ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರಿಕೆ ವಹಿಸಿದರೆ ಯಾವ ಅಲೆಯೂ ಅಪ್ಪಳಿಸುವುದಿಲ್ಲ

ಸಾರ್ವಜನಿಕರಿಗೆ ಧೈರ್ಯ ತುಂಬಿದ ಜಿಲ್ಲಾ ಸರ್ಜನ್‌ ಡಾ.ಅಂಬಾರಾಯ ರುದ್ರವಾಡಿ, ಕೋವಿಡ್‌ ಲಸಿಕೆ ಬಗ್ಗೆ ಭಯಪಡಬೇಡಿ
Last Updated 19 ಮಾರ್ಚ್ 2021, 6:17 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ಕಲಬುರ್ಗಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೋವಿಡ್‌ ವ್ಯಾಕ್ಸಿನ್‌ ಕುರಿತಾಗಿಯೇ ಹಲವು ಪ್ರಶ್ನೆಗಳು ಬಂದವು. ವ್ಯಾಕ್ಸಿನ್‌ನ ಗುಣಮಟ್ಟ ಏನು? ಎಲ್ಲರಿಗೂ ತಲುಪುವುದು ಯಾವಾಗ? ಚುಚ್ಚುಮದ್ದು ಪಡೆದ ಮೇಲೆ ನಿರಾಳವಾಗಿ ಇರಬಹುದೇ... ಇವೇ ಮುಂತಾದ ಪ್ರಶ್ನೆಗಳಿಗೆ ಜಿಲ್ಲಾ ಸರ್ಜನ್‌ ಡಾ.ಅಂಬಾರಾಯ ರುದ್ರವಾಡಿ ಅವರು ಉತ್ತರಿಸಿದರು. ದುಗುಡದಿಂದ ಕರೆ ಮಾಡಿದ್ದ ಹಲವರಿಗೆ ಧೈರ್ಯ ತುಂಬಿದರು.

*

ಕಲಬುರ್ಗಿ: ‘ಕೋವಿಶೀಲ್ಡ್‌ ವ್ಯಾಕ್ಸಿನ್‌ ತೆಗೆದುಕೊಂಡ ಮೇಲೆ ನಾವು ಸಂಪೂರ್ಣವಾಗಿ ಕೊರೊನಾದಿಂದ ಮುಕ್ತರಾದೆವು ಎಂದರ್ಥವಲ್ಲ. ಈ ವ್ಯಾಕ್ಸಿನ್‌ ನಮ್ಮ ದೇಹದಲ್ಲಿ ರೋಗ ನಿರೋಧಕ ಕೆಲಸ ಮಾಡುತ್ತದೆ. ಆದರೆ, ವಾತಾವರಣದಲ್ಲಿ ವೈರಸ್‌ ಇನ್ನೂ ಇದೆ ಎಂಬುದನ್ನು ಮರೆಯಬಾರದು’ ಎಂದು ಜಿಲ್ಲಾ ಸರ್ಜನ್‌ ಡಾ.ಅಂಬಾರಾಯ ರುದ್ರವಾಡಿ ಎಚ್ಚರಿಕೆ ನೀಡಿದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವ್ಯಾಕ್ಸಿನ್‌ ಪಡೆದ ಮೇಲೂ ಮಾಸ್ಕ್‌, ಸ್ಯಾನಿಟೈಸರ್‌, ಅಂತರ ನಿಯಮಗಳನ್ನು ಏಕೆ ಪಾಲಿಸಬೇಕು ಎಂದು ಹಲವರು ಪ್ರಶ್ನೆ ಮಾಡುತ್ತಾರೆ. ಖಂಡಿತವಾಗಿಯೂ ಕೋವಿಡ್‌ ನಿಯಮಗಳನ್ನು ಪಾಲಿಸಲೇಬೇಕು. ಇದು ಎರಡು ಹಂತದಲ್ಲಿ ನೀಡುವ ಚುಚ್ಚುಮದ್ದು. ಸದ್ಯಕ್ಕೆ ಮೊದಲ ಹಂತದಲ್ಲಿ ನೀಡಲಾಗುತ್ತಿದೆ. ಕೋವಿಶೀಲ್ಡ್‌ ಪಡೆದ ನಂತರ ಸರಿಯಾಗಿ 28 ದಿನಗಳಿಗೆ ಕೋವ್ಯಾಕ್ಸಿನ್‌ ಎಂಬ ಚುಚ್ಚಮುದ್ದು ನೀಡಲಾಗುತ್ತದೆ. ಇವೆರಡನ್ನೂ ಪಡೆದಾಗ ನಮ್ಮ ದೇಹದಲ್ಲಿ ಕೊರೊನಾ ವೈರಾಣು ವಿರುದ್ಧ ಹೋರಾಡುವ ಶಕ್ತಿ ಬೆಳೆಯುತ್ತದೆ. ಆದರೆ, ವಾತಾವರಣದಲ್ಲಿನ ವೈರಾಣುವನ್ನು ಇದು ಕೊಲ್ಲುವುದಿಲ್ಲ. ಹಾಗಾಗಿ, ವ್ಯಾಕ್ಸಿನ್‌ ಪಡೆದ ಮೇಲೂ ವೈರಾಣು ದೇಹ ಸೇರಬಹದು. ಸೇರಿದರೂ ಹಾನಿ ಸಂಭವಿಸದಂತೆ ವ್ಯಾಕ್ಸಿನ್‌ ಕಾಪಾಡುತ್ತದೆ. ಈಗ ಮುಂಚೂಣಿ ಸೇನಾನಿಗಳು, ವೃದ್ಧರು, ರೋಗಿಗಳಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಯಸ್ಕರಿಗೂ ನೀಡಲಾಗುವುದು.ಇಡೀ ದೇಶದಾದ್ಯಂತ ನೂರಕ್ಕೆ ನೂರಷ್ಟು ಎಲ್ಲರೂ ವ್ಯಾಕ್ಸಿನ್‌ ಪಡೆದಾಗ ಮಾತ್ರ ವೈರಾಣು ಅಬ್ಬರ ನಿಲ್ಲಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಯ್ದ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

* ಎರಡನೇ ಅಲೆ ಬರುವುದು ನಿಜವೇ?
– ಕೊರೊನಾ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಿದರೆ ಯಾವ ಅಲೆಯೂ ಬರುವುದಿಲ್ಲ. ಮಾಸ್ಕ್‌ ಇಲ್ಲದೇ, ಸ್ಯಾನಿಟೈಸರ್‌ ಬಳಸದೇ, ಕನಿಷ್ಠ ಅಂತರ ಕಾಪಾಡಿಕೊಳ್ಳದೇ ಓಡಾಡುವ ಎಲ್ಲರಿಗೂ ಈ ವೈರಾಣು ಅಂಟಿಕೊಳ್ಳುತ್ತದೆ. ಅತ್ಯಂತ ಸರಳವಾದ ನಿಯಮಗಳನ್ನು ಪಾಲಿಸಿವುದಕ್ಕೂ ಆಗದಿದ್ದರೆ ಎರಡನೇ ಅಲೆ ಬರದೇ ಇರಲು ಹೇಗೆ ಸಾಧ್ಯ? ಅಲೆ ಬರಬೇಕೋ ಬೇಡವೋ ಎನ್ನುವುದು ಈಗ ಜನರ ಕೈಯಲ್ಲಿದೆ.

* ವ್ಯಾಕ್ಸಿನ್‌ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರಲ್ಲ.
– ಈಗಾಗಲೇ ದೇಶದ ಪ್ರಧಾನಿ, ಮುಖ್ಯಮಂತ್ರಿಗಳು, ಅಧಿಕಾರಿಗಳು, ವೈದ್ಯರು, ವೈದ್ಯಕೀಯ ಹಾಗೂ ಪೊಲೀಸ್‌ ಸಿಬ್ಬಂದಿ ಚುಚ್ಚುಮದ್ದು ಪಡೆದಾಗಿದೆ. ಯಾರಿಗೂ ಎಲ್ಲಿಯೂ ಏನೂ ಆಗಿಲ್ಲ. ನಮ್ಮ ವಿಜ್ಞಾನಿಗಳು ಶ್ರಮಪಟ್ಟು ತಯಾರಿಸಿದ್ದಾರೆ. ನಂಬಿಕೆ ಬಹಳ ಮುಖ್ಯ. ಕೊರೊನಾ ಮಾತ್ರವಲ್ಲ; ಎಲ್ಲ ವ್ಯಾಕ್ಸಿನ್‌ ಪಡೆದಾಗಲೂ ಸಣ್ಣಪುಟ್ಟ ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ. ಹೊಸದೊಂದು ಔಷಧ ದೇಹದೊಳಗೆ ಹೋಗಿ ಕೆಲಸ ಮಾಡುವಾಗ ಇದು ಸಹಜ ಪ್ರಕ್ರಿಯೆ. ಅದನ್ನೇ ರಿ–ಆ್ಯಕ್ಷನ್‌ ಎಂದು ಪರಿಗಣಿಸಬಾರದು. ನಮ್ಮ ವ್ಯಾಕ್ಸಿನ್‌ ಸಂಪೂರ್ಣ ಸುರಕ್ಷಿತವಾಗಿದೆ. ಭಯ ಬಿಟ್ಟು ಪಡೆಯಿರಿ. ಕೋಟ್ಯಂತರ ಹಣ ಖರ್ಚು ಮಾಡಿ, ಜನರಿಗೆ ತೊಂದರೆ ಮಾಡಲು ವ್ಯಾಕ್ಸಿನ್‌ ಕೊಡುವ ಉದ್ದೇಶ ಸರ್ಕಾರಕ್ಕೆ ಇರುತ್ತದೆಯೇ?

* ಮಧುಮೇಹ, ಬಿ.ಪಿ ಇದ್ದವರು ವ್ಯಾಕ್ಸಿನ್‌ ಪಡೆಯಬಹುದೇ?
– ಖಂಡಿತವಾಗಿ ಪಡೆಯಬಹುದು. ಯಾವುದೇ ಗಂಭೀರ ಕಾಯಿಲೆ ಇದ್ದರೂ ಈ ಚುಚ್ಚುಮದ್ದು ಪಡೆಯಬಹುದು. ಇದರೊಂದಿಗೇ ತಮ್ಮ ನಿತ್ಯದ ಔಷಧಿಗಳನ್ನೂ ಪಡೆಯಬಹುದು. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ– ಸಂಘರ್ಷ ಇರುವುದಿಲ್ಲ.

* ಜಿಲ್ಲೆಯ ಬಹಳಷ್ಟು ತಾಲ್ಲೂಕು ಅಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಆಗಾಗ ನಿಲ್ಲಿಸಲು ಕಾರಣವೇನು?
– ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಬಿಆರ್‌ಎಸ್‌ ಎಂಬ ಸಂಸ್ಥೆಯೇ ಗುತ್ತಿಗೆ ಆಧಾರದ ಮೇಲೆ ಡಯಾಲಿಸಿಸ್‌ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದೆ. ಯಂತ್ರಗಳ ದೋಷ, ನೀರಿನ ಸಮಸ್ಯೆ ಇದ್ದಾಗ ಬಂದ್‌ ಆಗುವುದು ಸಹಜ. ತಡ ಮಾಡದೇ ಅದನ್ನು ಮರಳಿ ಆರಂಭಿಸಬೇಕು. ಸಮಸ್ಯೆ ಇದ್ದಲ್ಲಿ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ.

* ಲಸಿಕೆಯನ್ನು ಒಮ್ಮೆ ಪಡೆದುಕೊಂಡರು ಸಾಕೇ ಅಥವಾ ಪ್ರತಿ ವರ್ಷ ತೆಗೆದುಕೊಳ್ಳಬೇಕೆ?
– ಲಸಿಕೆಯು ಪ್ರಯೋಗಾತ್ಮಕ ಹಂತದಲ್ಲಿದ್ದು, ಎಲ್ಲವನ್ನೂ ಸ್ಪಷ್ಟಪಡಿಸಲು 6 ತಿಂಗಳು ಅಥವಾ 1 ವರ್ಷದವರೆಗೆ ಸಮಯ ಬೇಕು. ಇಂತಿಷ್ಟು ಅವಧಿಯೊಳಗೆ ಯಾರಿಗೂ ಕೋವಿಡ್‌ ಸೋಂಕು ಕಾಡದಿದ್ದರೆ, ಲಸಿಕೆಯು ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ದೃಢವಾಗುತ್ತದೆ. ಲಸಿಕೆ ಪಡೆದ ಬಳಿಕವೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯ.

* ಸೋಂಕು ಬಾರದಂತೆ ತಡೆಯಲು ಯಾವುದೆಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು?
– ಸರ್ಕಾರ ಸೂಚಿಸಿರುವ ಪ್ರತಿಯೊಂದು ನಿಯಮಗಳನ್ನು ಪಾಲಿಸಬೇಕು. ಬೆಳಿಗ್ಗೆ ನಿಂಬೆರಸವುಳ್ಳ ಬಿಸಿನೀರು ಅಥವಾ ಕಷಾಯ ಕುಡಿಯಬೇಕು. ಪಕ್ಕಾ ದೇಶಿ ಶೈಲಿಯ ರೊಟ್ಟಿ, ಪಲ್ಯ, ತರಕಾರಿವುಳ್ಳ ಆಹಾರ ಸೇವಿಸಬೇಕು. ಇದರಿಂದ ರೋಗ ನಿರೋಧಕಶಕ್ತಿ ವೃದ್ಧಿಸುತ್ತದೆ.

ಆಸ್ಪತ್ರೆಗಳಿಗೆ ವ್ಯಾಕ್ಸಿನೇಷನ್‌ ಟಾರ್ಗೆಟ್‌
ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನೇಷನ್‌ ಟಾರ್ಗೆಟ್‌ ನೀಡಲಾಗಿದೆ. ದಿನಕ್ಕೆ ಇಂತಿಷ್ಟು ಮಂದಿಗೆ ವ್ಯಾಕ್ಸಿನ್‌ ನೀಡಲೇಬೇಕು ಎಂಬ ನಿಯಮ ಮಾಡಿದ ಮೇಲೆ ಪಡೆಯುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಒಬ್ಬರನ್ನೊಬ್ಬರು ನೋಡಿಕೊಂಡು ಪ್ರೇರಿತರಾಗಿ ಚುಚ್ಚುಮದ್ದು ಪಡೆಯಲು ಜನ ಈಗ ಮುಂದೆ ಬರುತ್ತಿದ್ದಾರೆ ಎಂದು ಡಾ.ರುದ್ರವಾಡಿ ತಿಳಿಸಿದರು.

ಸದ್ಯಕ್ಕೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ ಗಂಭೀರ ಕಾಯಿಲೆ (45 ವರ್ಷ ಮೇಲ್ಪಟ್ಟ) ಇರುವವರಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ನೀಡಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಜನ ಸಹಕರಿಸಬೇಕು ಎಂದರು.

ಕಾರ್‌ ಚಾಲಕನಿಗೂ ಲಸಿಕೆ ಹಾಕಿಸಿದ ಶಾಸಕ!
60 ವರ್ಷ ಮೇಲ್ಪಟ್ಟ, ಜಿಲ್ಲೆಯ ಶಾಸಕರೊಬ್ಬರು ಕೋವಿಶೀಲ್ಡ್‌ ಲಸಿಕೆ ಪಡೆದಿದ್ದಾರೆ. ಅವರೊಂದಿಗೆ 27 ವರ್ಷದ ತಮ್ಮ ಕಾರ್‌ ಚಾಲಕನಿಗೂ ಅವರು ಲಸಿಕೆ ಕೊಡಿಸಿದ್ದು, ಸರ್ಕಾರದ ನಿಯಮಗಳನ್ನೇ ಗಾಳಿಗೆ ತೂರಿದ ಪ್ರಕರಣ ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ಹೊರಬಿದ್ದಿತು.

ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿದ ಚಾಲಕ, ‘ಕಡಿಮೆ ಯವಸ್ಸಿದ್ದರೂ ನಾನು ಲಸಿಕೆ ಪಡೆದಿದ್ದೇನೆ. ನನಗೇನಾದರೂ ತೊಂದರೆ ಆಗುತ್ತದೆಯೇ?’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ರುದ್ರವಾಡಿ, ವ್ಯಾಕ್ಸಿನ್‌ ಪಡೆಯುವುದರಿಂದ ಏನೂ ತೊಂದರೆ ಆಗುವುದಿಲ್ಲ. ಧೈರ್ಯವಾಗಿರಿ. ಹಿರಿಯರು ಹಾಗೂ ರೋಗಿಗಳಿಗೆ ಅಪಾಯ ಹೆಚ್ಚು ಎಂಬ ಕಾರಣಕ್ಕೆ ಸರ್ಕಾರ ವಯಸ್ಸಿನ ಮಿತಿ ಮಾಡಿದೆ. ಅದನ್ನು ಯಾರೂ ಮೀರಬಾರದು ಎಂದರು.

ಸರ್ಕಾರವನ್ನೂ ದೂರುವ ಬದಲು, ಜೀವನಶೈಲಿ ಬದಲಿಸಿಕೊಳ್ಳಿ
ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ನಾವು ಇನ್ನೂ ಪ್ರಕೃತಿ ಸಹಜವಾದ ಬದುಕನ್ನೇ ಪಾಲಿಸುತ್ತಿದ್ದೇವೆ. ಹಾಗಾಗಿ, ನಮ್ಮಲ್ಲಿ ಕೊರೊನಾದಿಂದ ದೊಡ್ಡ ಪ್ರಮಾಣದ ಜೀವ ಹಾನಿ ಸಂಭವಿಸಿಲ್ಲ. ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಇಷ್ಟು ಸಮರ್ಥವಾಗಿ ನಿಭಾಯಿಸಿದ್ದು ದಾಖಲೆಯೇ ಸರಿ. ಬಹುಪಾಲು ಮಂದಿ ಎಲ್ಲದಕ್ಕೂ ಸರ್ಕಾರವನ್ನೇ ದೂಷಿಸುತ್ತಾರೆ. ಸೋಂಕು ಉಲ್ಬಣವಾದರೂ ಸರ್ಕಾರ ಜವಾಬ್ದಾರಿ, ಲಸಿಕೆ ಬಾರದಿದ್ದರೂ– ಬಂದರೂ, ಜನ ಪಡೆಯದಿದ್ದರೂ ಸರ್ಕಾರವೇ ಹೊಣೆ ಎಂಬಂತೆ ಮಾತನಾಡುತ್ತಾರೆ. ಸರ್ಕಾರವನ್ನು ದೂರುವ ಬದಲು ನಮ್ಮ ಜೀವನ ಶೈಲಿ ಬದಲಿಸಿಕೊಂಡರೆ ನಾವು ಸುರಕ್ಷಿತವಾಗಿರಬಹುದು ಎಂದು ಡಾ.ಅಂಬಾರಾಯ ಸಲಹೆ ನೀಡಿದರು.

ಜಿಮ್ಸ್‌ ಕಾರ್ಯಶೀಲತೆಗೆ ಪ್ರಶಂಸೆ
ದೇಶದಲ್ಲೇ ಮೊದಲ ಬಾರಿಗೆ ಕೋವಿಡ್‌ ಸಾವು ಸಂಭವಿಸಿ ಇಲ್ಲಿಗೆ ವರ್ಷವಾಗಿದೆ. ಅಂಥ ಕಠಿಣ ಪರಿಸ್ಥಿತಿಯಲ್ಲೂ ‘ಜಿಮ್ಸ್‌’ ಸಲ್ಲಿಸಿದ ಸೇವೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲಿಂದ ಇಲ್ಲಿಯವರೆಗೂ ನಾವು ಯಾವುದೇ ಕಾರಣಕ್ಕೂ ಮೈ ಮರೆತಿಲ್ಲ. ವೈದ್ಯರು, ಸ್ಟಾಫ್‌ ನರ್ಸ್‌, ಡಿ ದರ್ಜೆ ನೌಕರರು, ಆಂಬುಲೆನ್ಸ್‌ ಸಿಬ್ಬಂದಿ, ಶವ ಸಂಸ್ಕಾರ ಮಾಡುವವರು ಹೀಗೆ ಎಲ್ಲರೂ ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ.

ಎರಡನೇ ಅಲೆಯ ಸಾಧ್ಯತೆ ಹಿನ್ನೆಲೆಯಲ್ಲಿ ಪೂರ್ವಯೋಜಿತವಾಗಿ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದೂ ಡಾ.ರುದ್ರವಾಡಿ ಹೇಳಿದರು.

ಈ ಬಗ್ಗೆ ಕರೆ ಮಾಡಿದ ಹಲವು ಜನ ಅಭಿನಂದನೆಯನ್ನೂ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT