ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ, ಅನುಕಂಪದ ನೌಕರಿಗೆ ಶೀಘ್ರ ವೇದಿಕೆ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಜು ಗೌಡ ಭರವಸೆ
Last Updated 25 ಫೆಬ್ರುವರಿ 2021, 9:54 IST
ಅಕ್ಷರ ಗಾತ್ರ

ಕಲಬುರ್ಗಿ: ‘ಒಳಚರಂಡಿ ಮಂಡಳಿ ಗುತ್ತಿಗೆಯನ್ನು ಖಾಸಗಿ ಸಂಪನಿಗೆ ವಹಿಸದಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳಲಾಗುವುದು. ಒಂದು ವೇಳೆ ವಹಿಸಿದರೂ ಕಾರ್ಮಿಕರಿಗೆ ಯಾವುದೇ ತೊಂದರೆ ಆಗದಂತೆ ಕಾಯುತ್ತೇನೆ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ರಾಜು ಗೌಡ ಭರವಸೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಸ್‌.ಸಿ, ಎಸ್‌.ಟಿ ಹೊರಗುತ್ತಿಗೆ ನೌಕರರ ರಾಜ್ಯಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‌‘ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಮುಂತಾದ ಮಹಾನಗರಗಳಲ್ಲಿ ಈಗಾಗಲೇ ಎಲ್‌ ಅಂಡ್‌ ಟಿ ಕಂಪನಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಗಳು ಮುಗಿದುಹೋಗಿವೆ. ಇದು ನಾನು ಅಧ್ಯಕ್ಷನಾಗುವ ಮುಂಚೆಯೇ ನಡೆದ ಪ್ರಕ್ರಿಯೆ. ಗುತ್ತಿಗೆ ರದ್ದು ಮಾಡ ಯತ್ನಿಸುತ್ತೇನೆ. ಒಂದು ವೇಳೆ ಕಾನೂನು ಚೌಕಟ್ಟಿನಲ್ಲಿ ಅದು ಸಾಧ್ಯವಾಗದೇ ಇದ್ದಲ್ಲಿ ಈಗಿರುವ ಯಾವ ನೌಕರರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಯಾರ ನೌಕರಿಯೂ ಹೋಗುವುದಿಲ್ಲ. ಈ ಬಗ್ಗೆ ಕಾಳಜಿ ಬೇಡ’ ಎಂದರು.

‘ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕಾದ ಬಹಳಷ್ಟು ಅರ್ಜಿಗಳು ಹಾಗೇ ಉಳಿದಿವೆ. ಇವುಗಳನ್ನು ಆದ್ಯತೆ ಮೇಲೆ ತೆಗೆದುಕೊಂಡು, ಶೀಘ್ರದಲ್ಲೇ ಎಲ್ಲ ಫಲಾನುಭವಿಗಳಿಗೂ ಅನುಕಂಪದ ನೌಕರಿ ಕೊಡಲಾಗುವುದು. ಅದರ ಬೆನ್ನಿಗೇ ಬಡ್ತಿ ನೀಡುವ ಪ್ರಕ್ರಿಯೆಯನ್ನೂ ಆರಂಭಿಸಲಾಗುವುದು. ಇವೆರಡೂ ಮುಗಿದ ಬಳಿಕ ಮಂಡಳಿಯಲ್ಲಿ ಎಷ್ಟು ನೌಕರರ ಹುದ್ದೆ ಖಾಲಿ ಇವೆ ಎಂಬುದು ತಿಳಿಯುತ್ತದೆ. ಆಗ ಹೊಸ ನೇಮಕಾತಿಗಳನ್ನು ಆರಂಭಿಸಲಾಗವುದು’ ಎಂದೂ ಶಾಸಕರು ತಿಳಿಸಿದರು.

‘ಲಾಕ್‌ಡೌನ್‌ ಕಾರಣ ಮಂಡಳಿಗೆ ₹ 8 ಕೋಟಿ ಹಾನಿ ಸಂಭವಿಸಿದೆ. ಬರುವ ಎರಡು ತಿಂಗಳಲ್ಲಿ ಈ ಹಾನಿಯನ್ನು ಸರಿದೂಗಿಸಬೇಕಿದೆ. ನಂತರ ಸುಧಾರಣಾ ಕ್ರಮ ಕೈಗೊಳ್ಳಲು ಸಾಧ್ಯ. ಮಂಡಳಿಗೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ. ನಾವು ದುಡಿದು ಗಳಿಸಿಯೇ ನಮ್ಮ ಸುಧಾರಣೆ ಮಾಡಿಕೊಳ್ಳಬೇಕು. ಹಾಗಾಗಿ, ಮಂಡಳಿಯ ಸುಧಾರಣೆಗೆ ನಾನೂ ಸೇರಿದಂತೆ ಪ್ರತಿಯೊಬ್ಬ ಕಾರ್ಮಿಕ, ಅಧಿಕಾರಿ ಸಮಾನ ಜವಾಬ್ದಾರರು. ಈ ನಿಟ್ಟಿನಲ್ಲಿ ನಾವು ಒಂದು ಕುಟುಂಬವಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ’ ಎಂದೂ ಅವರು ಕರೆ ನೀಡಿದರು.

‘ಸಂಘದಿಂದ ಸುಮಾರು 20 ಬೇಡಿಕೆಗಳನ್ನು ಹಲವು ವರ್ಷಗಳಿಂದ ಸಲ್ಲಿಸುತ್ತಲೇ ಬಂದಿದ್ದಾರೆ. ಇದರಲ್ಲಿ ಈಗಾಗಲೇ ಹಲವನ್ನು ಈಡೇರಿಸುವ ಕೆಲಸ ನಡೆದಿದೆ. ನಾನು ಅಧ್ಯಕ್ಷನಾಗಿರುವವರೆಗೂ ಶೇ 90ರಷ್ಟು ಬೇಡಿಕೆಗಳನ್ನು ಈಡೇರಿಸಲು ಯತ್ನ ಮಾಡುತ್ತೇನೆ. ದುಡಿಯುವ ವರ್ಗಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದೂ ಹೇಳಿದರು.

ಇದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸಮಾವೇಶ ಉದ್ಘಾಟಿಸಿದರು. ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಎಚ್.ಎಂ. ಕುಮಾರ್‌ ಮಾತನಾಡಿದರು. ಮಂಡಳಿಯ ಕಲಬುರ್ಗಿ ವಲಯದ ಮುಖ್ಯ ಎಂಜಿನಿಯರ್‌ ಎಸ್‌.ಎನ್‌. ದಿನೇಶ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಚಂದ್ರಶೇಖರ ವೇದಿಕೆ ಮೇಲಿದ್ದರು. ಸಂಘದ ಕಲಬುರ್ಗಿ ವಿಭಾಗದ ಅಧ್ಯಕ್ಷ ಸುನೀಲ ಮಾನಪಡೆ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT