ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ: ಬಿಸಿಲಿನ ತಾಪಕ್ಕೆ ಜನ ಹೈರಾಣ

Published 9 ಮೇ 2024, 5:56 IST
Last Updated 9 ಮೇ 2024, 5:56 IST
ಅಕ್ಷರ ಗಾತ್ರ

ಯಡ್ರಾಮಿ: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು ಬಿಸಿಗಾಳಿಯ ಹೊಡೆತದಿಂದಲೂ ಜನರು ಹೈರಾಣಾಗಿದ್ದಾರೆ. ಬಿಸಿಲಿನ ಪ್ರಖರತೆ ಸಂಜೆ 5ಗಂಟೆಯಾದರೂ ಕಡಿಮೆಯಾಗುವುದಿಲ್ಲ. ಬಳಿಕವೂ ಬಿಸಿಗಾಳಿ ಇರುತ್ತದೆ.

ಝಳದಿಂದ ಪಾರಾಗಳು ಜನರು ಹಣ್ಣು, ಎಳನೀರು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಕೆಲವರು ಮರ–ಗಿಡಗಳ ನೆರಳನ್ನು ಆಶ್ರಯಿಸಿದರೆ ಮನೆಗಳಲ್ಲಿ ಫ್ಯಾನ್, ಕೂಲರ್, ಎಸಿ ಯಂತ್ರಗಳ ಬಳಕೆಯಂತೂ ನಿರಂತರವಾಗಿದೆ.

ಪಟ್ಟಣದ ಹಲವು ಬಡಾವಣೆಗಳಲ್ಲಿನ ಬಾವಿಗಳು ಬತ್ತುತ್ತಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಲಕ್ಷಣಗಳು ಕಾಣಿಸುತ್ತಿವೆ.

ಗ್ರಾಮಗಳಲ್ಲಿನ ಪರಿಸ್ಥಿತಿ ಇದಕ್ಕಿಂತ ಹೊರತಾಗಿಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಹೆಚ್ಚಾಗಿ ಕೈ ಕೊಡುತ್ತಿರುವುದರಿಂದ ಜನರು ಮರಗಳ ನೆರಳಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ. ಜಾನುವಾರು, ನಾಯಿ, ಕುದುರೆ, ಮೇಕೆ, ಕುರಿಹಿಂಡು ಸಹ ಮರ ನೆರಳನ್ನೇ ಆಶ್ರಯಿಸಿವೆ. ವೃದ್ಧರು ಹಾಗೂ ಮಕ್ಕಳ ಪಾಡು ಹೇಳತೀರದಾಗಿದೆ.

ಮಧ್ಯಾಹ್ನ ಡಾಂಬರ್‌ ರಸ್ತೆ ಬೆಂಕಿ ಉಂಡೆಗಳಂತಾಗಿ ದ್ವಿಚಕ್ರ ವಾಹನ ಸಾವಾರರಿಗೆ ಮಾರಕವಾಗಿದೆ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ಮಧ್ಯಾಹ್ನ ತಂಪು ಪಾನೀಯ ಅಂಗಡಿಗಳಲ್ಲಿ ಜನ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ನಿಂಬೆ ಪಾನಕ, ಜೀರಾ ಸೋಡಾ, ಕಬ್ಬಿನ ಹಾಲು, ಹಣ್ಣಿನ ಜ್ಯೂಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ₹40 ಇದ್ದ  ಎಳನೀರಿನ ದರ ₹50ಗೆ ಏರಿಕೆಯಾಗಿದೆ.

ಹೆಚ್ಚಿನ ರಾಸಾಯನಿಕಯುಕ್ತ ತಂಪು ಪಾನೀಯ ಸೇವೆಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದ್ದು ಅವುಗಳಿಂದ ದೂರವಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮುಂಜಾನೆ 11 ರಿಂದ ಸಂಜೆ4 ಗಂಟೆವರೆಗೆ ಹೊರಗೆ ಅಡ್ಡಾಡಬೇಡಿ. ಬಿಸಿಲಿನ ತೊಂದರೆಯಿಂದ ನಮ್ಮ ತಾಲ್ಲೂಕಿನಲ್ಲಿ ಆಸ್ಪತ್ರೆಗೆ ದಾಖಲಾಗಿಲ್ಲ. ಮುನ್ನೆಚ್ಚರಿಕೆಯಾಗಿ ಎಲ್ಲಾ ರೀತಿಯ ಔಷಧ ಸಂಗ್ರಹ ಮಾಡಿಕೊಳ್ಳಲಾಗಿದೆ. ಬಾಯಾರಿಕೆಯಾಗದರೆ ನೀರು ಕುಡಿಯಬೇಕು. ಏಳನೀರು ಕಲ್ಲಂಗಡಿ ಹೆಚ್ಚಾಗಿ ಸೇವನೆ ಮಾಡಬೇಕು. ಹಿರಿಯರು ಮಕ್ಕಳನ್ನು ಹೊರ ಕರೆದುಕೊಂಡು ಹೋಗಬೇಡಿ
ಡಾ.ಸಿದ್ದು ಪಾಟೀಲ ವೈದ್ಯಾಧಿಕಾರಿ ಯಡ್ರಾಮಿ
ತಾಪಮಾನದಿಂದ ಪ್ರಾಣಿ-ಪಕ್ಷಿಗಳನ್ನು ರಕ್ಷಿಸಲು ಜನರು ಮನೆ ಎದುರು ನೀರು ಇಟ್ಟು ದಾಹ ತಣಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಫೊಟೊಗಳಲ್ಲಿ ಮಾತ್ರ ನಾವು ಇವುಗಳನ್ನು ನೋಡಬೇಕಾಗುತ್ತದೆ
ಅಕ್ಷತಾ ದೊಡಮನಿ ಪ್ರಾಣಿಪ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT