ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಬೇಕಾದರೆ ಯುವತಿಯರು ಮಂಚ ಹತ್ತಬೇಕು ಎಂಬಂತಾಗಿದೆ: ಪ್ರಿಯಾಂಕ್‌ ಖರ್ಗೆ ಕಿಡಿ

ಕೆಪಿಟಿಸಿಎಲ್‌ ನೇಮಕಾತಿಯಲ್ಲೂ ಲಕ್ಷಾಂತರ ಡೀಲ್ ನಡೆದಿರುವ ಆರೋಪ
Last Updated 12 ಆಗಸ್ಟ್ 2022, 8:16 IST
ಅಕ್ಷರ ಗಾತ್ರ

ಕಲಬುರಗಿ: ‘ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉದ್ಯೋಗ ಪಡೆಯಬೇಕು ಎಂದರೆ ಯುವತಿಯರು ಮಂಚ ಹತ್ತಬೇಕಾಗಿದೆ’ ಎಂದು ಕೆಪಿಸಿಸಿ ವಕ್ತಾರರೂ ಆದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು. ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದ್ದು ಇದೊಂದು‌ ಲಂಚ–ಮಂಚದ ಸರ್ಕಾರವಾಗಿದೆ. ಯುವತಿಯ ಕೆಲಸ ಮಾಡಿಸಿಕೊಡಲು ಮಂಚ ಹತ್ತಲು ಸಚಿವರೊಬ್ಬರು ಹೇಳಿದ್ದರು. ಹಗರಣ ಬೆಳಕಿಗೆ ಬಂದ ಬಳಿಕ ಅವರು ರಾಜೀನಾಮೆ ನೀಡಿದ್ದೇ ನನ್ನ ಮಾತಿಗೆ ಸಾಕ್ಷಿಯಾಗಿದೆ’ ಎಂದರು.

‘ಕೆಪಿಟಿಸಿಎಲ್‌ನ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಸಿವಿಲ್ ಎಂಜಿನಿಯರ್ ಸೇರಿದಂತೆ ಒಟ್ಟು 1492 ಹುದ್ದೆಗಳಿಗೆ ನೇಮಕಾತಿ ನಡೆಸಿದೆ. ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಗೋಕಾಕನಲ್ಲಿ ಬಂಧನಕ್ಕೊಳಗಾಗಿದ್ದಾನೆ. ನನಗಿರುವ ಮಾಹಿತಿಯ ಪ್ರಕಾರ ಒಟ್ಟು 600 ಹುದ್ದೆಗಳಿಗೆ ಡೀಲ್‌ ನಡೆದಿರುವ ಸಾಧ್ಯತೆ ಇದೆ. ಎಇ ಹುದ್ದೆಗೆ ₹ 50 ಲಕ್ಷ, ಜೆಇ ಹುದ್ದೆಗೆ ₹ 30 ಲಕ್ಷದವರೆಗೆ ಹಣ ಪಡೆದಿರುವ ಶಂಕೆ ಇದೆ. ಇದೊಂದರಲ್ಲೇ ₹ 300 ಕೋಟಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದ್ದು, ಕೂಡಲೇ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಇಲ್ಲವೇ ಎಸ್‌ಐಟಿ ರಚಿಸಬೇಕು’ ಎಂದು ಒತ್ತಾಯಿಸಿದರು.

‘ಪ್ರತಿಯೊಂದು ಪರೀಕ್ಷೆಗಳಲ್ಲಿ ಅಕ್ರಮ ನಡೆದರೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಏನೇ ಅಕ್ರಮ ಮಾಡಿದರೂ ನಡೆಯುತ್ತಿದೆ ಎನ್ನುವುದು ಅಕ್ರಮ ಮಾಡುವವರಿಗೆ ಹಾಗೂ ಮಧ್ಯವರ್ತಿಗಳಿಗೆ ಗೊತ್ತಾಗಿದೆ. ಆದ್ದರಿಂದಲೇ ಕೆಪಿಟಿಸಿಎಲ್‌ನ ಹುದ್ದೆಗಳಿಗೆ ಅರ್ಜಿ ಹಾಕಿದ ಸುಮಾರು 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. 40 ಪರ್ಸೆಂಟ್ ಕಮಿಷನ್ ಸಲುವಾಗಿ ವಿಧಾನಸೌಧವನ್ನೇ ವ್ಯಾಪಾರ ಸೌಧ ಮಾಡಿಕೊಂಡವರ ಬಗ್ಗೆ ಅಭ್ಯರ್ಥಿಗಳಿಗೆ ತೀವ್ರ ಅಸಮಾಧಾನವಿದೆ’ ಎಂದು ಟೀಕಿಸಿದರು.‌

ಕಾಂಗ್ರೆಸ್‌ನಿಂದ 10 ಸಾವಿರ ಧ್ವಜ: ‘ಬಿಜೆಪಿಯು ರಾಷ್ಟ್ರಭಕ್ತಿಯನ್ನೂ ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದೆ. ಯಾರ ಗಮನಕ್ಕೂ ತಾರದಂತೆ ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜವನ್ನು ಬಳಸಲು ಅವಕಾಶ ಮಾಡಿದೆ. ಇದರ ದೊಡ್ಡ ಫಲಾನುಭವಿ ರಿಲಯನ್ಸ್‌ ಕಂಪನಿಯಾಗಿದ್ದು, ಅಧಿಕಾರಿಗಳನ್ನು ಧ್ವಜ ಮಾರಾಟ ಮಾಡುವ ಸೇಲ್ಸ್‌ಮನ್‌ಗಳನ್ನಾಗಿ ಮಾಡಲಾಗಿದೆ. ರೈಲ್ವೆ ಸಿಬ್ಬಂದಿಯ ಸಂಬಳದಿಂದ ವೇತನ ಕಡಿತ ಮಾಡಿ ಒತ್ತಾಯಪೂರ್ವಕವಾಗಿ ಅವರಿಗೆ ಧ್ವಜಗಳನ್ನು ನೀಡಲಾಗುತ್ತಿದೆ. ಕಾಶ್ಮೀರ್ ಫೈಲ್ಸ್‌ ಸಿನಿಮಾಗೆ ಯಾರು ಕೇಳಿದೆಯೂ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರಕ್ಕೆ ಧ್ವಜವನ್ನು ಉಚಿತವಾಗಿ ನೀಡುವ ಯೋಗ್ಯತೆ ಇಲ್ಲವೇ’ ಎಂದು ಪ್ರಿಯಾಂಕ್ ಪ್ರಶ್ನಿಸಿದರು.

‘ಅಧಿಕಾರಿಗಳು ನನಗೂ ಕರೆ ಮಾಡಿ 20 ಸಾವಿರ ಧ್ವಜ ಖರೀದಿಸುವಂತೆ ಹೇಳಿದರು. ನಾನು ಒಪ್ಪಿಲ್ಲ. ಪಾಲಿಸ್ಟರ್ ಧ್ವಜದ ಬದಲಾಗಿ ಜಿಲ್ಲಾ ಕಾಂಗ್ರೆಸ್‌ನಿಂದ 10 ಸಾವಿರ ಖಾದಿ ಧ್ವಜಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT