ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಕಲಬುರಗಿಗೆ 98 ಸಾವಿರ ಜನ ಪ್ರಯಾಣ!

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಉತ್ತರ ನೀಡಿದ ಮಧ್ಯ ರೈಲ್ವೆ
Published 8 ಜೂನ್ 2023, 13:57 IST
Last Updated 8 ಜೂನ್ 2023, 13:57 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ನಗರ ಕಲಬುರಗಿಯಿಂದ ರಾಜಧಾನಿ ಬೆಂಗಳೂರು ಹಾಗೂ ಬೆಂಗಳೂರಿನಿಂದ ಕಲಬುರಗಿಗೆ ರೈಲಿನಲ್ಲಿ ತಿಂಗಳಿಗೆ 98 ಸಾವಿರ ಜನ ಪ್ರಯಾಣಿಸುತ್ತಾರೆ ಎಂಬ ಮಾಹಿತಿಯನ್ನು ಮಧ್ಯ ರೈಲ್ವೆಯು ನೀಡಿದೆ. ಇದರಿಂದಾಗಿ ಇನ್ನಷ್ಟು ರೈಲುಗಳು ಬೇಕು ಎಂಬ ಬೇಡಿಕೆಗೆ ಈ ಮಾಹಿತಿ ಪುಷ್ಟೀಕರಿಸಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆಯ ಮುಖಂಡ, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸುನೀಲ ಕುಲಕರ್ಣಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಮಧ್ಯ ರೈಲ್ವೆಯು ಈ ಮಾಹಿತಿಯನ್ನು ಹಂಚಿಕೊಂಡಿದೆ.

‍ಪ್ರಸ್ತುತ ಕಲಬುರಗಿ–ಬೆಂಗಳೂರು ಮಧ್ಯೆ ‘ಉದ್ಯಾನ ಎಕ್ಸ್ ಪ್ರೆಸ್’, ‘ಕರ್ನಾಟಕ ಎಕ್ಸ್‌ಪ್ರೆಸ್‌’, ‘ಬಸವ ಎಕ್ಸ್‌ಪ್ರೆಸ್‌’, ‘ಸೋಲಾಪುರ–ಹಾಸನ ಎಕ್ಸ್‌ಪ್ರೆಸ್‌’ ಮತ್ತು ‘ಕೊಯಮತ್ತೂರು ಎಕ್ಸ್‌ಪ್ರೆಸ್‌’ ರೈಲುಗಳು ಸಂಚರಿಸುತ್ತಿವೆ. ಅದರಲ್ಲಿಯೂ ಸೋಲಾಪುರ–ಹಾಸನ, ಉದ್ಯಾನ್ ಮತ್ತು ಬಸವ ಎಕ್ಸ್‌ಪ್ರೆಸ್ ರೈಲುಗಳಿಗೆ ವಿಪರೀತ ದಟ್ಟಣೆ ಇರುತ್ತದೆ.

ಪ್ರತಿ ತಿಂಗಳೂ ಈ ರೈಲುಗಳಲ್ಲಿ ಬೆಂಗಳೂರಿನಿಂದ ಕಲಬುರಗಿಗೆ 73 ಸಾವಿರ ಜನರು ಮುಂಗಡ ಬುಕಿಂಗ್ ಕಾಯ್ದಿರಿಸಿ ಸಂಚರಿಸುತ್ತಾರೆ. 25 ಸಾವಿರ ಜನರು ಬುಕಿಂಗ್ ಇಲ್ಲದೇ ಜನರಲ್ ಟಿಕೆಟ್ ಪಡೆದು ಪ್ರಯಾಣಿಸುತ್ತಾರೆ. ಒಟ್ಟಾರೆ 98 ಸಾವಿರ ಜನರು ಸಂಚರಿಸುತ್ತಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪ್ರಕಾರ ಸರಾಸರಿ ನಿತ್ಯ 3,262 ಜನ ಪ್ರಯಾಣಿಸಿದಂತಾಗುತ್ತದೆ.

ಕಲಬುರಗಿಯಿಂದ ಬೆಂಗಳೂರಿಗೆ 61 ಸಾವಿರ ಪ್ರಯಾಣಿಕರು (39 ಸಾವಿರ ಜನ ಮುಂಗಡ ಬುಕಿಂಗ್, 22 ಸಾವಿರ ಜನ ಜನರಲ್ ಟಿಕೆಟ್) ಪ್ರಯಾಣಿಸುತ್ತಾರೆ. ನಿತ್ಯ ಸರಾಸರಿ 2,027 ಜನ ಪ್ರಯಾಣಿಸಿದಂತಾಗುತ್ತದೆ.

ಬಾಗಲಕೋಟೆಯಿಂದ ಕಲಬುರಗಿ ಮೂಲಕ ಬೆಂಗಳೂರಿಗೆ ತೆರಳುವ ಬಸವ ಎಕ್ಸ್ ಪ್ರೆಸ್ ರೈಲಿಗೆ ಕಲಬುರಗಿಯಲ್ಲಿ ಕೇವಲ 10 ಸೀಟುಗಳನ್ನು ಬುಕ್ ಮಾಡಲು ಅವಕಾಶವಿದೆ. ಅತಿ ಹೆಚ್ಚು ಪ್ರಯಾಣಿಕರು ಇಲ್ಲಿಯೇ ಹತ್ತಿದರೂ ಟಿಕೆಟ್ ಸಿಗುವುದಿಲ್ಲ. ಹೀಗಾಗಿ, ಅನಿವಾರ್ಯವಾಗಿ ಹುಟಗಿಯಿಂದ ಬುಕ್ ಮಾಡಬೇಕಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸುನೀಲ ಕುಲಕರ್ಣಿ.

ಇತ್ತೀಚೆಗೆ ಬೀದರ್‌ ಮೂಲಕ ಬೆಂಗಳೂರಿಗೆ ಸಂಚರಿಸುವ ನಾಂದೇಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಲೀಪರ್ ಬೋಗಿಯಲ್ಲಿ ಜನರು ಕೆಳಗೆ ಮಲಗಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಹೀಗಾಗಿ, ಹೆಚ್ಚುವರಿ ಹೊಸ ರೈಲುಗಳನ್ನು ಆರಂಭಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ.

ಸುನೀಲ ಕುಲಕರ್ಣಿ
ಸುನೀಲ ಕುಲಕರ್ಣಿ

Quote - ತಿಂಗಳ ಮುಂಚೆಯೇ ಬುಕ್ ಮಾಡಿದರೂ ಟಿಕೆಟ್ ಸಿಗುವುದು ಖಾತ್ರಿ ಇಲ್ಲ. ಆದ್ದರಿಂದ ಕಲಬುರಗಿಯಿಂದ ಬೆಂಗಳೂರಿಗೆ ಎರಡು ಹಾಗೂ ಬೀದರ್‌ನಿಂದ ಬೆಂಗಳೂರಿಗೆ ಒಂದು ಹೊಸ ರೈಲನ್ನು ಆರಂಭಿಸಬೇಕು ಸುನೀಲ ಕುಲಕರ್ಣಿ ಕ.ಕ. ಅಭಿವೃದ್ಧಿ ವೇದಿಕೆ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT