ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ : ಹಿಂದುತ್ವದ ಉಳಿವಿಗೆ ಜಾಗೃತಿ ಅವಶ್ಯ: ಪ್ರಮೋದ ಮುತಾಲಿಕ್

ಯಡ್ರಾಮಿಯ ಹಿಂದು ಸಂತ ಸಮಾವೇಶದಲ್ಲಿ ಪ್ರಮೋದ ಮುತಾಲಿಕ್
Last Updated 13 ಜನವರಿ 2023, 7:19 IST
ಅಕ್ಷರ ಗಾತ್ರ

ಯಡ್ರಾಮಿ: ‘ಮುಸ್ಲಿಮರನ್ನು ಓಲೈಸಲು ರಾಮಮಂದಿರ ವಿವಾದಕ್ಕೆ ಅಯೋಧ್ಯೆಯಲ್ಲಿ ಕಾಂಗ್ರೆಸ್‌ನವರು ಬಾಬರ್ ಪರ ನಿಂತರೇ ಹೊರತು ರಾಮನ ಪರ ನಿಲ್ಲಲಿಲ್ಲ’ ಎಂದು ಶ್ರೀರಾಮಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಹರಿಹಾಯ್ದರು.

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಶ್ರೀರಾಮಸೇನೆ ವತಿಯಿಂದ ನಡೆದ ಹಿಂದೂ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಒಂದು ಮಂದಿರ ಕಟ್ಟಲು 500 ವರ್ಷ ಬೇಕಾಯಿತು. ಕೋರ್ಟು, ಜೈಲು ಎಂದು ಅಲೆದಾಡಬೇಕಾಯಿತು. ಮುಸ್ಲಿಮರು ಬಾಬ್ರಿ ಮಸೀದಿ ಕ್ರಿಯಾ ಸಮಿತಿ ರಚಿಸಿಕೊಂಡು ಹೋರಾಟಕ್ಕಿಳಿದರು. ಅವರಿಗೆ ಕಾಂಗ್ರೆಸ್‌ನವರು ಬೆಂಬಲಿಸಿದರು’ ಎಂದರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕಾಯಿತು. 2014ಕ್ಕೂ ಮೊದಲು ಜಮ್ಮು ಕಾಶ್ಮೀರದಲ್ಲಿ ಅಲ್ಲಿನ ಜನರು ಸೈನಿಕರತ್ತ ಕಲ್ಲೆಸೆಯುತ್ತಿದ್ದರು. ಎ.ಕೆ. 47 ಇದ್ದರೂ ಭಯೋತ್ಪಾದಕರತ್ತ ಗುಂಡು ಹಾರಿಸುವಂತಿರಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ದೇಶದ್ರೋಹಿಗಳತ್ತ ಗುಂಡು ಹಾರಿಸಲು ಅನುಮತಿ ಬೇಕಿಲ್ಲ ಎಂದು ಆದೇಶ ಹೊರಡಿಸಿದರು’ ಎಂದು ಹೇಳಿದರು.

‘ಇಸ್ಲಾಂ, ಕ್ರೈಸ್ತರು ಮತ್ತು ಕಮ್ಯುನಿಸ್ಟರನ್ನು ದೂರಗೊಳಿಸಿ ದೇಶವನ್ನು ಉಳಿಸಬೇಕಿದೆ. ಹಿಂದುತ್ವ, ಹಿಂದು ಧರ್ಮ, ಹಿಂದು ಸಂಸ್ಕೃತಿಯನ್ನು ಉಳಿಸಲು ಸಂತ ಸಮಾವೇಶ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸುತ್ತಿದ್ದೇವೆ’ ಎಂದರು.

ಚೈತ್ರಾ ಕುಂದಾಪುರ ಮಾತನಾಡಿ, ‘ಮುಸ್ಲಿಂ ಯುವಕರು ಪ್ರೀತಿಯ ಹೆಸರಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ನಂಬಿಸಿ ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಆದ್ದ ರಿಂದ ಹಿಂದೂ ಹೆಣ್ಣು ಮಕ್ಕಳು ಜಾಗೃತರಾ ಗಬೇಕು. ಸಾಂಸ್ಕೃತಿಕ–ಸಾಮಾಜಿಕವಾಗಿ ಮತಾಂತರ ನಡೆಯುತ್ತಿದೆ. ಇದೆಲ್ಲವನ್ನೂ ತಡೆಯಬೇಕು’ ಎಂದರು.

ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ದೇಶದ ಜನರ ತೆರಿಗೆ ಹಣವು ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಖರ್ಚಾಗುತಿತ್ತು. ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಇದಕ್ಕೆ ತಡೆ ಬಿದ್ದಿದೆ’ ಎಂದರು.

ಸೊನ್ನದ ಶಿವಾನಂದ ಸ್ವಾಮೀಜಿ, ನೆಲೋಗಿಯ ಸಿದ್ದಲಿಂಗ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಲ್ಲಿನಾಥಗೌಡ ಯಲಗೋಡ, ಶ್ರೀರಾಮ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದು ಹಂಗರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT