ಶನಿವಾರ, ಮೇ 21, 2022
28 °C
ಸಂಜೆಯಾಗುತ್ತಲೇ ಖಾಲಿ ಜಾಗದಲ್ಲಿ ಅಕ್ರಮ ಚಟುವಟಿಕೆ

ಕಾಲೊನಿಯಲ್ಲಿ ಕಲ್ಲು ಮಣ್ಣಿನ ದಾರಿ; ಮೂಲಸೌಲಭ್ಯ ಕಾಣದ ‘ಜ್ಞಾನಗಂಗಾ’

ರಾಮಮೂರ್ತಿ ಪಿ. Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಡೀ ಕಾಲೊನಿಯಲ್ಲಿ ನೋಡೋಣವೆಂದರೂ ಕಾಣಸಿಗದ ಡಾಂಬರು ರಸ್ತೆ. ಕಲ್ಲು ಮಣ್ಣಿನ ಅಡ್ಡರಸ್ತೆಗಳಲ್ಲೇ ಸಾಗುವ ಆಟೊ, ಬೈಕ್‌, ಶಾಲಾ ವಾಹನಗಳು. ಪ್ರತೀ ಮನೆಗಳ ಮುಂದೆಯೂ ಒಂದೊಂದು ಚರಂಡಿ ನೀರಿನ ಹೊಂಡಗಳು. ಸಂಜೆ ಆಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳ ತಾಣವಾಗುವ ಖಾಲಿ ಜಾಗಗಳು.

ನಗರದ ಇಎಸ್ಐಸಿ ಆಸ್ಪತ್ರೆ ಎದುರುಗಡೆ ಇರುವ ಜ್ಞಾನಗಂಗಾ ಕಾಲೊನಿಯ ಚಿತ್ರಣವಿದು. ‘ಬಡಾವಣೆ ನಿರ್ಮಾಣಗೊಂಡು 30 ವರ್ಷ ಕಳೆದರೂ ಇಂದಿಗೂ ಇಲ್ಲಿ ಕುಡಿಯುವ ನೀರು, ರಸ್ತೆ, ಬೀದಿದೀಪದಂತಹ  ಮೂಲಸೌಲಭ್ಯ ಸಿಗುತ್ತಿಲ್ಲ. ಮಳೆ ಬಂದಾಗ ಸಂಪೂರ್ಣ ಕೆಸರುಮಯ ಆಗುವ ತಗ್ಗು ಗುಂಡಿಗಳ ರಸ್ತೆಯಲ್ಲಿ ವಾಹನಗಳು ಸಂಚರಿಸುವುದೇ ಸಾಹಸಮಯ’ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

‘16 ಎಕರೆ ವ್ಯಾಪ್ತಿಯಲ್ಲಿರುವ ಈ ಕಾಲೊನಿಯಲ್ಲಿ 100 ಮನೆಗಳಿವೆ. ಜಿಡಿಎ ನಿಯಮದ ಪ್ರಕಾರ ಉದ್ಯಾನ, ಶಾಲೆ, ಆಸ್ಪತ್ರೆ, ಸಮುದಾಯ ಭವನ, ಪೊಲೀಸ್ ಠಾಣೆ ನಿರ್ಮಾಣಕ್ಕೆ ಜಾಗ ಮೀಸಲಿಡಲಾಗಿದೆ. ಆದರೆ ಯಾವುದು ಕೂಡ ನಿರ್ಮಾಣಗೊಂಡಿಲ್ಲ. ಉದ್ಯಾನ ಅಭಿವೃದ್ಧಿ ಆಗದಿರುವುದರಿಂದ 4 ಎಕರೆ ಜಾಗ ಪಾಳು ಬಿದ್ದಿದೆ’ ಎಂದು ಜ್ಞಾನಗಂಗಾ ಕಾಲೊನಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರಕುಮಾರ ಪೂಜಾರಿ ದೂರಿದರು.

ಕುಡಿಯುವ ನೀರಿನ ಸಮಸ್ಯೆ

‘ನಾಲ್ಕು ದಿನಗಳಿಗೊಮ್ಮೆ ಮಹಾನಗರ ಪಾಲಿಕೆಯಿಂದ ನೀರು ಬರುತ್ತೆ. ಅದು ಕೇವಲ ಅರ್ಧ ಗಂಟೆ ಮಾತ್ರ. ಕಾಲೊನಿ ಕೊನೆಯಲ್ಲಿರುವುದರಿಂದ ನೀರು ಬರುವುದು ಕೂಡ ಕಡಿಮೆ ಪ್ರಮಾಣದಲ್ಲಿ. ಇಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಬಡಾವಣೆ ನಿವಾಸಿಗಳಾದ ನಿರಂಜನ ಭಾಲ್ಕೆ ಹಾಗೂ ವಸಂತ ಕನ್ನೂರ ದೂರಿದರು.

ಚರಂಡಿ ಇಲ್ಲ: ‘ಇಲ್ಲಿನ ಯಾವ ಮನೆಯ ಮುಂದೆಯೂ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ತ್ಯಾಜ್ಯ ನೀರು ಮುಂದೆ ಸಾಗದೆ ಮನೆಗಳ ಮುಂದೆಯೇ ನಿಲ್ಲುತ್ತೆ. ಪ್ರತೀ ಮನೆಗಳ ಮುಂದೆಯೂ ತ್ಯಾಜ್ಯ ನೀರಿನ ಹೊಂಡ ಸೃಷ್ಟಿಯಾಗಿವೆ. ಇದರಿಂದ ರೋಗ ಹರಡುವ ಭಯದಲ್ಲೇ ವಾಸಿಸಬೇಕಾದ ಸ್ಥಿತಿ ನಿರ್ಮಾಣ ಆಗಿದೆ’ ಎಂದು ನಿವಾಸಿಗಳಾದ ಶೋಭಾ ವೀರಯ್ಯ ಮಠಪತಿ, ನಾಗರತ್ನಾ ಕಲ್ಲೂರ ಬೇಸರ ವ್ಯಕ್ತಪಡಿಸಿದರು.

ವಿದ್ಯುತ್ ಕಂಬಗಳ ಕೊರತೆ

‘ಕಾಲೊನಿಗೆ ಅವಶ್ಯವಿರುವಷ್ಟು ಬೀದಿ ದೀಪಗಳಿಲ್ಲ. ಕೆಲವು ಕಂಬಗಳಲ್ಲಿ ವಿದ್ಯುತ್ ದೀಪಗಳು ಹಾಳಾಗಿವೆ. ಸಂಜೆ ಕತ್ತಲಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ರಸ್ತೆ ಹಾಗೂ ಖಾಲಿ ಜಾಗದಲ್ಲಿ
ಅಕ್ರಮ ಚಟುವಟಿಕೆ ನಡೆಸುತ್ತಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇವೆ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ’ ಎಂದು ವೀರಯ್ಯ ಸ್ವಾಮಿ, ಮಡಿವಾಳಪ್ಪ ಬೇಸರ ವ್ಯಕ್ತಪಡಿಸಿದರು.

ಹಂದಿಗಳ ಹಾವಳಿ: ‘ಕಾಲೊನಿಯಲ್ಲಿ 30ರಿಂದ 40 ಹಂದಿಗಳಿವೆ. ಇವುಗಳಿಂದಾಗಿ ಮಕ್ಕಳು, ಮಹಿಳೆಯರು ಓಡಾಡಲು ಹೆದರುವಂತಾಗಿದೆ. ದಿನದಿಂದ ದಿನಕ್ಕೆ ಹಂದಿಗಳ ಸಂಖ್ಯೆ ಹೆಚ್ಚುತ್ತಿದೆ. ಬೇರೆ ಕಾಲೊನಿಯಲ್ಲಿರುವ ಹಂದಿಗಳನ್ನು ರಾತ್ರೋರಾತ್ರಿ ಇಲ್ಲಿಗೆ ತಂದು ಬಿಡಲಾಗುತ್ತಿದೆ. ಅಕ್ಕಪಕ್ಕದ ಬಡಾವಣೆಗಳಲ್ಲಿ ಪಾಲಿಕೆಯಿಂದ ಹಂದಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದೆ. ಆದರೆ ಇಲ್ಲಿಗೆ ಮಾತ್ರ ಯಾರೂ ಬಂದಿಲ್ಲ. ನಮ್ಮ ಕಾಲೊನಿಯಲ್ಲೂ ಕಾರ್ಯಾಚರಣೆ ನಡೆಸಲು ಸೂಚಿಸುವಂತೆ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಬೀದಿ ನಾಯಿಗಳನ್ನೂ ಸ್ಥಳಾಂತರಿಸಬೇಕು’ ಎಂದು ಜ್ಞಾನಗಂಗಾ ಕಾಲೊನಿ ನಿವಾಸಿಗಳಾದ ಶಂಕರ ಗುಂಡುರೆ, ನಿಂಗಪ್ಪ ಕರ್ನಾಳಕರ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು