ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟೆರೋಗದಿಂದ ತೊಗರಿ ಬೆಳೆ ಹಾನಿ: ಪರಿಹಾರ ಒದಗಿಸುವ ಭರವಸೆ ನೀಡಿದ ನಿರಾಣಿ

ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ
Last Updated 30 ಡಿಸೆಂಬರ್ 2022, 13:24 IST
ಅಕ್ಷರ ಗಾತ್ರ

ಕಲಬುರಗಿ: ‘ನೆಟೆರೋಗದಿಂದ ಹಾಳಾಗಿರುವ ತೊಗರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುವುದು’ ಎಂದು ಬೃಹತ್ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿಯ ಬೂತ್ ವಿಜಯ ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೊಗರಿ ನೆಟೆರೋಗ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿದೆ.‌ ಆದರೆ ಯಾವ ರೀತಿ ಪರಿಹಾರ ನೀಡಬೇಕು ಎಂಬುದು ಅಂತಿಮವಾಗಿಲ್ಲ. ವಿಶೇಷ ಪ್ಯಾಕೇಜ್ ಕೊಡಬೇಕೋ, ಪರಿಹಾರ ನೀಡಬೇಕೆಂಬುದನ್ನು ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ನೆಟೆರೋಗದಿಂದ ತೊಗರಿ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಇನ್ನೊಮ್ಮೆ ವರದಿ ತರಿಸಿಕೊಳ್ಳಲಾಗುವುದು. ಈ ಭಾಗದಲ್ಲಿ ಬೆಳೆಯುವ ತೊಗರಿ ಬೆಳೆ ಹಾನಿಯಾಗಿರುವುದರಿಂದ ರೈತ ಸಂಕಷ್ಟಕ್ಕೆ ಒಳಗಾಗಿರುವುದು ಸರ್ಕಾರದ ಗಮನದಲ್ಲಿದೆ’ ಎಂದು ಹೇಳಿದರು.

‘ವೀರಶೈವ–ಲಿಂಗಾಯತ ಎಲ್ಲ ಒಳಪಂಗಡಗಳು ಅಂದರೆ 3ಬಿಯಲ್ಲಿದ್ದ ಸಮುದಾಯಗಳು ಹೊಸ ಕೆಟಗರಿ 2ಡಿಯಲ್ಲಿ ಸೇರಲಿವೆ. ಈ ಮೊದಲು ಒಂದೇ ಸಮುದಾಯ ಎರಡು ಪ್ರವರ್ಗದಲ್ಲಿ ಬರುತ್ತವೆ ಎಂಬ ಗೊಂದಲವಿತ್ತು.‌ ಆದರೆ ಹೊಸ ಪ್ರವರ್ಗದಲ್ಲಿ ಇದಕ್ಕೆ ಅವಕಾಶವಿಲ್ಲ.‌ ಹೊಸ ಪ್ರವರ್ಗ ಸೃಷ್ಟಿಯಿಂದಾಗಿ ವೀರಶೈವ–ಲಿಂಗಾಯತರ ಮೀಸಲಾತಿ ಪ್ರಮಾಣ 6ರಿಂದ 7ಕ್ಕೆ ಹೆಚ್ಚಳವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ನಮಗೀಗ ಪರೀಕ್ಷೆ ಸಮಯ.‌ ಇದಕ್ಕಾಗಿಯೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾಯದರ್ಶಿ ಬಿ.ಎಲ್. ‌ಸಂತೋಷ್ ಸಭೆ ನಡೆಸಲು ಕಲಬುರಗಿಗೆ ಬಂದಿದ್ದಾರೆ. ಎಲ್ಲ 224 ಕ್ಷೇತ್ರಗಳನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT