ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕ್ಫ್ ಆಸ್ತಿ ಖಾತಾ ಅಪ್‌ಡೇಟ್‌ಗೆ ತಿಂಗಳ ಗಡುವು: ಸಚಿವ ಜಮೀರ ಅಹ್ಮದ್

Published : 19 ಸೆಪ್ಟೆಂಬರ್ 2024, 15:39 IST
Last Updated : 19 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ಕಲಬುರಗಿ: ‘ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಖಾತಾ ಅಪ್‌ಡೇಟ್‌ ಕೆಲಸ ಮುಂದಿನ ಒಂದು ತಿಂಗಳೊಳಗೆ ಮುಗಿಸಬೇಕು’ ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ವಸತಿ ಸಚಿವ ಬಿ.ಜೆಡ್.ಜಮೀರಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಗಡುವು ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ಕಲಬುರಗಿ ಜಿಲ್ಲೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 2,566, ನಗರ ಸ್ಥಳೀಯ ಸಂಸ್ಥೆಗಳಲ್ಲಿ 572 ಹಾಗೂ ಆರ್.ಡಿ.ಪಿ.ಆರ್. ಕಚೇರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಅರ್ಜಿಗಳು ಬಾಕಿ ಇವೆ. ಬಹಳ ವರ್ಷಗಳಿಂದ ಈ ಕಾರ್ಯ ನಾನಾ ಕಾರಣಕ್ಕೆ ನನೆಗುದಿಗೆ ಬಿದ್ದಿದ್ದು, ಇದನ್ನು ಆದ್ಯತೆ ಮೇಲೆ ಮುಗಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

‘ರಾಜ್ಯದಲ್ಲಿ 1.08 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಇದರಲ್ಲಿ 85 ಸಾವಿರ ಎಕರೆ ಪ್ರದೇಶ ಒತ್ತುವರಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 21,440 ಎಕರೆ ಆಸ್ತಿ ಪೈಕಿ 3,610 ಮತ್ತು ಯಾದಗಿರಿ ಜಿಲ್ಲೆಯಲ್ಲಿ 6,194 ಪೈಕಿ 123 ಎಕರೆ ಆಸ್ತಿ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಲು ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಹಕಾರ ಅತ್ಯಗತ್ಯವಾಗಿದೆ’ ಎಂದರು.

‘ವಕ್ಫ್ ಆಸ್ತಿ ಸಾರ್ವಜನಿಕರು ಮುಸ್ಲಿಂ ಸಮಾಜಕ್ಕೆ ನೀಡಿದ ದೇಣಿಗೆ ಆಸ್ತಿಯಾಗಿದೆ. ಈ ಆಸ್ತಿ ಸಂರಕ್ಷಿಸುವುದು ಪುಣ್ಯದ ಕೆಲಸ. ಈ ಕುರಿತು ಸಮನ್ವಯತೆ ಸಾಧಿಸಬೇಕು’ ಎಂದು ವಕ್ಫ್ ಅಧಿಕಾರಿಗಳಾದ ಕಲಬುರಗಿಯ ಹಜರತ್ ಅಲಿ ಮತ್ತು ಯಾದಗಿರಿಯ ಜರೀನಾ ಬೇಗಂ ಅವರಿಗೆ ಖಡಕ್ ಸೂಚನೆ ನೀಡಿದರು.

‘ಬುಧವಾರ ಕಲಬುರಗಿಯಲ್ಲಿ ವಕ್ಫ್ ಅದಾಲತ್ ನಡೆಸಿದ್ದು, ಕಲಬುರಗಿ ಜಿಲ್ಲೆಯಿಂದ 368 ಅರ್ಜಿ ಸ್ವೀಕರಿಸಲಾಗಿದೆ. ಇದರಲ್ಲಿ 100 ಒತ್ತುವರಿ, 55 ಖಬರಸ್ತಾನ್ ಬೇಡಿಕೆ ಹಾಗೂ ಇತರೆ ವಿಷಯಕ್ಕೆ 213 ಸೇರಿವೆ. ಅದೇ ರೀತಿ ಯಾದಗಿರಿ ಜಿಲ್ಲೆಯಿಂದ ಸಲ್ಲಿಕೆಯಾದ 82 ಅರ್ಜಿಯಲ್ಲಿ 38 ಅರ್ಜಿ ಒತ್ತುವರಿ, 33 ಖಬರಸ್ತಾನ್ ಬೇಡಿಕೆ ಹಾಗೂ ಉಳಿದ 11 ಅರ್ಜಿಗಳು ಭೂಮಿ ಮಂಜೂರಾತಿ, ಖಾತಾ ಅಪ್‌ಡೇಟ್, ಸರ್ವೆ ಸಮಸ್ಯೆಗಳಿಗೆ ಸಂಬಂಧಿಸಿವೆ. ಇವುಗಳನ್ನೂ ಆದ್ಯತೆ ಮೇಲೆ ಜಿಲ್ಲಾಧಿಕಾರಿ ಗಮನಹರಿಸಬೇಕು’ ಎಂದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಕೆ.ಅನ್ವರ್ ಬಾಷಾ, ಯಾದಗಿರಿ ಜಿಲ್ಲಾಧಿಕಾರಿ ಬಿ.ಸುಶೀಲಾ, ಕಲಬುರಗಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕನಿಕಾ ಸಿಕ್ರಿವಾಲ್, ಯಾದಗಿರಿ ಹೆಚ್ಚುವರಿ ಎಸ್ಪಿ ಧರಣೇಶ, ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರ್ಡಿಯಾ, ಕಲಬುರಗಿ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ವಕ್ಫ್ ಬೋರ್ಡ್ ಸಿಇಒ ಜಿಲಾನಿ ಮೊಕಾಶಿ, ಕಲಬುರಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯದ್ ಹಬೀಬ್ ಸರ್ಮಸ್ತ್, ಯಾದಗಿರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಜಹಿರುದ್ದಿನ್ ಸವೆರಾ ಸೇರಿದಂತೆ ಎರಡು ಜಿಲ್ಲೆಗಳ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕಿನ ತಹಶೀಲ್ದಾರರು, ಎಡಿಎಲ್‌ಆರ್, ಡಿಡಿಎಲ್‌ಆರ್, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

‘ಖಬರಸ್ತಾನ್ ಬೇಡಿಕೆ ಪರಿಶೀಲಿಸಿ’
‘ಮುಸ್ಲಿಂ ಸಮುದಾಯದ ಜನರ ಅಂತ್ಯ ಸಂಸ್ಕಾರಕ್ಕೆ ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ಖಬರಸ್ತಾನಕ್ಕೆ ಜಮೀನು ಮಂಜೂರು ಮಾಡಬೇಕು’ ಎಂದು ಸಚಿವ ಜಮೀರಅಹ್ಮದ್ ಖಾನ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ‘ಜಿಲ್ಲೆಯಲ್ಲಿ ಖಬರಸ್ತಾನ್ ಮಂಜೂರಾತಿಗೆ ಸಲ್ಲಿಕೆಯಾದ 23 ಅರ್ಜಿಗಳಲ್ಲಿ ಈಗಾಗಲೆ ಎರಡು ಮಂಜೂರು ಮಾಡಲಾಗಿದೆ. ಉಳಿದವು ಇಲಾಖಾ ಹಂತದಲ್ಲಿ ಪರಿಶೀಲನೆಯಲ್ಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT