ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ, ಶಿಶು ಸಾವು: ಕುಟುಂಬದವರ ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Last Updated 25 ಸೆಪ್ಟೆಂಬರ್ 2021, 6:42 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಕನ್ಯಾಕುಮಾರಿ ಎನ್ನುವವರು ಶನಿವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ಅವರ ಶಿಶು ಗರ್ಭದಲ್ಲೇ ಮೃತಪಟ್ಟಿತ್ತು. ಹೆರಿಗೆ ಮಾಡಿಸಿದ ನಾಲ್ಕು ತಾಸುಗಳ ನಂತರ ಬಾಣಂತಿಯೂ ಕೊನೆಯುಸಿರೆಳೆದರು. ಈ ಎರಡೂ ಸಾವಿಗೆ ಜಿಮ್ಸ್‌ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರ್ಗಿ ತಾಲ್ಲೂಕಿನ ನಗಳ್ಳಿ ಗ್ರಾಮದ ಮಲ್ಲಿಕಾರ್ಜುನ ನಾಟೀಕಾರ ಅವರ ಪತ್ನಿ ಕನ್ಯಾಕುಮಾರಿ (23) ಅವರಿಗೆ ಶುಕ್ರವಾರ ರಾತ್ರಿ 7ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಇದು ಅವರ ಚೊಚ್ಚಲ ಹೆರಿಗೆ. ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದ ಕಾರಣ ಕುಟುಂಬದವರು ಆರೋಗ್ಯ ಕವಚ (108) ಆಂಬುಲೆನ್ಸ್‌ ಕರೆಯಿಸಿ 29 ಕಿ.ಮೀ ದೂರದ ಜೇವರ್ಗಿಯ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಲ್ಲಿ ಹೆರಿಗೆ ಮಾಡಿಸಲು ಸಾಧ್ಯವಾಗದ ಕಾರಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದರು. ಅಲ್ಲಿಂದ ಆಂಬುಲೆನ್ಸ್‌ನಲ್ಲಿಯೇ ಮತ್ತೆ 45 ಕಿ.ಮೀ ಸಂಚಾರ ಮಾಡಿ ಜಿಮ್ಸ್‌ಗೆ ದಾಖಲಿಸಲಾಯಿತು.

ರಾತ್ರಿ 10ರ ಸುಮಾರಿಗೆ ಗರ್ಭಿಣಿಯನ್ನು ದಾಖಲು ಮಾಡಿಕೊಂಡ ಜಿಮ್ಸ್‌ ಸಿಬ್ಬಂದಿ, ಮಗು ಹೊಟ್ಟೆಯಲ್ಲೇ ಮೃತಪಟ್ಟಿದೆ ಎಂದು ಕುಟುಂಬದವರಿಗೆ ತಿಳಿಸಿದರು. ನಂತರ ತಡರಾತ್ರಿ 2ರ ಸುಮಾರಿಗೆ ಕನ್ಯಾಕುಮಾರಿ ಅವರಿಗೆ ನಾರ್ಮಲ್‌ ಹೆರಿಗೆ ಆಯಿತು. ಮಗುವಿನ ಕಳೆಬರವನ್ನು ಪಾಲಕರಿಗೆ ನೀಡಿದ ವೈದ್ಯರು, ಬಾಣಂತಿಯನ್ನು ವಾರ್ಡಿನಲ್ಲಿ ದಾಖಲಿಸಿದರು.

‘ಹೆರಿಗೆ ಬಳಿಕ ಕನ್ಯಾಕುಮಾರಿ ವಿಪರೀತ ನೋವಿನಿಂದ ನರಳಾಡತ್ತಿದ್ದರು. ಅವರೊಂದಿಗೆ ಇದ್ದ ದೊಡ್ಡಮ್ಮ ಹಾಗೂ ಅತ್ತೆ ನರ್ಸ್‌ಗಳಿಗೆ ಮಾಹಿತಿ ನೀಡಿದರು. ‘ಹೆರಿಗೆ ಸಂದರ್ಭದಲ್ಲಿ ಹೀಗೆ ಒದ್ದಾಡುವುದು ಸಹಜ, ಅದಕ್ಕೇಕೆ ಇಷ್ಟು ಗಲಾಟೆ ಮಾಡುತ್ತೀರಿ’ ಎಂದು ನರ್ಸ್‌ ಕುಟುಂಬದವರನ್ನೇ ಗದರಿಸಿದರು. ನಸುಕಿನ 4 ಗಂಟೆಯವರೆಗೂ ಬಾಣಂತಿಯ ನರಳಾಟ ತೀವ್ರವಾಗಿತ್ತು. ಕುಟುಂಬದವರು ಪದೇಪದೇ ನರ್ಸ್‌ಗಳಿಗೆ ಬಂದುನೋಡುವಂತೆ ಮನವಿ ಮಡಿಕೊಂಡರು. ನಂತರ ಬಂದ ಸ್ಟಾಫ್‌ ನರ್ಸ್‌ ಒಬ್ಬರು ಎರಡು ಮಾತ್ರ ಕೊಟ್ಟು, ಇದನ್ನು ನುಂಗಿಸಿ ನೋವು ಕಡಿಮೆಯಾಗುತ್ತದೆ ಎಂದರು. ನಸುಕಿನ 4ರ ನಂತರ ಬಾಣಂತಿಯ ಮೈ ತಣ್ಣಗಾದಾಗಲೇ ಅವರು ಮೃತಪಟ್ಟಿದ್ದು ಗೊತ್ತಾಗಿದೆ’ ಎಂಬುದು ಅವರ ಪತಿ ಮಲ್ಲಿಕಾರ್ಜುನ ಅವರ ಹೇಳಿಕೆ.

ಸಂಬಂಧಿಕರ ಆಕ್ರೋಶ: ‘ಕನ್ಯಾಕುಮಾರಿ ಸಾವಿಗೆ ಜಿಮ್ಸ್‌ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕನ್ಯಾಕುಮಾರಿ ಅವರ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಊರಿನ ಜನ ಕೂಡ ಪ್ರತಿಭಟನೆ ನಡೆಸಿದರು. ಬಾಣಂತಿ ನರಳಾಡುತ್ತಿದ್ದರೂ ಬಂದು ನೋಡಲು ರಾತ್ರಿ ಒಬ್ಬ ವೈದ್ಯರೂ ಇರಲಿಲ್ಲ. ಸ್ಟಾಫ್‌ ನರ್ಸ್‌ಗಳೇ ಎಲ್ಲವನ್ನೂ ನೋಡಿಕೊಳ್ಳಬೇಕಾಗಿದೆ. ಕನ್ಯಾಕುಮಾರಿಯ ಸ್ಥಿತಿ ಗಂಭೀರವಾಗಿದೆ, ಬಂದು ನೋಡಿ ಎಂದು ಅಂಗಲಾಚಿದರೂ ವೈದ್ಯರು ಬಂದಿಲ್ಲ’ ಎಂದು ಮೃತಳ ಚಿಕ್ಕಪ್ಪ ಚಂದ್ರಕಾಂತ ದೂರಿದರು.

‘ಹೊಟ್ಟೆಯಲ್ಲೇ ಮಗು ಸತ್ತಿದೆ ಎಂದು ಹೇಳಿ ತಂದೆಯಿಂದ ಸಹಿ ಮಾಡಿಸಿಕೊಂಡಿದ್ದಾರೆ. ತಕ್ಷಣಕ್ಕೆ ಶಸ್ತ್ರಚಿಕಿತ್ಸೆ ಮಾಡಿ ತಾಯಿಯನ್ನಾದರೂ ಉಳಿಸಿಕೊಡಿ ಎಂದು ಮನವಿ ಮಾಡಿದೆವು. ಆದರೂ ರಾತ್ರಿ 2ರವರೆಗೆ ನಾರ್ಮಲ್‌ ಡೆಲಿವರಿ ಆಗುವವರೆಗೂ ವೈದ್ಯರು ಏಕೆ ತಡ ಮಾಡಿದರು ಎಂಬುದೇ ಗೊತ್ತಾಗುತ್ತಿಲ್ಲ. ಹೆರಿಗೆ ನಂತರ ವಾರ್ಡ್‌ಗೆ ದಾಖಲಿಸಿ ಹೋದ ಮೇಲೆ ಯಾರೂ ಬಂದು ನೋಡಿಲ್ಲ. ಸ್ವತಃ ಬಾಣಂತಿಯೇ ನಾನು ಸಾಯುತ್ತೇನೆ ಕಾಪಾಡಿ ಎಂದು ಜತೆಗಿದ್ದವರಿಗೆ ಹೇಳಿದ್ದಾಳೆ. ಅವರ ಅತ್ತೆ, ದೊಡ್ಡಮ್ಮ ಹೋಗಿ ಬೇಡಿಕೊಂಡರೂ ಯಾರೂ ಕೇಳಿಲ್ಲ. ಕನ್ಯಾಕುಮಾರಿ ತಂದೆ ತೀರಿಕೊಂಡಿದ್ದಾರೆ. ನಾನೇ ಸಾಕಿ ಬೆಳೆಸಿ, ವರ್ಷದ ಹಿಂದೆ ಮದುವೆ ಮಾಡಿದ್ದೆ. ಇವರ ನಿರ್ಲಕ್ಷ್ಯದ ಕಾರಣ ಮಗಳು ಹೆಣವಾದಳು’ ಎಂದು ದೊಡ್ಡಪ್ಪ ಧರ್ಮಣ್ಣ ನೋವು ತೋಡಿಕೊಂಡರು.

‘ಇಷ್ಟೆಲ್ಲ ಆದ ಮೇಲೂ ಶನಿವಾರ ಬೆಳಿಗ್ಗೆ 11ರವರೆಗೂ ಆಸ್ಪತ್ರೆಯ ಯಾವುದೇ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಸಾವು ಹೇಗಾಯಿತು, ಯಾಕಾಯಿತು ಎಂದು ಕುಟುಂಬದವರಿಗೂ ವಿವರಣೆ ನೀಡಿಲ್ಲ. ಇದಕ್ಕೆ ಕಾರಣರಾದ ವೈದ್ಯರು, ನರ್ಸ್‌ಗಳನ್ನು ಅಮಾನತು ಮಾಡಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಬಾಣಂತಿಯ ಶವವನ್ನು ನೋಡುವುದಕ್ಕೂ ಬೌನ್ಸರ್‌ಗಳು ಒಳಗೆ ಬಿಟ್ಟಿಲ್ಲ. ಇವರನ್ನು ತೆಗೆದು ಪೊಲೀಸ್‌ ಸಿಬ್ಬಂದಿ ನೇಮಿಸಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲಿಯವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.‌

box-1

‘ರಕ್ತ ಹೆಪ್ಪುಗಟ್ಟುವಿಕೆಯಿಂದ ಬಾಣಂತಿ ಸಾವಾಗಿದೆ’

‘ಹೆರಿಗೆ ನೋವು ಕಾಣಿಸಿಕೊಂಡ ಬಹಳ ಹೊತ್ತಿನ ನಂತರ ಕನ್ಯಾಕುಮಾರಿ ಅವರನ್ನು ಜಿಮ್ಸ್‌ಗೆ ತರಲಾಗಿದೆ. ಅಷ್ಟೊತ್ತಿಗೆ ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು (ಐಒಡಿ). ಇಂಥ ಪ್ರಕರಣಗಳಲ್ಲಿ ತಾಯಿ ಪ್ರಾಣಕ್ಕೂ ಅಪಾಯ ಆಗುವ ಸಾಧ್ಯತೆ ಹೆಚ್ಚು. ಆದರೂ ನಮ್ಮ ವೈದ್ಯರು ಅವರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇಂಥ ಪ್ರಕರಣಗಳನ್ನು ಯಾರೂ ನಿರ್ಲಕ್ಷ್ಯ ಮಾಡುವುದಿಲ್ಲ’ ಎಂದು ಜಿಮ್ಸ್‌ ನಿರ್ದೇಶಕ ಡಾ.ಕವಿತಾ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ಹೆರಿಗೆ ನಂತರ ರಕ್ತಹೆ‍ಪ್ಪುಗಟ್ಟುವಿಕೆ (ಎಂಬಾಲಿಸಂ) ಅಥವಾ ಮಗುವಿನ ಅವಶೇಷಗಳ (ಮೆಕೋನಿಯಂ) ಕಾರಣ ಬಾಣಂತಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಮರಣೋತ್ತರ ಪರೀಕ್ಷೆ ಬಳಿಕ ಪೂರ್ಣ ವಿವರ ಗೊತ್ತಾಗಲಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT