ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಗೆ ರಾತ್ರಿಯೂ ವಿಮಾನ ಸೇವೆ ಆರಂಭ

ಪ್ರತಿ ಗುರುವಾರ ರಾತ್ರಿ ಸಂಚರಿಸುವ ವಿಮಾನ: ಕಲ್ಯಾಣದ ಜನರ ಕನಸು ನನಸು
Published 24 ಫೆಬ್ರುವರಿ 2024, 7:10 IST
Last Updated 24 ಫೆಬ್ರುವರಿ 2024, 7:10 IST
ಅಕ್ಷರ ಗಾತ್ರ

ಕಲಬುರಗಿ: ಬೆಂಗಳೂರಿನಿಂದ ಹೊರಟ ವಿಮಾನವು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗುರುವಾರ ತಡ ರಾತ್ರಿ ಸುರಕ್ಷಿತವಾಗಿ ಇಳಿಯುವ ಮೂಲಕ ‘ರಾತ್ರಿ ಇಳಿಯುವ ಸೇವೆ’(ನೈಟ್‌ ಲ್ಯಾಂಡಿಗ್‌)ಯನ್ನು ಅಧಿಕೃತವಾಗಿ ಆರಂಭಿಸಿದೆ. ಈ ಮೂಲಕ ಕಲ್ಯಾಣ ಕರ್ನಾಟಕದ ಜನರ ಬಹುದಿನಗಳ ಕನಸು ನನಸಾಯಿತು.

ಅಲಯನ್ಸ್‌ ಏರ್‌ಲೈನ್ಸ್‌ನ ವಿಮಾನವು ಪ್ರತಿ ಗುರುವಾರ ಸಂಜೆ 6.45ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8ಕ್ಕೆ ಕಲಬುರಗಿ ತಲುಪಲಿದೆ. ರಾತ್ರಿ 8.45ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 10ಕ್ಕೆ ಬೆಂಗಳೂರು ತಲುಪಲಿದೆ.

ದೇಶಿಯ ವಾಯುಯಾನದ ಸಂಪರ್ಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ‘ಉಡಾನ್’ ಯೋಜನೆಯಡಿ 2019ರ ನವೆಂಬರ್ 22ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸೇವೆಗೆ ತೆರೆದುಕೊಂಡಿತ್ತು. 2023ರ ನ.22ಕ್ಕೆ ನಾಲ್ಕು ವರ್ಷ ತುಂಬಿದ್ದು, ಐದನೇ ವರ್ಷವೇ ರಾತ್ರಿ ಲ್ಯಾಂಡಿಂಗ್ ಸೇವೆಗೆ ಚಾಲನೆ ಸಿಕ್ಕಿದೆ.

ಗುರುವಾರ ರಾತ್ರಿ ಅಲಾಯನ್ಸ್ ಏರ್‌ಲೈನ್ಸ್‌ನ ವಿಮಾನವು ರಾತ್ರಿ 10.40ಕ್ಕೆ ಬೆಂಗಳೂರಿಂದ ಹೊರಟು 11.52ಕ್ಕೆ ಕಲಬುರಗಿಗೆ ಲ್ಯಾಂಡ್ ಆಯಿತು.

ತಾಂತ್ರಿಕ ಕಾರಣಕ್ಕೆ ವಿಳಂಬ: ನಿಗದಿಯಂತೆ ವಿಮಾನವು ಬೆಂಗಳೂರಿನಿಂದ ಸಂಜೆ 6.45 ಗಂಟೆಗೆ ಹೊರಟು ಕಲಬುರಗಿಗೆ 8 ಗಂಟೆಗೆ ತಲುಪಬೇಕಿತ್ತು. ತಾಂತ್ರಿಕ ಸಮಸ್ಯೆ ಕಾರಣಕ್ಕೆ ಟೇಕಾಫ್ ತಡವಾಯಿತು.

ಉದ್ಘಾಟನಾ ದಿನವಾದ ಕಾರಣ ವಿಮಾನ ಸಂಚಾರ ರದ್ದಾಗಬಾರದು ಎಂಬ ಉದ್ದೇಶದಿಂದ ಸಂಸದ ಡಾ.ಉಮೇಶ ಜಾಧವ ಅವರು ಬೆಂಗಳೂರಿನಲ್ಲಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರನ್ನು ಸಂಪರ್ಕಿಸಿ ಕೊಚ್ಚಿ–ಬೆಂಗಳೂರು ನಡುವಿನ ಸಂಚರಿಸುವ ವಿಮಾನ ಸೇವೆ ರದ್ದುಪಡಿಸಿ ರಾತ್ರಿ 10.40ಕ್ಕೆ ಬೆಂಗಳೂರಿಂದ ಟೇಕಾಫ್‌ ಆಗಲು ಸಹಕರಿಸಿದರು. ಕೊನೆಗೆ 11.40ಕ್ಕೆ ಕಲಬುರಗಿಗೆ ವಿಮಾನ ಲ್ಯಾಂಡ್ ಆಯಿತು. ಖುದ್ದು ಸಂಸದರೇ ಉದ್ಘಾಟನಾ ವಿಮಾನದಲ್ಲಿ ಪ್ರಯಾಣಿಕರೊಂದಿಗೆ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ ಮಾಡಿದರು.

54 ಜನ ಬಂದಿಳಿದರು: ಕಲಬುರಗಿಯಿಂದ ಬೆಂಗಳೂರಿಗೆ ಪ್ರಾರಂಭಗೊಂಡ 70 ಆಸನಗಳ ಅಲಾಯನ್ಸ್ ಏರ್ ವಿಮಾನದಲ್ಲಿ ಬೆಂಗಳೂರಿನಿಂದ ಕಲಬುರಗಿಗೆ 68 ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ವಿಮಾನ ವಿಳಂಬವಾದ ಪರಿಣಾಮ 11 ಟಿಕೆಟ್‌ಗಳು ಕೊನೆಯ ಕ್ಷಣದಲ್ಲಿ ರದ್ದುಗೊಂಡವು.

ಕಲಬುರಗಿಯಿಂದ ಬೆಂಗಳೂರಿಗೆ ಸಂಚರಿಸಲು 68 ಪ್ರಯಾಣಿಕರು ಕಾದು ಕಾದು ಸುಸ್ತಾದರು. ಇಬ್ಬರು ಪ್ರಯಾಣಿಕರು ಪ್ರಯಾಣ ಮುಂದೂಡಿದರೆ, 7 ಜನರು ಟಿಕೆಟ್ ರದ್ದುಪಡಿಸಿ ವಾಪಸ್ ಮನೆಗೆ ಮರಳಿದರು. ಮಧ್ಯರಾತ್ರಿ 12.30ಕ್ಕೆ ಬೆಂಗಳೂರಿನತ್ತ ಹೊರಟ ವಿಮಾನದಲ್ಲಿ ಕಲಬುರಗಿಯಿಂದ 59 ಪ್ರಯಾಣಿಕರು ಪ್ರಯಾಣಿಸಿದರು ಎಂದು‌ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದರು.

ವಾಟರ್‌ ಸೆಲ್ಯೂಟ್ ಮೂಲಕ ಸ್ವಾಗತ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಝಗಮಗಿಸುವ ಬೆಳಕಿನ ನಡುವೆ ಮುಖ್ಯ ಕ್ಯಾಪ್ಟನ್ ಮರ್ವಿನ್ ವಿಲ್ಲಾಲಾಬೋಸ್ ಹಾಗೂ ಕೋ ಪೈಲೆಟ್ ಅಕ್ಷಯ್ ಭೂಪ್ತಾನಿ ಅವರು ವಿಮಾನವನ್ನು ಭೂಸ್ಪರ್ಶ ಮಾಡಿದಾಗ ಅಗ್ನಿಶಾಮಕ ವಾಹನಗಳಿಂದ ವಾಟರ ಸೆಲ್ಯೂಟ್ ಮೂಲಕ ಸಂಭ್ರಮದಿಂದ ಸ್ವಾಗತಿಸಲಾಯಿತು.

ಸಂಸದರ ಜತೆಗೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಮರನಾಥ ಪಾಟೀಲ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸೇರಿ 54 ಜನ ಆಗಮಿಸಿದರು.

ರಾತ್ರಿ ವಿಮಾನ ಕಲಬುರಗಿಗೆ ಬಂದಾಗ ಕೇಕ್‌ ಕತ್ತರಿಸಿ ಸಂಭ್ರಮಿಸಲಾಯಿತು. ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಮಹೇಶ್ ಚಿಲ್ಕಾ, ಬಿಜೆಪಿ ಮುಖಂಡರಾದ ಮಾಲೀಕಯ್ಯ ಗುತ್ತೇದಾರ, ಶಿವಕಾಂತ ಮಹಾಜನ, ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯ ನರಸಿಂಹ ಮೆಂಡನ್, ಆಕಾಶ್, ಗುರುರಾಜ್ ಭಂಡಾರಿ, ವಿಮಾನ ನಿಲ್ದಾಣದ ವಿಭಾಗದ ಡಿಜಿಎಂ ಬಸವರಾಜ್, ಸಹಾಯಕ ಟ್ರಾಫಿಕ್ ಕಂಟ್ರೋಲರ್ ದ್ರುಪದಲ್ ಬ್ರಹ್ಮಚಾರಿ ಉಪಸ್ಥಿತರಿದ್ದರು.

‘ಅಭಿವೃದ್ಧಿಯ ಮೈಲಿಗಲ್ಲು’

‘ಇದು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಮೈಲಿಗಲ್ಲು ಮತ್ತು ಐತಿಹಾಸಿಕ ದಿನವಾಗಿದೆ’ ಎಂದು ಸಂಸದ ಸದಸ್ಯ ಡಾ.ಉಮೇಶ ಜಾಧವ ಸಂತಸ ವ್ಯಕ್ತಪಡಿಸಿದರು. ‘ಬಹುದಿನಗಳ ಕನಸು ಈಗ ಸಾಕಾರಗೊಂಡಿದ್ದು ಸಂಸದನಾಗಿದ್ದಕ್ಕೆ ಧನ್ಯತಾಭಾವ ಬಂದಿದೆ. ಈ ಸೇವೆ ಯಶಸ್ವಿಯಾಗಲು ಪ್ರಯಾಣಿಕರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಮುಂಬೈ ಮಂಗಳೂರು ದೆಹಲಿ ಮುಂತಾದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಪ್ರಾರಂಭಿಸಲು ವಿಮಾನಯಾನ ಖಾತೆ ಸಚಿವರಾದ ಜ್ಯೋತಿರಾಧಿತ್ಯ ಸಿಂಧ್ಯ ಅವರೊಂದಿಗೆ ಬುಧವಾರವೇ ಮಾತುಕತೆ ನಡೆಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು. ‘ಕಲ್ಯಾಣ ಕರ್ನಾಟಕದ ಜನರ ಬಹುದಿನಗಳ ಕನಸನ್ನು ಹಾಗೂ ಜನರ ಭಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದ ಅವರು ‘ಸದ್ಯ ಪ್ರತಿ ಗುರುವಾರ ಸಂಚರಿಸುವ ಈ ವಿಮಾನ ಸೇವೆಯನ್ನು ವಾರಪೂರ್ತಿ ಸಂಚರಿಸುವಂತೆ ಮಾಡಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು. ತಾಂತ್ರಿಕ ವಿಳಂಬ ಕಂಡರೂ ವಿಮಾನ ಸಂಚಾರ ಯಶಸ್ವಿ ಮಾಡಲು ಶ್ರಮಿಸಿದ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಮಹೇಶ್ ಚಿಲ್ಕಾ ಸೇರಿದಂತೆ ನಿಲ್ದಾಣದ ಸಿಬ್ಬಂದಿಗೆ ಜಾಧವ ಅಭಿನಂದನೆ ಸಲ್ಲಿಸಿದರು.

ಮೊದಲ ಬಾರಿಗೆ ನೈಟ್ ಲ್ಯಾಂಡಿಂಗ್ ಕಾರ್ಯಾಚರಣೆಯ ಪ್ರಯಾಣಿಕರಿಗೆ ಸಂಸದ ಡಾ.ಉಮೇಧ ಜಾಧವ ಅವರು ಬೋರ್ಡಿಂಗ್ ಟಿಕೆಟ್ ನೀಡಿ ಶುಭ ಹಾರಿಸಿದರು. ಈ ವೇಳೆ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ ಬಿಜೆಪಿ ಮುಖಂಡರಾದ ಮಾಲೀಕಯ್ಯ ಗುತ್ತೇದಾರ ಅಮರನಾಥ ಪಾಟೀಲ ಶಿವಕಾಂತ ಮಹಾಜನ ಉಪಸ್ಥಿತರಿದ್ದರು
ಮೊದಲ ಬಾರಿಗೆ ನೈಟ್ ಲ್ಯಾಂಡಿಂಗ್ ಕಾರ್ಯಾಚರಣೆಯ ಪ್ರಯಾಣಿಕರಿಗೆ ಸಂಸದ ಡಾ.ಉಮೇಧ ಜಾಧವ ಅವರು ಬೋರ್ಡಿಂಗ್ ಟಿಕೆಟ್ ನೀಡಿ ಶುಭ ಹಾರಿಸಿದರು. ಈ ವೇಳೆ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ ಬಿಜೆಪಿ ಮುಖಂಡರಾದ ಮಾಲೀಕಯ್ಯ ಗುತ್ತೇದಾರ ಅಮರನಾಥ ಪಾಟೀಲ ಶಿವಕಾಂತ ಮಹಾಜನ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT