ಮಂಗಳವಾರ, ಆಗಸ್ಟ್ 16, 2022
21 °C
‘ಸ್ವಚ್ಛ ಕಲಬುರ್ಗಿ’ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಪಾಲಿಕೆ ಆಯುಕ್ತ ಲೋಖಂಡೆ ಸಲಹೆ

ಸ್ವಚ್ಛ ನಗರಕ್ಕಾಗಿ ತ್ಯಾಗ ಮಾಡಬೇಕಿಲ್ಲ, ಶ್ರದ್ಧೆ ಸಾಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ರಾಜ್ಯದ ಇತರ ಸ್ವಚ್ಛ ನಗರಗಳ ಸಾಲಿನಲ್ಲಿ ಕಲಬುರ್ಗಿಯನ್ನೂ ಸೇರಿಸಲು ಸಾಧ್ಯವಿದೆ. ಜನ ಮನಸ್ಸು ಮಾಡಿದರೆ ಯಾವುದೇ ಅಸಾಧ್ಯವಲ್ಲ. ಆದ್ದರಿಂದ ನಗರವನ್ನು ಸ್ವಚ್ಛ ಹಾಗೂ ಸುಂದರ ಮಾಡಲು ಪ್ರತಿಯೊಬ್ಬರೂ ಜವಾಬ್ದಾರಿ ಮೆರೆಯಬೇಕು’ ಎಂದು ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಕೋರಿದರು.

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ.ಜಿ. ಮಹಿಳಾ ಪದವಿ ಕಾಲೇಜ್‌ ಮತ್ತು ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ವಚ್ಛ ಕಲಬುರ್ಗಿ’ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಗರವನ್ನು ಸ್ವಚ್ಛವಾಗಿಡುವುದು ಕೇವಲ ಪಾಲಿಕೆಯ ಹೊಣೆ ಎಂದು ಸಾರ್ವಜನಿಕರು ಭಾವಿಸಬಾರದು. ಇದು ಪ್ರತಿಯೊಬ್ಬ ನಾಗರಿಕರ ಕನಸಾಗಿ, ಜವಾಬ್ದಾರಿ ಆಗಿ ಮನವರಿಕೆ ಆಗಬೇಕು. ಇದಕ್ಕಾಗಿ ದೊಡ್ಡ ತ್ಯಾಗವನ್ನೇನೂ ಮಾಡಬೇಕಾಗಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿ, ಸುಂದರವಾಗಿ ಇಟ್ಟುಕೊಂಡರೆ ಸಾಕು’ ಎಂದರು.

‘ಒಬ್ಬ ವ್ಯಕ್ತಿ ಅಥವಾ ಅಧಿಕಾರಿಯಿಂದ ಏನೂ ಮಾಡಲು ಸಾಧ್ಯವಿಲ್ಲ. ಜನ ಕೈ ಜೋಡಿಸಿದರೆ ಮಾತ್ರ ನಗರದ ಚಿತ್ರಣ ಬದಲಾಯಿಸಬಹುದು. ಕೆಲವು ಕಾಲೇಜುಗಳು ತಮ್ಮ ಕ್ಯಾಂಪಸ್‍ಗಳನ್ನು ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಿಕೊಂಡಿವೆ. ಅದೇ ಮಾದರಿಯಲ್ಲಿ ಉಳಿದ ಶಾೆ– ಕಾಲೇಜಿನವರು ಮುಂದಾಗಬೇಕು. ಯುವ ಜನರು ಇಂತಹ ಸ್ವಚ್ಛತೆ ಅಭಿಯಾನಕ್ಕೆ ಕೈಜೋಡಿಸಿದರೆ ಹೆಚ್ಚು ಸಫಲತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈಗಾಗಲೇ ಪಾಲಿಕೆಯಿಂದ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸಲು ಎರಡು ಬುಟ್ಟಿಗಳನ್ನು ನೀಡುವ ಮೂಲಕ ಜಾಗೃತಿ ಆರಂಭಿಸಲಾಗಿದ್ದು, ಉತ್ತಮ ಪ್ರಕ್ರಿಯೆ ಬರುತ್ತಿದೆ’ ಎಂದರು.

‘ನಗರವನ್ನು ಬಯಲು ಶೌಚಮುಕ್ತ ಮಾಡಬೇಕಿದೆ. ಆದರೆ, ವಾಸ್ತವದಲ್ಲಿ ಇದು ಸಾಧ್ಯವಾಗಿಲ್ಲ. ನಾನು ಕಂಡುಂತೆ ಬಯಲು ಪ್ರದೇಶದಲ್ಲಿ ಮಲ– ಮೂತ್ರ ವಿಸರ್ಜನೆ ಮಾಡುವುದು ಮುಂದುವರಿದಿದೆ. ಇದೇ ಕಾರಣಕ್ಕೆ ಅನಾರೋಗ್ಯ ಹೆಚ್ಚಾಗುತ್ತಿದೆ. ನಗರವನ್ನು ಬಯಲು ಶೌಚಮುಕ್ತ ನಗರವಾಗಿಸಲು ಹೆಚ್ಚಿನ ಒತ್ತು ನೀಡಿ, ಕೆಲಸ ಮಾಡಲಾಗುವುದು. ಹೊಸ ಯೋಜನೆಯನ್ನು ಹಾಕಿಕೊಳ್ಳಲಾಗುವುದು’ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೋದುತಾಯಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಸಿದ್ದಮ್ಮ ಗುಡೇದ ಮಾತನಾಡಿ, ‘ಸ್ವಚ್ಛತೆ ಬಗ್ಗೆ ಮಾತನಾಡುವುದು ಮಾತ್ರವಲ್ಲ; ಪ್ರಾಯೋಗಿಕವಾಗಿ ಜಾರಿಗೆ ತರುವಂತೆ ಆಗಬೇಕು. ಆರೋಗ್ಯವಂತರಾಗಿರಲು ಸ್ವಚ್ಛವಾದ ನೀರು, ಸ್ವಚ್ಛ ಗಾಳಿ ಬಹುಮುಖ್ಯವಾಗಿದೆ. ಇದನ್ನು ಅರಿತುಕೊಂಡು ಜನರು ನಗರವನ್ನು ಮಾದರಿಯಾಗಿಸಲು ಆಡಳಿತದೊಂದಿಗೆ ಕೈಜೋಡಿಸಬೇಕು’ ಎಂದರು.

ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭವಾನಿಸಿಂಗ ಠಾಕೂರ, ಪತ್ರಕರ್ತ ಶೇಷಮೂರ್ತಿ ಅವಧಾನಿ ಮಾತನಾಡಿದರು. ಕಾರ್ಯಕ್ರಮ ಸಂಘಟಕಿ ಡಾ.ಚಂದ್ರಕಲಾ ಪಾಟೀಲ, ‘ನ್ಯಾಕ್’ ಸಂಯೋಜಕಿ ಡಾ.ಫರ್ಜಾನಾ ಜಬೀನ್, ಐಕ್ಯೂಎಸಿ ಸಂಯೋಜಕ ಡಾ.ಶಿವರಾಜ ಗೌನಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.