ಸೋಮವಾರ, ಜನವರಿ 25, 2021
19 °C
ನಾಲ್ಕು ದಿನಗಳ ಎನ್‌ಎಸ್‌ಎಸ್‌ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ

ಕಲಬುರ್ಗಿ: ವಿ.ವಿ.ಗೆ ಹೊಸ ಕಳೆ ತಂದ ಯಕ್ಷ, ಯಕ್ಷಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಭಾರಿ ಗಾತ್ರದ ಡೊಳ್ಳು ಹೊತ್ತು ಬಾರಿಸುತ್ತಲೇ ಕುಣಿಯುವ ಹಮ್ಮೀರರು, ಕರಾವಳಿ, ಮಲೆನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಅಡುಗೆ ಎಲೆಯ ಟೋಪಿ ಹಾಕಿದ್ದ ತರುಣಿಯರು, ಯಕ್ಷಗಾನ, ಹುಲಿ ವೇಷದ ಮೂಲಕ ತುಳು ಸಂಸ್ಕೃತಿಯನ್ನು ಕಲ್ಯಾಣ ನಾಡಿನಲ್ಲಿ ಬಿಂಬಿಸಲು ಬಂದ ಯುವಕ, ಯುವತಿಯರು, ಅಕ್ಕಮಹಾದೇವಿಯ ವೇಷ ಧರಿಸಿ ಗಮನ ಸೆಳೆದ ಯುವತಿ...

–ಹೀಗೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಯಕ್ಷ–ಯಕ್ಷಿಯರು ಹೊಸ ಕಿನ್ನರ ಲೋಕವನ್ನೇ ಸೃಷ್ಟಿಸಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ರಾಜ್ಯ ಎನ್‌ಎಸ್ಎಸ್ ಕೋಶ, ಗುಲಬರ್ಗಾ ವಿ.ವಿ.ಯ ಎನ್‌ಎಸ್‌ಎಸ್‌ ಕೋಶದಿಂದ ಆಯೋಜಿಸಿರುವ ನಾಲ್ಕು ದಿನಗಳ ರಾಜ್ಯಮಟ್ಟದ ಯುವಜನೋತ್ಸವಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕಿದರು.

ವಿ.ವಿ. ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ಎನ್‌ಎಸ್‌ಎಸ್‌ ಸ್ವಯಂ ಸೇವಕರೊಂದಿಗೆ ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟೆ, ವಿ.ವಿ. ಹಂಗಾಮಿ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ, ಪ್ರಭಾರ ಕುಲಸಚಿವ (ಆಡಳಿತ), ಮೌಲ್ಯಮಾಪನ ಕುಲಸಚಿವ ಪ್ರೊ. ಸಂಜೀವಕುಮಾರ ಕೆ.ಎಂ., ಎನ್‌ಎಸ್‌ಎಸ್‌ ಅನುಷ್ಠಾನ ಅಧಿಕಾರಿ ಪೂರ್ಣಿಮಾ ಜೋಗಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ವಿ.ವಿ. ಕಾರ್ಯಸೌಧದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗುರುರಾಜ ಹೊಸಕೋಟೆ, ‘ಉತ್ಸವಗಳು, ಆಟಗಳ ಮುಖೇನ ನಮ್ಮನ್ನು ನಾವು ಪುನರ್ ಸ್ಥಾಪಿಸಿಕೊಳ್ಳಬೇಕು. ಸುಳ್ಳು ಮತ್ತು ಅಸತ್ಯಗಳು ಆರಂಭಿಕ ಹಂತದಲ್ಲಿ ವಿಜೃಂಭಿಸಿದರೂ, ಅಂತಿಮವಾಗಿ ಸತ್ಯ ಮತ್ತು ನ್ಯಾಯಕ್ಕೆ, ಒಳ್ಳೆತನಕ್ಕೆ ಗೆಲುವು ಇದೆ. ಅದಕ್ಕಾಗಿ ಸುಳ್ಳು, ಅನ್ಯಾಯ, ಕೆಡುಕಿನ ಹಾದಿ ಹಿಡಿಯದೇ ಸತ್ಯದ ದಾರಿಯಲ್ಲಿ ಬದುಕಿನ ಅನ್ವೇಷಣೆ ಮಾಡಬೇಕು’ ಎಂದರು.

ನಂತರ ‘ಶ್ರೀಕ್ಷೇತ್ರ ಮಾಡಾಕ ಹೊರಟೀವಿ...’, ‘ಮಗಾ ಹುಟ್ಯಾಯನವ್ವ ನನಗೊಬ್ಬ ಮಗಾ ಹುಟ್ಯಾನವ್ವ..’ ಮತ್ತು ‘ದುಡ್ಡು ಕೊಟ್ಟರೆ ಬೇಕಾದ್ದು  ಸಿಗತೈತಿ ಈ ಜಗದಗ ಕಾಣೋ, ಹಡದ ತಾಯಿನ ಕಳಕೊಂಡು ಬಿಟ್ಟರೆ ಮತ್ತೆ ಸಿಗುವಳೇನೊ’ ಹಾಡುಗಳನ್ನು ಹಾಡಿ ರಂಜಿಸಿದರು.

ಡಾ.ಪೂರ್ಣಿಮಾ ಜೋಗಿ ಮಾತನಾಡಿ, ‘ತ್ಯಾಗ, ಸೇವೆಗಳು ಎರಡು ಪ್ರಮುಖ ಮೌಲ್ಯಗಳು. ತ್ಯಾಗವೆಂದರೆ ಸೈನಿಕರು ನೆನಪಾದರೆ ಸೇವೆ ಎಂದರೆ ಎನ್‌ಎಸ್‌ಎಸ್‌ ನೆನಪಾಗುತ್ತದೆ. ಇವುಗಳನ್ನು ಮುಂದಿನ ತಲೆಮಾರಿಗೆ ನಾವು ಉಡುಗೊರೆ ನೀಡಬೇಕು’ ಎಂದರು.

ಎನ್‌ಎಸ್‌ಎಸ್‌ ಸಂಯೋಜಕ ಪ್ರೊ. ರಮೇಶ ಲಂಡನಕರ್ ಮಾತನಾಡಿ, ರಾಜ್ಯದ 52 ವಿಶ್ವವಿದ್ಯಾಲಯದ ಸ್ವಯಂಸೇವಕರು ಯುವಜನೋತ್ಸವದಲ್ಲಿ ಭಾಗವಹಿಸಬೇಕಿತ್ತು. ಕೋವಿಡ್ ಕಾರಣದಿಂದ ಕೆಲ ವಿ.ವಿ.ಯವರು ಬಂದಿಲ್ಲ. ಬೆಂಗಳೂರು ವಿ.ವಿ. ಬೆಂಗಳೂರು ಕೇಂದ್ರ ವಿ.ವಿ. ಶಿವಮೊಗ್ಗದ ಕುವೆಂಪು ವಿ.ವಿ., ಧಾರವಾಡದ ಕರ್ನಾಟಕ ವಿ.ವಿ, ಮಂಗಳೂರು ವಿ.ವಿ., ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ. ಸೇರಿದಂತೆ 20ಕ್ಕೂ ಅಧಿಕ ವಿ.ವಿ.ಯಿಂದ 80 ಸ್ಪರ್ಧಿಗಳು ಭಾಗವಹಿಸಿದ್ದಾರೆ. ನಾಲ್ಕು ದಿನಗಳವರೆಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು