ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೌದ್ಧ ಧರ್ಮ ಉಳಿಸಲು ಬದ್ಧತೆ ತೋರದ ಪ್ರಧಾನಿ’: ಭಂತೆ ನಾಗಾರ್ಜುನ ಸುರಾಯಿ ಸಸಾಯಿ

ಸನ್ನತಿಯ ಧಮ್ಮ ಉತ್ಸವದಲ್ಲಿ ನಾಗಪುರದ ಭಂತೆ ನಾಗಾರ್ಜುನ ಸುರಾಯಿ ಸಸಾಯಿ
Last Updated 14 ನವೆಂಬರ್ 2021, 14:32 IST
ಅಕ್ಷರ ಗಾತ್ರ

ಸನ್ನತಿ (ವಾಡಿ): ‘ಪ್ರಧಾನಿ ನರೇಂದ್ರ ಮೋದಿಯವರು ಹೊರದೇಶಗಳಿಗೆ ಭೇಟಿ ನೀಡಿದಾಗ ನಾನು ಬುದ್ದನ ನಾಡಿನಿಂದ ಬಂದಿದ್ದೇನೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ಬುದ್ಧನ ನೆಲೆಗಳು, ಬುದ್ಧನ ಕಾಲದ ಸಾಕ್ಷ್ಯಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆ. ಅವುಗಳ ಸಂರಕ್ಷಣೆಗೆ ಬದ್ದತೆ ತೋರುತ್ತಿಲ್ಲ’ ಎಂದು ನಾಗಪುರದ ದೀಕ್ಷಾ ಭೂಮಿ ಅಧ್ಯಕ್ಷರಾದ ಭಂತೆ ನಾಗಾರ್ಜುನ ಸುರಾಯಿ ಸಸಾಯಿ ಬೇಸರ ವ್ಯಕ್ತಪಡಿಸಿದರು.

ಸಮೀಪದ ಸನ್ನತಿ ಗ್ರಾಮದಲ್ಲಿ ‘ಅರಿವಿನ ನಡಿಗೆ ಬೌದ್ಧ ಧಮ್ಮದ ಕಡೆಗೆ’ ಎಂಬ ಘೋಷಣೆಯೊಂದಿಗೆ ಶಾಕ್ಯ ಮಹಾಚೈತ್ಯ ಬುದ್ಧ ವಿಹಾರದಲ್ಲಿ ನಡೆದ ಧಮ್ಮ ಉತ್ಸವ ಹಾಗೂ ಬುದ್ದನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬುದ್ದನ ಜನನದ ಮೂಲಕ ಇಡೀ ಜಗತ್ತಿಗೆ ಶಾಂತಿಯ ಸಂದೇಶದ ಬೀಜಮಂತ್ರ ಬಿತ್ತಲಾಯಿತು. ಆದರೆ ಸ್ವತಃ ಬುದ್ದನ ನಾಡಿನ ಸಾಮರಸ್ಯಕ್ಕೆ ಪೆಟ್ಟು ನೀಡುವ ಕೆಲಸ ಇಂದು ನಡೆಯುತ್ತಿದೆ. ಇತಿಹಾಸದ ಒಂದು ಕಾಲಘಟ್ಟದಲ್ಲಿ ತನ್ನ ಶಾಂತಿ ಸಂದೇಶಗಳ ಮೂಲಕ ಇಡೀ ಜಗತ್ತೇ ಆಳಿದ ಬೌದ್ಧ ಧರ್ಮ ಇಂದು ಅಪಾಯದ ಅಂಚಿನಲ್ಲಿದೆ. ನಾವು ಬುದ್ಧನ ಅನುಯಾಯಿಗಳೆಂದು ಹೆಮ್ಮೆಯಿಂದ ಹೇಳಿದರೆ ಸಾಲದು. ಬುದ್ದನ ವಿಚಾರಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಜೀವನವೇ ಬುದ್ದನ ತತ್ವಗಳಿಗೆ ಜೀವಂತ ನಿದರ್ಶನವಾಗಬೇಕು’ ಎಂದರು.

ವಿಜಯಪುರದ ಭಂತೆ ಬೋಧಿಪ್ರಜ್ಞೆ ಮಾತನಾಡಿ, ‘ಬುದ್ದನ ಅನುಯಾಯಿಗಳಾದ ನಾವುಗಳು ಸ್ವಾಭಿಮಾನದ ಬದುಕು ಪಕ್ಕಕ್ಕಿಟ್ಟು ಮೂಢನಂಬಿಕೆಗಳ ಬೆನ್ನು ಹತ್ತಿದ್ದೇವೆ. ಬುದ್ದನ ಪಂಚಶೀಲ ತತ್ವಗಳಿಗೆ ಬುದ್ದನ ಅನುಯಾಯಿಗಳೇ ಎಳ್ಳುನೀರು ಬಿಡುತ್ತಿದ್ದಾರೆ. ಸ್ವಾಭಿಮಾನವಿಲ್ಲದವರ ಧ್ವನಿ ಯಾವತ್ತಿಗೂ ಅನ್ಯಾಯದ ವಿರುದ್ದ ಮಾತನಾಡುವುದಿಲ್ಲ. ದೇಶದಲ್ಲಿ ಬುದ್ದನ ಅಸ್ತಿತ್ವಕ್ಕೆ ಬಹುದೊಡ್ಡ ಸಂಚಕಾರ ಬಂದೊದಗಿದೆ. ಆದರೆ ನಾವುಗಳು ಮಾತ್ರ ಗಾಢ ನಿದ್ರೆಯಲ್ಲಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ನಮ್ಮ ಬದುಕಿನ ಮೂಲಮಂತ್ರವಾಗಬೇಕು’ ಎಂದರು.

ಹತ್ಯಾಳದ ಭಂತೆ ಧಮ್ಮನಾಗ, ಭಂತೆ ಧಮ್ಮನಂದ, ಭಂತೆ ವರಜ್ಯೋತಿ, ಭಂತೆ ಜ್ಞಾನಸಾಗರ, ಭಂತೆ ಧರ್ಮಪಾಲ, ಭಂತೆ ಸಂಘಪಾಲ, ಭಂತೆ ಸಾರಿಪುತ್ರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ವೇದಿಕೆ ಮೇಲೆ ‌ದಲಿತ ಮುಖಂಡ ಡಾ. ವಿಠ್ಠಲ ದೊಡ್ಡಮನಿ, ಕೆಬಿಜೆಎನ್‌ಎಲ್ ತಾಂತ್ರಿಕ ನಿರ್ದೇಶಕ ಕೆ.ಜಿ.ಮಹೇಶ, ಬುದ್ಧ ಧಮ್ಮ ಸಂಘದ ಗೌರವಾಧ್ಯಕ್ಷ ಟೋಪಣ್ಣ ಕೊಮಟೆ, ಸುರೇಶ ಶರ್ಮಾ, ಮಲ್ಲಿನಾಥಗೌಡ ಮಾಲಿ ಪಾಟೀಲ, ಮಾಪಣ್ಣ ಗಂಜಿಗಿರಿ, ಲಕ್ಷ್ಮೀಕಾಂತ ಹುಬ್ಳಿ, ಸುರೇಶ ಹಾದಿಮನಿ, ಮಲ್ಲಪ್ಪ ಹೊಸಮನಿ, ರಣಧೀರ ಹೊಸಮನಿ, ಸಾಬಣ್ಣ ಬನ್ನೆಟ್ಟಿ, ಬಾಬು ಬಂದಳ್ಳಿ ಇದ್ದರು.

ಸಮಾರಂಭದಲ್ಲಿ ನಿವೃತ್ತ ಅಧಿಕಾರಿ ರವಿಕಿರಣ ಒಂಟಿ ಅವರನ್ನು ಸನ್ಮಾನಿಸಲಾಯಿತು. ಮುಖಂಡ ಸುರೇಶ ಮೆಂಗನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗಪ್ಪ ಯಾದಗಿರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT