ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸವಾರರಿಗೆ ದುಃಸ್ವಪ್ನವಾದ ನಿಂಬರ್ಗಾ–ನಿಂಬಾಳ ರಸ್ತೆ

ರಸ್ತೆಯ ತುಂಬಾ ತಗ್ಗುಗಳು; ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹೈರಾಣ
Published 15 ಆಗಸ್ಟ್ 2024, 3:27 IST
Last Updated 15 ಆಗಸ್ಟ್ 2024, 3:27 IST
ಅಕ್ಷರ ಗಾತ್ರ

ಕಲಬುರಗಿ: ಆಳಂದ ತಾಲ್ಲೂಕಿನಿಂದ ಮಹಾರಾಷ್ಟ್ರ ಗಡಿಯನ್ನು ಸಂಪರ್ಕಿಸುವ ನಿಂಬರ್ಗಾ–ನಿಂಬಾಳ ಜಿಲ್ಲಾ ಮುಖ್ಯ ರಸ್ತೆಯ 22 ಕಿ.ಮೀ. ದೂರ ಕ್ರಮಿಸುವುದನ್ನು ನೆನೆಸಿಕೊಂಡು ಪ್ರಯಾಣಿಕರು ಬೆಚ್ಚಿ ಬೀಳುವ ಪರಿಸ್ಥಿತಿ ಎದುರಾಗಿದೆ. 

ಇಡೀ ರಸ್ತೆಯ ತುಂಬಾ ಭಾರಿ ಗಾತ್ರದ ತಗ್ಗುಗಳು ಬಿದ್ದಿದ್ದು, ಇದೇ ರಸ್ತೆಯನ್ನು ನಂಬಿಕೊಂಡಿರುವ ನಿಂಬಾಳ, ಮಾದನಹಿಪ್ಪರಗಾ ಹೋಬಳಿಯ ಸುಮಾರು 30ಕ್ಕೂ ಅಧಿಕ ಗ್ರಾಮಗಳ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದ್ದು, ಈ ರಸ್ತೆಯ ನಿರ್ವಹಣೆಯ ಜವಾಬ್ದಾರಿ ಹೊತ್ತ ಇಲಾಖೆಯು ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕಲಬುರಗಿ–ಆಳಂದ ರಸ್ತೆಯ ಪಟ್ಟಣ ಕ್ರಾಸ್‌ನಿಂದ ನಿಂಬರ್ಗಾ ಗ್ರಾಮ ತಲುಪಿದರೆ ರಸ್ತೆಯ ಯಮಯಾತನೆ ಶುರುವಾಗುತ್ತದೆ. ಬೊಮ್ಮನಹಳ್ಳಿ, ವೈಜಾಪುರ, ಹಿತ್ತಲಶಿರೂರ, ಮಾಡಿಯಾಳ, ಯಳಸಂಗಿ, ಹಡಲಗಿ, ಬೆಣ್ಣೆ ಶಿರೂರ, ಮಾದನಹಿಪ್ಪರಗಿ, ರೇವೂರ, ಕುಲಾಲಿ, ದುಧನಿಯತ್ತ ತೆರಳುವವರು ಈ ರಸ್ತೆಯನ್ನು ಬಳಸಿಕೊಂಡು ಸಾಗಬೇಕಾಗುತ್ತದೆ.

ಆಳಂದ ತಾಲ್ಲೂಕಿನ ರೈತರು ತೋಟಗಾರಿಕೆಯನ್ನು ನಂಬಿಕೊಂಡಿದ್ದು, ತಾವು ಬೆಳೆದ ಹಣ್ಣು, ತರಕಾರಿಗಳನ್ನು ನಿತ್ಯ ಕಲಬುರಗಿಗೆ ತರುತ್ತಾರೆ. ಇಂತಹ ಕೆಟ್ಟ ರಸ್ತೆಯಲ್ಲೇ ಸರಕು ತುಂಬಿಕೊಂಡು ಬರುವುದರಿಂದ ವಾಹನ ಹಲವು ಬಾರಿ ಕೆಟ್ಟು ನಿಂತಿದೆ. ಇದರಿಂದಾಗಿ ವಾಹನ ದುರಸ್ತಿಗೇ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ ಎನ್ನುತ್ತಾರೆ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಕೀಲ ಭೀಮಾಶಂಕರ ಮಾಡಿಯಾಳ.

ಭೀಮಾಶಂಕರ ಮಾಡಿಯಾಳ
ಭೀಮಾಶಂಕರ ಮಾಡಿಯಾಳ
ನಿಂಬರ್ಗಾ ಮಾದನಹಿಪ್ಪರಗಾ ಹೋಬಳಿಗಳ 30ಕ್ಕೂ ಅಧಿಕ ಗ್ರಾಮಗಳ ಪ್ರಮುಖ ಆಸರೆಯಾದ ಈ ರಸ್ತೆಯನ್ನು ಶೀಘ್ರವೇ ದುರಸ್ತಿ ಮಾಡಬೇಕು. ರಸ್ತೆ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು
-ಭೀಮಾಶಂಕರ ಮಾಡಿಯಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ಕಿಸಾನ್ ಸಭಾ
ಈ ರಸ್ತೆಯಲ್ಲಿ ಗರ್ಭಿಣಿಯರು ಪ್ರಯಾಣಿಸಿದರೆ ಅಲ್ಲಿಯೇ ಹೆರಿಗೆಯಾಗುತ್ತದೆ. ಕಳೆದ 10 ವರ್ಷಗಳಿಂದ ಈ ರಸ್ತೆಗೆ ಡಾಂಬರ್ ಹಾಕಿಲ್ಲ. ಹೀಗಾದರೆ ಸುರಕ್ಷಿತ ಸಂಚಾರ ಹೇಗೆ ಸಾಧ್ಯ?
ಸೈಫನ್‌ಸಾಬ್ ಜಮಾದಾರ ಗ್ರಾ.ಪಂ. ಸದಸ್ಯ ಮಾಡಿಯಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT