ಸೋಮವಾರ, ಫೆಬ್ರವರಿ 24, 2020
19 °C
46ನೇ ಸರ್ವಧರ್ಮ ಸಮಾವೇಶ

ಇಂಚಗೇರಿ ಮಠ: ‘ದೇಶದ ಸೌಹಾರ್ದ ಪರಂಪರೆ ರಕ್ಷಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ದೇಶದಲ್ಲಿ ಶತಮಾನಗಳಿಂದ ಇರುವ ಭಾವೈಕ್ಯ ಸಂಸ್ಕೃತಿಗೆ ಧಕ್ಕೆ ಉಂಟು ಮಾಡಲು ಮತ್ತು ಸಂವಿಧಾನ ಅಪಚಾರಕ್ಕೆ ಎಸಗಲು ವ್ಯವಸ್ಥಿತ ಪ್ರಯತ್ನ ನಡೆದಿದ್ದು ಇದಕ್ಕೆ ಬಲವಾಗಿ ಪ್ರತಿರೋಧ ಒಡ್ಡಬೇಕಿದೆ’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ತಿಳಿಸಿದರು.

ಸದ್ಗುರು ಮಾಧವಾನಂದ ಪ್ರಭುಜಿ ಸ್ಮರಣಾರ್ಥ ಮತ್ತು ಇಂಚಗೇರಿ ಸಂಪ್ರದಾಯದ ಸದ್ಗುರುಗಳ ಆಧ್ಯಾತ್ಮ ಸಪ್ತಾಹ ನಿಮಿತ್ತ ನಗರದ ಇಂಚಗೇರಿ ಶಾಖಾಮಠದ ಆವರಣದಲ್ಲಿ ಶುಕ್ರವಾರ ನಡೆದ 46ನೇ ಸರ್ವಧರ್ಮ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬಹುಸಂಸ್ಕೃತಿ ಮತ್ತು ಸೌಹಾರ್ದ ಪರಂಪರೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿ ಏಕಧರ್ಮೀಯ ರಾಷ್ಟ್ರವನ್ನಾಗಿ ಮಾಡಲು ಕೆಲ ಪಕ್ಷ ಮತ್ತು ಸಂಘಟನೆಗಳು ಹಂತಹಂತವಾಗಿ ಕುತಂತ್ರ ನಡೆಸಿದ್ದು, ಇದಕ್ಕೆ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಬೇಕಿದೆ’ ಎಂದು ಅವರು ತಿಳಿಸಿದರು.

‘ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವು ಎಲ್ಲರಿಗೂ ಬದುಕುವ ಮತ್ತು ನ್ಯಾಯ ಪಡೆಯುವ ಹಕ್ಕನ್ನು ನೀಡಿದೆ. ಇದನ್ನು ಸಹಿಸದ ಕೆಲವರು ಸಂವಿಧಾನದ ಮೂಲ ಅಡಿಪಾಯವನ್ನೇ ಬದಲಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು’ ಎಂದರು.

‘ಜಾತಿ, ಧರ್ಮ, ಮತದ ಹೆಸರಿನಲ್ಲಿ ದೇಶವನ್ನು ಒಡೆಯುವ ಮತ್ತು ಜನರ ಮಧ್ಯೆ ವಿಷ ಬೀಜಗಳನ್ನು ಬಿತ್ತುವ ಅಪಾಯಕಾರಿ ಚಟುವಟಿಕೆಗಳು ನಡೆಯುತ್ತಿದ್ದು, ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ದೇಶದ ನಿವಾಸಿಗಳಾದ ನಾವು ಜಾತಿ, ಧರ್ಮ, ಮತಗಳನ್ನು ಮೀರಿ ಮನುಷ್ಯತ್ವದ ತತ್ವದಡಿ ಬಾಳಬೇಕು. ದ್ವೇಷ, ಅಸೂಯೆ, ವೈಮನಸ್ಸು ತೊರೆದು ಎಲ್ಲರೂ ಕೂಡಿಕೊಂಡು ಬಾಳುವ ಮನೋಭಾವ ರೂಪಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು ಮಾತನಾಡಿ, ‘ಮಹನೀಯರು ಮಾರ್ಗದರ್ಶನದಂತೆ ನಾವೆಲ್ಲರೂ ನುಡಿದಂತೆ ನಡೆಯಬೇಕು. ನಡೆ ಮತ್ತು ನುಡಿಯನ್ನು ಬೇರೆ ಬೇರೆಯಾಗಿ ಅನುಸರಿಸುವವರು ಜೀವನದಲ್ಲಿ ಯಶಸ್ಸು ಕಾಣುವುದು ಕಷ್ಟ. ಮಾತಿಗಿಂತ ಕೃತಿಯೇ ಹೆಚ್ಚು ಪ್ರಭಾವಶಾಲಿ’ ಎಂದರು.

ಸಿದ್ಧಾರೂಢಮಠದ ಶ್ರದ್ಧಾನಂದ ಸ್ವಾಮೀಜಿ, ಕೌಜಲಗಿಯ ಶಂಕರೆಪ್ಪ ಮಹಾರಾಜ, ಕಾಡಸಿದ್ಧ ಮಹಾರಾಜ, ಮಹಾನಂದನವನದ ಗುರುಶಾಂತಪ್ಪ ಶೀಲವಂತ, ಗುಂಡೇವಾಡಿಯ ಬಿ.ಎ.ಪಾಟೀಲ, ಇಂಚಗೇರಿ ಶಾಖಾ ಮಠದ ಅಧ್ಯಕ್ಷ ದತ್ತಾತ್ರೇಯ ಹಾಸಿಲ್ಕರ್, ಜಯದ್ರಥ ಶೃಂಗೇರಿ, ಎ.ಬಿ.ಹೊಸಮನಿ, ಮಹಾದೇಶ ಶಿಂಧೆ, ಭರತೇಶ ಹಾಸಿಲ್ಕರ್, ಚಂದ್ರಕಾಂತ ಮುಗಳಿ, ಶ್ರೀಮಂತ ನಾಲವಾರ, ಮಾಧವಾನಂದ ಮಂಗಳಗಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)