ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

70 ವರ್ಷದ ಮಾತು ಬೇಡ;10 ವರ್ಷದ್ದು ಮಾತಾಡಿ: ಪ್ರಿಯಾಂಕಾ ಗಾಂಧಿ

ಸೇಡಂನಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ
Published 29 ಏಪ್ರಿಲ್ 2024, 14:24 IST
Last Updated 29 ಏಪ್ರಿಲ್ 2024, 14:24 IST
ಅಕ್ಷರ ಗಾತ್ರ

ಸೇಡಂ (ಕಲಬುರಗಿ ಜಿಲ್ಲೆ): ‘ಮೋದಿಜಿಯವರೇ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬ ಮಾತು ಬೇಡ, ನಿಮ್ಮ ಹತ್ತು ವರ್ಷಗಳಲ್ಲಿ ಏನು ಮಾಡಿದ್ದೀರಿ ಜವಾಬು ಕೊಡಿ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದರು.

ಸೇಡಂ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಅಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಿಮ್ಮ ಅವಧಿಯಲ್ಲಿ ಜನರ ಮನೆಗಳಿಗೆ ಕುಡಿಯು ನೀರು ಬರಲಿಲ್ಲ, ಉದ್ಯೋಗ ಸೃಷ್ಟಿಯಾಗಲಿಲ್ಲ. ಸಾರ್ವಜನಿಕ ಉದ್ಯಮಗಳು, ಬಂದರುಗಳು, ವಿಮಾನ ನಿಲ್ದಾಣಗಳನ್ನು ನಿಮ್ಮ ಸಿರಿವಂತ ಮಿತ್ರರಿಗೆ ಹಂಚಿಕೆ ಮಾಡಿದ್ದೀರಿ. ಜಿಎಸ್ಟಿ ಎಂಬ ಕರಾಳ ತೆರಿಗೆ ನೀತಿಯನ್ನು ಹೇರುವ ಮೂಲಕ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಬೀದಿಗೆ ತಂದಿದ್ದೀರಿ’ ಎಂದು ಹರಿಹಾಯ್ದರು.

‘ಕಾಂಗ್ರೆಸ್ ಪಕ್ಷವು ಐಐಟಿ, ಐಐಎಂ, ಡಿಆರ್‌ಡಿಒದಂತಹ ಮಹತ್ವದ ಸಂಸ್ಥೆಗಳನ್ನು ಆರಂಭಿಸಿತು. ಬಡವರಿಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸಿತು. ನಿಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಇಂತಹ ಒಂದಾದರೂ ಯೋಜನೆಗಳನ್ನು ತಂದಿದ್ದೀರಾ’ ಎಂದು ಪ್ರಶ್ನಿಸಿದರು.

‘ಸೇಡಂನಲ್ಲಿ ಸಾಕಷ್ಟು ಸಿಮೆಂಟ್ ಕಾರ್ಖಾನೆಗಳಿದ್ದರೂ ನಿಮಗೆ ಉದ್ಯೋಗ ಸಿಗುತ್ತಿಲ್ಲ. ಕೆಲಸ ಹುಡುಕಿಕೊಂಡು ಪಕ್ಕದ ಹೈದರಾಬಾದ್, ಮುಂಬೈಗೆ ವಲಸೆ ಹೋಗಬೇಕಿದೆ. ಬಿಎ, ಎಂಎಸ್ಸಿ ಓದಿದವರಿಗೂ ಉದ್ಯೋಗ ಸಿಗುತ್ತಿಲ್ಲ. ಹತ್ತು ವರ್ಷಗಳಲ್ಲಿ ಮೋದಿ ಅವರು ದೇಶದ ಜನತೆಗೆ ನೀಡಿದ ಕೊಡುಗೆ ನಿರುದ್ಯೋಗ, ಬೆಲೆ ಏರಿಕೆ, ಹಿಂದು–ಮುಸ್ಲಿಂ ಹೆಸರಿನಲ್ಲಿ ದೇಶವನ್ನು ಒಡೆಯುವುದೇ ಆಗಿದೆ’ ಎಂದು ಟೀಕಿಸಿದರು.

‘ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿನ ಜನತೆಗಾಗಿ ಕಲಬುರಗಿಯಲ್ಲಿ ರೈಲ್ವೆ ವಿಭಾಗ, ರಾಷ್ಟ್ರೀಯ ಉತ್ಪಾದನಾ ವಲಯವನ್ನು ತಂದಿದ್ದರು. ಆದರೆ, ಖರ್ಗೆಯವರಿಗೆ ಹೆಸರು ಬರುತ್ತದೆ ಎಂಬ ದುರುದ್ದೇಶದಿಂದ ಮೋದಿ ಅವರು ಇವುಗಳನ್ನು ರದ್ದುಗೊಳಿಸಿದ್ದಾರೆ’ ಎಂದು ಆರೋಪಿಸಿದರು,

‘ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ, ಅಗ್ನಿವೀರ್ ಯೋಜನೆ ರದ್ದುಗೊಳಿಸುತ್ತೇವೆ. ರೈತರ ಸಾಲಮನ್ನಾ, ಜಿಎಸ್ಟಿ ರದ್ದು ಮಾಡುತ್ತೇವೆ. ನಗರ ಪ್ರದೇಶದವರಿಗೂ 100 ದಿನಗಳವರೆಗೆ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲಾಗುವುದು’ ಎಂದರು.

‘ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ಹೇಳಿದ್ದ ಮೋದಿ ಅವರು ಅದನ್ನು ಜಾರಿಗೊಳಿಸುವ ಬದಲು ತಮ್ಮ ಉದ್ಯಮ ಮಿತ್ರರ ಸಾಲವನ್ನು ಮನ್ನಾ ಮಾಡಿದ್ದಾರೆ’ ಎಂದು ಟೀಕಿಸಿದರು.

'ದೇಶದ ಮಾಧ್ಯಮಗಳನ್ನು ಕೋಟ್ಯಧಿಪತಿಗಳು ನಿಯಂತ್ರಿಸುತ್ತಿದ್ದಾರೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಮೋದಿ ಅವರು ಜೈಲಿಗೆ ಹಾಕಿದ್ದನ್ನು ಮಾಧ್ಯಮಗಳು ಏಕೆ ವಿರೋಧಿಸುತ್ತಿಲ್ಲ. ದೆಹಲಿ ಪೊಲೀಸರು ತೆಲಂಗಾಣಕ್ಕೆ ಬಂದು ಕಾಂಗ್ರೆಸ್ ಅಧ್ಯಕ್ಷರು, ಮುಖ್ಯಮಂತ್ರಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ. ಇದನ್ನೇಕೆ ಪ್ರಶ್ನಿಸುತ್ತಿಲ್ಲ’ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಮೋದಿಯವರು ಸದಾ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ನನ್ನನ್ನು ಬಯ್ಯುತ್ತಲೇ ಇರುತ್ತಾರೆ. ಬಯ್ಯುವುದನ್ನು ಬಿಟ್ಟರೆ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಹೇಳಲಿ’ ಎಂದು ಸವಾಲು ಹಾಕಿದರು.

ಮೋದಿ ಎಂದರೆ ಸುಳ್ಳಿನ ಸರದಾರ ಸುಳ್ಳು ಹೇಳ್ತಾನ, ಹೋಗತಾನ. ಡಬಲ್ ಇನ್ ಕಂ, 15 ಲಕ್ಷ, ಕೆಲವು ವರ್ಗದವರು ಕುತಂತ್ರ ಮಾಡಿ ಮೋದಿ ಮೋದಿ ಅಂದುಕೊಂಡು ಹೊರಟಿದ್ದಾರೆ.

‘ಮೋದಿ ಅಧಿಕಾರದಲ್ಲಿ ಇರುವವರೆಗೆ ಬಡವರಿಗೆ ನ್ಯಾಯ ಸಿಗುವುದಿಲ್ಲ. ಇಂದಿರಾಗಾಂಧಿ ಅವರು ಪ್ರಧಾನಿ ಇದ್ದಾಗ ಬಡವರಿಗೆ ಮನೆ, ಭೂರಹಿತರಿಗೆ ಭೂಮಿ ನೀಡಿದರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು’ ಇಂತಹ ಒಂದಾದರೂ ಶಾಶ್ವತ ಕೆಲಸವನ್ನು ಮೋದಿ ಮಾಡಿದ್ದಾರೆಯೇ’ ಎಂದರು.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿ, ‘ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಿತ್ತುಕೊಳ್ಳಲು ಬಿಜೆಪಿ 400 ಸೀಟುಗಳನ್ನು ಬಯಸುತ್ತಿದೆ’ ಎಂದು ಆರೋಪಿಸಿದರು.

'ಮೋದಿ ಅವರು ಐಟಿ, ಸಿಬಿಐ, ಇಡಿಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಗುಜರಾತ್ ಜನತೆ ಮೋದಿ ಅವರನ್ನು ಬೆಂಬಲಿಸಿದಂತೆ ರಾಜ್ಯದ ಜನತೆ ಖರ್ಗೆ ಅವರ ಕೈ ಬಲಪಡಿಸಬೇಕು. ನಿಮಗೆ ಏನೇ ತೊಂದರೆಯಾದರೆ ಒಂದು ಕೂಗು ಹಾಕಿ, ತಕ್ಷಣವೇ ಬರುತ್ತೇನೆ' ಎಂದು ಅಭಯ ನೀಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ, ಪ್ರಿಯಾಂಕ್ ಖರ್ಗೆ, ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಯು.ಬಿ. ವೆಂಕಟೇಶ್, ಬಸವರಾಜ ಭೀಮಳ್ಳಿ, ಚಂದ್ರಶೇಖರ ಪಾಟೀಲ ವೇದಿಕೆಯಲ್ಲಿದ್ದರು.

'ಅತ್ಯಾಚಾರಿ ದೇಶ ಬಿಟ್ಟದ್ದು ಗೊತ್ತಾಗಲಿಲ್ಲವೇ?’

ರಾಜ್ಯದಲ್ಲಿ ಮೋದಿ ಅವರ ಮೈತ್ರಿ ಪಕ್ಷದ ಅಭ್ಯರ್ಥಿ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಿರೋಧ ಪಕ್ಷದವರು ವಿದೇಶಕ್ಕೆ ಹೋದರೆ ತಕ್ಷಣ ಮಾಹಿತಿ ಪಡೆಯುವ ಪ್ರಧಾನಿ ಹಾಗೂ ಗೃಹಸಚಿವರಿಗೆ ಘೋರ ಪಾತಕ ಎಸಗಿದ ವ್ಯಕ್ತಿ ವಿದೇಶಕ್ಕೆ ಹೋಗಿದ್ದು ಗೊತ್ತಾಗಲಿಲ್ಲವೇ? ಆ ವ್ಯಕ್ತಿಯನ್ನು ಮರಳಿ ಕರೆತಂದ ಬಳಿಕವೇ ಮಹಿಳೆಯರ ಮಂಗಳಸೂತ್ರದ ಬಗ್ಗೆ ಮಾತನಾಡಿ' ಎಂದು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT