ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಿಜೆಪಿ ಸರ್ಕಾರವೇ ಹಿಂದೂ ವಿರೋಧಿ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ
Last Updated 6 ಏಪ್ರಿಲ್ 2022, 9:51 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಬಿಜೆಪಿ ಸರ್ಕಾರ ತಾನೇ ಘೋಷಿಸಿರುವ ವಿವಿಧ ಸಮುದಾಯಗಳ ನಿಗಮ, ಮಂಡಳಿಗಳಿಗೆ ಘೋಷಿಸಿದ ಹಣ ಬಿಡುಗಡೆ ಮಾಡದೇ ಇರುವ ಮೂಲಕ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ವಿಶ್ವಕರ್ಮರು, ಒಕ್ಕಲಿಗರು, ವೀರಶೈವ-ಲಿಂಗಾಯತ, ಮರಾಠ ಅಭಿವೃದ್ಧಿ ನಿಗಮಗಳಿಗೆ ಹಣವನ್ನೇ ಬಿಡುಗಡೆ ಮಾಡಿಲ್ಲ. ಇವರು ಹಿಂದೂಗಳಲ್ಲವೇ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ನಿಗಮಗಳ ಘೋಷಣೆ ಮಾಡುವ ಸರ್ಕಾರ ಅವುಗಳಿಗೆ ಘೋಷಿತ ಅನುದಾನ ಬಿಡುಗಡೆ ಮಾಡಿಲ್ಲ. ವೀರಶೈವ ಅಭಿವೃದ್ದಿ ನಿಗಮಕ್ಕೆ ₹ 500 ಕೋಟಿ ಘೋಷಿಸಿ, ₹ 100 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ ₹ 7.99 ಕೋಟಿ ಘೋಷಿಸಲಾಗಿದೆ. ಆದರೆ ಆರ್ಥಿಕ ಅಭಿವೃದ್ದಿ ಮಾತ್ರ ಶೂನ್ಯ. ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೆ ₹ 8.41 ಕೋಟಿ ಅನುದಾನ ಘೋಷಿಸಲಾಗಿದೆ. ಆದರೆ ಆರ್ಥಿಕ ಪ್ರಗತಿ ಶೂನ್ಯ. ಒಕ್ಕಲಿಗ ಅಭಿವೃದ್ದಿ ನಿಗಮ ಇನ್ನೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಸವಕಲ್ಯಾಣ ಚುನಾವಣೆ ಸಂದರ್ಭದಲ್ಲಿ ಘೋಷಿಸಿಸ್ದ ಮರಾಠ ಅಭಿವೃದ್ದಿ ನಿಗಮ ಇನ್ನೂ ಸ್ಥಾಪನೆಯಾಗಿಲ್ಲ. ಉಪ್ಪಾರ ಅಭಿವೃದ್ದಿ ನಿಗಮಕ್ಕೆ ₹ 6.79 ಕೋಟಿ ಘೋಷಿಲಾಗಿದೆ. ಆದರೆ ಹಣ ಬಿಡುಗಡೆಯಾಗಿಲ್ಲ. ಆರ್ಯ ವೈಶ್ಯ ಸಮಾಜಕ್ಕೆ‌ ₹ 5 ಕೋಟಿ ಅನುದಾನ ಘೋಷಿಸಿತ್ತು. ಆದರೆ ಅವುಗಳಲ್ಲಿ ಖರ್ಚಾಗಿದ್ದುದು ₹ 89.09 ಲಕ್ಷ. ಅಲೆಮಾರಿ ಜನಾಂಗದ ನಿಗಮಕ್ಕೆ ₹ 12.29 ಕೋಟಿ ಅನುದಾನ ಘೋಷಿಸಿದೆ. ಆದರೆ ಆರ್ಥಿಕ ಗುರಿ ಸಾಧನೆಯಾಗಿಲ್ಲ. ಕಾಡುಗೊಲ್ಲ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಅದೂ ಸ್ಥಾಪನೆಯಾಗಿಲ್ಲ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಬಳಿ ಹೇಳಿಕೊಳ್ಳಲು ಏನೂ ಇಲ್ಲ.‌ ಹಾಗಾಗಿ, ಹಿಜಾಬ್, ಹಲಾಲ್ ಕಟ್, ಜಟ್ಕಾ, ಮಸೀದಿಗಳಲ್ಲಿ ಧ್ವನಿವರ್ಧಕ ಇಂತಹ ಜನರನ್ನು ಕೆರಳಿಸುವ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದರು.

ಕೋಮು ಭಾವನೆ ಕೆರಳಿದ ಇನ್ನೂ ಒಂದೆರಡು ಚುನಾವಣೆ ಗೆಲ್ಲಬಹುದು. ಆದರೆ, ನೂರಾರು ವರ್ಷ ಜನರನ್ನು ಬಾಧಿಸಲಿದೆ. ಕರ್ನಾಟಕ ಮೊದಲಿನಿಂದಲೂ ಶಾಂತಿ ಸಹಬಾಳ್ವೆಗೆ ಹೆಸರಾದ ರಾಜ್ಯವಾಗಿದ್ದು, ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಹಾಳು ಮಾಡುತ್ತಿದ್ದಾರೆ. ವಿವಿಧ ಸೇನೆ, ದಳಗಳು ಹಲಾಲ್ ವಿವಾದದ ಬಗ್ಗೆ ಮಾತನಾಡುತ್ತಿವೆ. ಅದಾನಿ, ಬಾಬಾ ರಾಮದೇವ್ ಸೇರಿದಂತೆ ಪ್ರಧಾನಿ ಮೋದಿ ಅವರಿಗೆ ಆಪ್ತರಾದವರೇ ಅರಬ್ ರಾಷ್ಟ್ರಗಳಿಗೆ ಹಲಾಲ್ ಮಾಂಸವನ್ನು ರಫ್ತು ಮಾಡುತ್ತಿದ್ದಾರೆ. ತಾಕತ್ತಿದ್ದರೆ ಇಂತಹ ಸಂಸ್ಥೆಗಳಿಗೆ ಹಿಂದುತ್ವಪರ ಸಂಘಟನೆಗಳು ಬೀಗ ಜಡಿಯಲಿ ಎಂದು ಸವಾಲು ಹಾಕಿದರು‌.

ವಿಧಾನಸೌಧಕ್ಕೆ ಬೆಂಕಿ ಹಚ್ಚಿ: ಯಾವುದಾದರೂ ವಿವಾದದ ಬಗ್ಗೆ ಪ್ರಶ್ನಿಸಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ್ಯಾಯಾಲಯಕ್ಕೆ ಹೋಗಲು ಹೇಳುತ್ತಾರೆ. ಒಂದು ಸರ್ಕಾರ ಶಾಸನಬದ್ಧವಾಗಿ‌ ನಡೆದುಕೊಳ್ಳದಿದ್ದಾಗ ಜನರು ನ್ಯಾಯಾಲಯದ ‌ಮೊರೆ ಹೋಗುತ್ತಾರೆ. ಪ್ರತಿಯೊಂದಕ್ಕೂ ನ್ಯಾಯಾಲಯಕ್ಕೆ ಹೋಗುವುದಾದರೆ ವಿಧಾನಸೌಧ ಯಾಕಿರಬೇಕು. ಅದಕ್ಕೆ ಬೆಂಕಿ ಹಚ್ಚಿರಿ ಎಂದು ಆಕ್ರೋಶದಿಂದ ನುಡಿದರು.

ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ,‌ ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ‌ ಕಮಕನೂರ, ಮಾಜಿ ಮೇಯರ್ ಶರಣು ಮೋದಿ, ಜಿ.ಪಂ.‌ ಮಾಜಿ ಸದಸ್ಯ ಅರುಣಕುಮಾರ್ ಪಾಟೀಲ, ಡಾ. ಕಿರಣ ದೇಶಮುಖ, ಈರಣ್ಣ ಝಳಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT