ಮಂಗಳವಾರ, ಜೂನ್ 28, 2022
28 °C
ಇಂದು ಬೆಳಿಗ್ಗೆ 10 ಗಂಟೆಯವರೆಗೂ ಅಗತ್ಯ ವಸ್ತು ಖರೀದಿಸಲು ಅವಕಾಶ

ಕಲಬುರ್ಗಿ: ವಾರಾಂತ್ಯದ ಕಠಿಣ ಲಾಕ್‌ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಇಳಿಮುಖ ಆಗುತ್ತಿರುವುದರಿಂದ ಜಿಲ್ಲಾಡಳಿತ ಇದೇ 3ರಿಂದ ಆರಂಭವಾಗಬೇಕಿದ್ದ ವಾರಾಂತ್ಯದ ಕಠಿಣ ಲಾಕ್‌ಡೌನ್ ಕೈಬಿಟ್ಟಿದೆ. ಹೀಗಾಗಿ ಎಂದಿನಂತೆ ಬೆಳಿಗ್ಗೆ 10ರವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ‘ವಾರಾಂತ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ಮಾಡುತ್ತಿಲ್ಲ. ಬದಲಿಗೆ ಮೊದಲು ಸರ್ಕಾರ ಘೋಷಣೆ ಮಾಡಿರುವಂತೆ ಪ್ರತಿದಿನ ಬೆಳಿಗ್ಗೆ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರಲಿದೆ. ಹಾಲು, ಮೊಟ್ಟೆ, ಹೋಟೆಲ್‌ಗಳಲ್ಲಿ ಊಟ ಮತ್ತು ಉಪಹಾರ ಪಾರ್ಸೆಲ್ ಸೇವೆ ಲಭ್ಯವಿರಲಿವೆ. ಆಸ್ಪತ್ರೆ, ಔಷಧಿ ಅಂಗಡಿಗಳು, ಆಂಬುಲೆನ್ಸ್, ಅಗ್ನಿಶಾಮಕ, ಪೆಟ್ರೋಲ್ ಪಂಪ್ ಹಾಗೂ ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಎಂದಿನಂತೆ ಕಾರ್ಯನಿರ್ವಹಿಸಲಿವೆ. ದಾಲ್ ಮಿಲ್ ಒಳಗಿನ ಚಟುವಟಿಕೆಗಳಿಗೆ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಕಾರ್ಯನಿರ್ವಹಣೆ ಮಾಡಬಹುದು’ ಎಂದಿದ್ದಾರೆ.

ಸರ್ಕಾರದ ಲಾಕ್‌ಡೌನ್ ಜಾರಿಯಾದ ವಾರದ ಅಂತ್ಯದಲ್ಲಿ ಮೂರು ಹಾಗೂ ಕಳೆದ ವಾರ ಗುರುವಾರದಿಂದ ಭಾನುವಾರದವರೆಗೆ ಕಠಿಣ ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ಕಲ್ಪಿಸಿರಲಿಲ್ಲ. ಇದರಿಂದ ಪ್ರಕರಣ ಸಂಖ್ಯೆ ಕಡಿಮೆಯಾಗಿತ್ತು.

‘ಜನರು ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ ಎಂದು ಮೈಮರೆಯಬಾರದು. ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸಬೇಕು, ಅಗತ್ಯ ವಸ್ತುಗಳ ಖರೀದಿ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜ್ಯೋತ್ಸ್ನಾ ಎಚ್ಚರಿಸಿದ್ದಾರೆ.

ಲಸಿಕೆ ಪಡೆಯಲು ಸೂಚನೆ
ಕಲಬುರ್ಗಿ:
ಜಿಲ್ಲೆಯ 19ರಿಂದ 44 ವರ್ಷದ ವಯೋಮಾನದವರಿಗೆ (ಸರ್ಕಾರ ಗುರುತಿಸಿದ ಆದ್ಯತೆ ಗುಂಪುಗಳಿಗೆ) ಆದ್ಯತೆ ಮೇರೆಗೆ ಇದೇ ಜೂನ್ 3ರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಎಲ್ಲಾ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕಲಬುರ್ಗಿಯ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

ಅದರಂತೆ 45 ವರ್ಷ ಮೇಲ್ಪಟ್ಟವರಿಗೆ ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ನಗರದ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇಎಸ್ಐಸಿ ಆಸ್ಪತ್ರೆ ಹಾಗೂ ಕಲಬಬುರ್ಗಿಯ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಕೋವ್ಯಾಕ್ಸಿನ್ ಎರಡನೇ ಡೋಸ್‌ನ್ನು ನಗರದ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ, ಇಎಸ್ಐಸಿ ಆಸ್ಪತ್ರೆ, ನಗರದ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು