ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 250 ಹಂದಿಗಳ ಸ್ಥಳಾಂತರ: ಮಹಾನಗರ ಪಾಲಿಕೆ ಕಾರ್ಯಾಚರಣೆ

ಮಹಾನಗರ ಪಾಲಿಕೆಯಿಂದ ಕಾರ್ಯಾಚರಣೆ
Last Updated 10 ಫೆಬ್ರುವರಿ 2021, 1:11 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾನಗರ ಪಾಲಿಕೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿ ಸುಮಾರು 520ಕ್ಕೂ ಹೆಚ್ಚು ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ತಿಳಿಸಿದ್ದಾರೆ.

ಹುಬ್ಬಳ್ಳಿ– ಧಾರವಾಡದ 20 ಜನರನ್ನೊಳಗೊಂಡ ಹಂದಿ ಹಿಡಿಯುವ ತಂಡವು ನಗರದ ಸಿಐಬಿ ಕಾಲೊನಿ, ಕೇಂದ್ರ ಬಸ್ ನಿಲ್ದಾಣ, ಕಣ್ಣಿ ತರಕಾರಿ ಮಾರ್ಕೆಟ್, ಮುಕ್ತಾ ಟಾಕೀಸ್ ಹತ್ತಿರ, ಸಂತೋಷ ಕಾಲೊನಿ, ಉದನೂರ ರಸ್ತೆ ವೃತ್ತ, ಓಝಾ ಬಡಾವಣೆ, ಕಾಯಕ ಎಜುಕೇಷನ್‌ ಸೊಸೈಟಿ ಪ್ರದೇಶ, ಸಿಲ್ವರ್ ಪ್ಲಾಜಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಬೀದಿ ಹಂದಿಗಳನ್ನು ಹಿಡಿದು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ತರಹದ ಕಾರ್ಯಕ್ರಮಗಳನ್ನು ರೂಪಿಸಿ ನಗರದಲ್ಲಿರುವ ಹಂದಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪಾಲಿಕೆಯ ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ.ಮಹ್ಮದ್ ಸಖಾವತ ಹುಸೇನ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಹಣಮಂತ ಹಬ್ಬಿಯಾಳ, ನೈರ್ಮಲ್ಯ ನಿರೀಕ್ಷಕ ನಾಗರಾಜ, ಬಸವರಾಜ ಪಾಣೆಗಾಂವ ಇವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಇದೇ ರೀತಿ ಕಳೆದ 2020ರ ನವೆಂಬರ್‌ನಲ್ಲಿ ಕೂಡ ಕಾರ್ಯಾಚರಣೆ ನಡೆಸಿ, ಕೊಪ್ಪಳದ ತಂಡದಿಂದ 400ಕ್ಕೂ ಹೆಚ್ಚು ಹಂದಿಗಳನ್ನು ಸ್ಥಳಾಂತರಿಸಲಾಗಿತ್ತು. ಸಾಕಷ್ಟು ಸೂಚನೆ ಕೊಟ್ಟ ಮೇಲೂ ಹಂದಿ ಸಾಕಣೆ ಮಾಡುವವರು ಎಚ್ಚೆತ್ತುಕೊಂಡಿಲ್ಲ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದರಿಂದ ನಗರದ ಎಲ್ಲೆಡೆ ತಿರುಗಾಡುವ ಹಂದಿಗಳು ಸ್ವಚ್ಛತೆಗೆ ಧಕ್ಕೆ ತರುತ್ತಿವೆ. ಹಾಗಾಗಿ, ಅವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ನಗರದಲ್ಲಿ ಹಂದಿಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ.ಜನ ಹಾಗೂ ವಾಹನ ಸಂಚಾರಕ್ಕೆ ಅಡಚಣೆ, ಪರಿಸರ ಮಾಲಿನ್ಯ ತಲೆದೋರುತ್ತಿದೆ. ಸ್ವಚ್ಛ ಕಲಬುರ್ಗಿ ಮಾಡುವ ಸಂಕಲ್ಪಕ್ಕೂ ಇದು ಅಡೆತಡೆ ಆಗುತ್ತಿದೆ. ಇದೆಲ್ಲವನ್ನು ಪರಿಗಣಿಸಿ, ಕಾನೂನು ಚೌಕಟ್ಟಿನಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ. ಅದಾಗಿಯೂ ಮತ್ತೆ ಹಂದಿ ತಂದು ಎಲ್ಲೆಂದರಲ್ಲಿ ಬಿಟ್ಟರೆ, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಈಚೆಗೆ ನಡೆದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹಂದಿಗಳ ಕಾಟದ ಬಗ್ಗೆ ಹಲವು ಓದುಗರು ಕರೆ ಮಾಡಿ ದೂರಿದ್ದರು. ವಾರದಲ್ಲೇ ಸ್ಥಳಾಂತರ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ, ಸ್ನೇಹಲ್‌ ಲೋಖಂಡೆ ಅವರು, ಮಂಗಳವಾರವೇ ಇದರ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT