಿದ್ದೇನೆ. ಗೌರವಯುತ ಬದುಕಿಗೆ ಅಗತ್ಯವಾದ ಎಲ್ಲವನ್ನೂ ಈ ಕಾಯಕ ಕೊಟ್ಟಿದೆ.ಪ್ರವೀಣಕುಮಾರ ವಿ.ಕೆ. ಹೊಸ ಜೇವರ್ಗಿ ರಸ್ತೆ ಕಲಬುರಗಿ
ನನ್ನನ್ನೂ ಸೇರಿ ಎಂಟು ಜನರ ತುಂಬು ಕುಟುಂಬ ನನ್ನದು. ನನ್ನ ಬದುಕಿನ ಅಗತ್ಯಗಳನ್ನು ಈ ಕಾಯಕ ಪೂರೈಸಿದೆ. ಈ ಕೆಲಸ ಎಂದಿಗೂ ಬೇಸರವಾಗಿಲ್ಲ. ನಸುಕಿನಲ್ಲೇ ಕರ್ತವ್ಯ ಪ್ರಜ್ಞೆ ಜಾಗೃತಗೊಳಿಸುವ ಚೈತನ್ಯಶೀಲ ಕಾಯಕವಿದುಎಂ.ಡಿ.ಫಾರೂಕ್ ಕೇಂದ್ರ ಬಸ್‌ನಿಲ್ದಾಣ ಪ್ರದೇಶ ಕಲಬುರಗಿ
ಓದು ಮುಗಿಸಿ ಕೆಲಸ ಹುಡುಕುತ್ತಿದ್ದಾಗ ಈ ಕ್ಷೇತ್ರಕ್ಕೆ ಬಂದೆ. ಬಳಿಕ ಸ್ವಂತ ಲೈನ್ ಪಡೆದೆ. ಈಗಲೂ ಇದು ನನ್ನ ಉಪಕುಸುಬಾಗಿ ಬದುಕಿಗೆ ಆಧಾರವಾಗಿದೆ. ಮನೆಯಲ್ಲಿನ ಹಿರಿಯರು ಅಸುನೀಗಿದರೆ ಪತ್ರಿಕೆಯನ್ನೇ ನಿಲ್ಲಿಸುವ ಸ್ಥಿತಿಯಲ್ಲಿ ಯುವಜನರಿದ್ದಾರೆ. ಪತ್ರಿಕೆಯನ್ನು ಕುಟುಂಬದವರೆಲ್ಲೂ ಓದುವಂತಾಗಬೇಕಿದೆಮಲ್ಲಿಕಾರ್ಜುನ ಆಣೂರ ರಾಜಾಪುರ ಪ್ರದೇಶ ಕಲಬುರಗಿ
ಡಿಪ್ಲೊಮಾ ಮುಗಿಸಿ 13 ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಬಂದೆ. ಆಗ ಬರೀ ಸೈಕಲ್ ಇತ್ತು. ವರ್ಷದಿಂದ ವರ್ಷಕ್ಕೆ ಬದುಕು ಸುಧಾರಿಸಿದೆ. ಇನ್ನಷ್ಟು ಕಮಿಷನ್ ಹೆಚ್ಚಿದರೆ ಗ್ರಾಹಕರು ನಿಗದಿತ ಸಮಯಕ್ಕೆ ಬಿಲ್ ಪಾವತಿಸುವಂತಾದರೆ ಬದುಕಿಗೆ ಇನ್ನಷ್ಟು ಸಂತೋಷ ತುಂಬಿದಂತಾಗುತ್ತದೆಗಂಗಾಧರ ರಾಠೋಡ ಬಸವೇಶ್ವರ ಆಸ್ಪತ್ರೆ ಪ್ರದೇಶ ಕಲಬುರಗಿ
27 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದೇನೆ. 12 ವರ್ಷದ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದ 4 ದಿನ ಬಿಟ್ಟರೆ ಒಮ್ಮೆಯೂ ಈ ಕೆಲಸ ಬಿಟ್ಟಿಲ್ಲ. 27 ವರ್ಷಗಳಲ್ಲಿ ಮೂರು ಸೈಕಲ್ ಬದಲಿಸಿದ್ದು ಈಗಲೂ ಸೈಕಲ್ ಮೇಲೆಯೇ ಪೇಪರ್ ಹಾಕುತ್ತೇನೆ. ಈ ಕಾಯಕ ನನ್ನ ಬದುಕಿಗೆ ಆಧಾರವಾಗಿದೆಕಿರಣ ಬಾಸುತ್ಕರ ಸೇಡಂ ಪಟ್ಟಣ ಕಲಬುರಗಿ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.