ಸೋಮವಾರ, ಮಾರ್ಚ್ 20, 2023
30 °C
ಪೂರ್ಣಿಮಾ ಬಿರಾದಾರ ಡಯಾಲಿಸಿಸ್ ಕೇಂದ್ರದಲ್ಲಿ ವೈದ್ಯರ ದಿನಾಚರಣೆ

ಲಕ್ಷಾಂತರ ಜನರ ಜೀವ ಉಳಿಸಿದ ವೈದ್ಯರು: ಡಾ. ವೈ.ಎಸ್. ರವಿಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಹಗಲು ರಾತ್ರಿ ಕೆಲಸ ಮಾಡಿದ ವೈದ್ಯರು ಲಕ್ಷಾಂತರ ಜನರ ಜೀವ ಉಳಿಸಿದರು’ ಎಂದು ಕಲಬುರ್ಗಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ಶ್ಲಾಘಿಸಿದರು.

ನಗರದ ಏಷಿಯನ್ ಬಿಜಿನೆಸ್ ಸೆಂಟರ್‌ನಲ್ಲಿರುವ ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್‌ನ ಶ್ರೀಮತಿ ಪೂರ್ಣಿಮಾ ಪಿ.ಎಂ. ಬಿರಾದಾರ ಚಾರಿಟಬಲ್ ಡಯಾಲಿಸಿಸ್ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೆಲ ವರ್ಷಗಳ ಹಿಂದೆ ವೈದ್ಯರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಮನೆಗೇ ತೆರಳಿ ಚಿಕಿತ್ಸೆ ನೀಡಿದರೆ ಅದು ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯರು ಸೇವಾ ಮನೋಭಾವದಿಂದ ರೋಗಿಗಳಿಗೆ ಸೇವೆ ಮಾಡಿದರು’ ಎಂದರು.

ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ. ಜಗನ್ನಾಥ ಬಿಜಾಪುರ ಮಾತನಾಡಿ, ‘ಭಾರತ ಸರ್ಕಾರ ವೈದ್ಯರ ಸೇವೆಯನ್ನು ಗುರುತಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳದ ಖ್ಯಾತ ವೈದ್ಯರೂ, ಮುಖ್ಯಮಂತ್ರಿಯೂ ಆಗಿದ್ದ ಡಾ. ಬಿ.ಸಿ. ರಾಯ್ ಅವರ ಜನ್ಮದಿನದಂದೇ ವೈದ್ಯರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ವೈದ್ಯರು ಸಾಕಷ್ಟು ಎಡರು ತೊಡರುಗಳ ನಡುವೆಯೇ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೊರೊನಾ ತೊಲಗಿಸಲು ಸರ್ಕಾರದೊಂದಿಗೆ ಕೈಜೋಡಿಸಿ ರೋಗಿಗಳ ಸೇವೆ ಮಾಡಿದ್ದಾರೆ’ ಎಂದು ಹೇಳಿದರು.

ಕೆಬಿಎನ್ ಆಸ್ಪತ್ರೆಯ ವೈದ್ಯೆ ಡಾ. ಜೀನತ್ ಮಾತನಾಡಿ, ‘ಕೋವಿಡ್ ನಿರ್ವಹಣೆಗಾಗಿ ಸರ್ಕಾರ ಈಗಾಗಲೇ ಸಾವಿರಾರು ಕೋಟಿ ಖರ್ಚು ಮಾಡಿ ದಣಿದಿದೆ. ಹೀಗಾಗಿ, ಸಾರ್ವತ್ರಿಕ ಲಸಿಕೆಯನ್ನು ಯಶಸ್ವಿಗೊಳಿಸಲು ದೊಡ್ಡ ಸಂಸ್ಥೆಗಳು, ದಾನಿಗಳು ಹಣಕಾಸು ನೆರವು ನೀಡಬೇಕು’ ಎಂದರು.

ಪೂರ್ಣಿಮಾ ಪಿ.ಎಂ. ಬಿರಾದಾರ ಚಾರಿಟಬಲ್ ಡಯಾಲಿಸಿಸ್ ಕೇಂದ್ರದ ಮುಖ್ಯಸ್ಥ, ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಮಾತನಾಡಿ, ‘ಎಲ್ಲ ವೈದ್ಯರ ಸಹಕಾರದಿಂದಲೇ ಕೊರೊನಾವನ್ನು ಜಿಲ್ಲೆಯಲ್ಲಿ ನಿಯಂತ್ರಿಸಲು ಸಾಧ್ಯವಾಯಿತು. ಇದಕ್ಕಾಗಿ ಕಾರಣರಾದ ಎಲ್ಲ ಆಸ್ಪತ್ರೆಗಳ ವೈದ್ಯರನ್ನು ಕರೆಸಿ ಗೌರವ ಸೂಚಿಸಲು ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

ವಿವಿಧ ಆಸ್ಪತ್ರೆಗಳ ವೈದ್ಯರಾದ ಡಾ. ಪ್ರತಿಮಾ ರೆಡ್ಡಿ, ಡಾ. ಕಿರಣ ದೇಶಮುಖ, ಡಾ. ಗೀತಾ ಸಾಲಿಮಠ ಸೇರಿದಂತೆ ಹಲವು ವೈದ್ಯರು ಹಾಗೂ ಪತ್ರಕರ್ತ ದೇವಯ್ಯ ಗುತ್ತೇದಾರ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು