ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲ್ಯ ವಿವಾಹ ತಡೆಗೆ ಶ್ರಮಿಸಿ’

2022ರವರೆಗೆ ಒಂದೂ ಬಾಲ್ಯ ವಿವಾಹ ನಡೆಯದಂತೆ ತಡೆಯಲು ಸಂಕಲ್ಪ: ಜಯಶ್ರೀ ಚನ್ನಾಳ
Last Updated 8 ಜನವರಿ 2021, 5:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬಾಲ್ಯ ವಿವಾಹ ಮುಕ್ತ’ ಜಿಲ್ಲೆಯನ್ನಾಗಿಸಲು ಕಾರ್ಯಕ್ರಮ ಜಾರಿಗೊಳಿಸಿದ್ದು,2022ರ ಜನವರಿವರೆಗೂ ಒಂದೇ ಒಂದು ಬಾಲ್ಯವಿವಾಹ ಪ್ರಕರಣ ನಡೆಯದಂತೆ ನೋಡಿಕೊಳ್ಳುವ ಸಂಕಲ್ಪ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ಜಯಶ್ರೀ ಚನ್ನಾಳ ತಿಳಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆ, ಜಿಲ್ಲಾ‌ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ನಡೆದ ‘ಬಾಲನ್ಯಾಯ ಕಾಯ್ದೆ 2015ರ’ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಲಾಕ್‌ಡೌನ್‌ ವೇಳೆ ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಬಾಲ್ಯವಿವಾಹ, ಬಾಲ ದುಡಿಮೆ ಪ್ರಕರಣಗಳು ಹೆಚ್ಚಾಗಿದ್ದವು. ಇದು ಆತಂಕಕಾರಿ ಬೆಳವಣಿಗೆ. ಇದೆಲ್ಲದಕ್ಕೂ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಿ, ಮಕ್ಕಳು ಶಾಲೆಗೆ ಹೋಗುವಂತೆ ನೋಡಿಕೊಳ್ಳಬೇಕು. ಉತ್ತಮ ಶಿಕ್ಷಣ ನೀಡಬೇಕು’ ಎಂದು ತಿಳಿಸಿದರು.

‘ಮಕ್ಕಳ ಬೆಳವಣಿಗೆಗೆ ಸರ್ಕಾರದಿಂದ ಹಾಲು, ಮೊಟ್ಟೆ, ಪೌಷ್ಟಿಕ ಆಹಾರ ನೀಡಲಾಗುತ್ತಿದ್ದರೂ ನಿರೀಕ್ಷಿತ ಮಟ್ಟದ ಪ್ರಗತಿ ಸಾಧ್ಯವಾಗುತ್ತಿಲ್ಲ. ಇಂದಿಗೂ ಮಕ್ಕಳು ಪೌಷ್ಟಿಕಾಂಶ ಕೊರತೆ ಎದುರಿಸುತ್ತಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ಪ್ರಮಾಣ ಜಾಸ್ತಿ ಇದೆ. ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಬಾಲ್ಯ ವಿವಾಹ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚು ಕಂಡುಬರುತ್ತಿವೆ. ಬಾಲ್ಯವಿವಾಹದ ಬಗ್ಗೆ ಮಾಹಿತಿ ನೀಡುವವರಿಗೆ ಇಲಾಖೆಯಿಂದ ಪ್ರೋತ್ಸಾಹ ಧನ ನೀಡುವ ಚಿಂತನೆಯಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಸೇನ ಗುಡೂರು ಮಾತನಾಡಿ, ‘ಸರ್ಕಾರ ಹಲವಾರು ಕಾನೂನುಗಳನ್ನು ರೂಪಿಸಿದ್ದರೂ ಬಾಲ್ಯವಿವಾಹ, ಬಾಲದುಡಿಮೆ, ದೌರ್ಜನ್ಯ ಯಾಕೆ ನಿಲ್ಲುತ್ತಿಲ್ಲ ಎಂಬುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

‘ಇಂದಿನ ಮಕ್ಕಳು ತುಂಬಾ ಸೂಕ್ಷ್ಮವಾಗುತ್ತಿದ್ದಾರೆ. ಪೋಷಕರು, ಶಿಕ್ಷಕರು ಅವರೊಂದಿಗೆ ಮುಕ್ತವಾಗಿ ಮಾತನಾಡಬೇಕಿದೆ. ಅವರ ಸಮಸ್ಯೆ ಅರಿತು ಪರಿಹಾರ ಸೂಚಿಸುವ ಹೊಣೆಗಾರಿಕೆ ನಿಭಾಯಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಜಿಮ್ಸ್‌ನ ಇ.ಎನ್‌.ಟಿ ವಿಭಾಗದ ಮುಖ್ಯಸ್ಥರಾದ ಡಾ.ರೇಣುಕಾ ಸತೀಶ ಮಾತನಾಡಿ, ‘ಈ ಕೋವಿಡ್‌ ಕಾಲಘಟ್ಟದಲ್ಲಿ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ಬಗ್ಗೆ ಹೆಚ್ಚಿನ ಒತ್ತು ನೀಡುವುದು ಅತ್ಯವಶ್ಯ’ ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ರೀನಾ ಡಿಸೋಜಾ ಮಾತನಾಡಿ, ‘ಮಕ್ಕಳ ದೃಷ್ಟಿಕೋನದಿಂದ ನೋಡಿದಾಗ ಮಾತ್ರ ಮಗುವಿನ ಸಮಸ್ಯೆ ಅಧಿಕಾರಿಗಳಿಗೆ ಅರಿವಾಗುತ್ತದೆ. ಮಕ್ಕಳ ರಕ್ಷಣೆ ಬಳಿಕ ಅವರಿಗೆ ಉತ್ತಮ ಭವಿಷ್ಯ ರೂಪಿಸಲು ಶ್ರಮಿಸಬೇಕು’ ಎಂದರು.

ಬಾಲ ನ್ಯಾಯ ಮಂಡಳಿ ಸದಸ್ಯೆ ಗೀತಾ ಸಜ್ಜನಶೆಟ್ಟಿ, ಮಕ್ಕಳ ಸಹಾಯವಾಣಿ ನಿರ್ದೇಶಕರು, ಸಿಬ್ಬಂದಿ, ಮಕ್ಕಳ ಪಾಲನಾ ಸಂಸ್ಥೆಗಳ ಅಧೀಕ್ಷಕರು, ಮುಖ್ಯಸ್ಥರು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

ಮಕ್ಕಳ ಸಹಾಯವಾಣಿ ನೋಡಲ್ ಕೇಂದ್ರದ ನಿರ್ದೇಶಕಿ ಡಾ.ರೇಣುಕಾ ಗುಬ್ಬೆವಾಡ, ಡಾನ್‌ ಬಾಸ್ಕೊ ಸಂಸ್ಥೆಯ ನಿರ್ದೇಶಕ ಫಾದರ ಸಜೀ ಜಾರ್ಜ್‌, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ ಇದ್ದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ, ಗಣೇಶ ಮತ್ತು ನೇತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT