ಸೋಮವಾರ, ಜೂನ್ 1, 2020
27 °C

ಕಲಬುರ್ಗಿ: ರಂಗಾಯಣ ನಿರ್ದೇಶಕರ ವಜಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಲಬುರ್ಗಿ: ಇಲ್ಲಿನ ರಂಗಾಯಣದ ನಿರ್ದೇಶಕ ಮಹೇಶ ವಿ.ಪಾಟೀಲ ಅವರನ್ನು ವಜಾಗೊಳಿಸಬೇಕು ಎಂದು ಅಗ್ರಹಿಸಿ ರಂಗ ಕಲಾವಿದರ ಒಕ್ಕೂಟದ ಸದಸ್ಯರು ರಂಗಾಯಣ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪಿ.ಎಂ.ಮಣ್ಣೂರ ಅವರು, ಇಲ್ಲಿನ ರಂಗಾಯಣ ನಿಷ್ಕ್ರಿಯಗೊಂಡಿದ್ದು, ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ದೂರಿದರು.

ನಾಲ್ಕು ತಿಂಗಳ ಹಿಂದೆ ಬೆಂಗಳೂರು ರಂಗಸಮಾಜದವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಇಲ್ಲಿಗೆ ಬಂದು ಕಲಾವಿದರ ಅಭಿಪ್ರಾಯವನ್ನು ಸಂಗ್ರಹಿಸಿ ಸಂಬಂಧಪಟ್ಟ ಸಚಿವರಿಗೆ ಸಲ್ಲಿಸಿದ್ದಾರೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಜನರಂಗದ ಅಧ್ಯಕ್ಷ ಶಂಕರಯ್ಯ ಆರ್.ಘಂಟಿ ಮಾತನಾಡಿ, ಮೈಸೂರು, ಶಿವಮೊಗ್ಗ ಮತ್ತು ಧಾರವಾಡದ ರಂಗಾಯಣಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಇಲ್ಲಿ ಯಾವುದೇ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿಲ್ಲ ಎಂದರು.

ಮಹೇಶ ಪಾಟೀಲ ಅವರು ರಂಗಾಯಣದಲ್ಲಿ ದುರಾಡಳಿತ ನಡೆಸುತ್ತಿದ್ದಾರೆ. ಈ ಭಾಗದ ಹಿರಿಯ ಕಲಾವಿದರು, ರಂಗಾಸಕ್ತರು, ಸಾಹಿತಿಗಳ ಹೋರಾಟದ ಫಲವಾಗಿ ಇಲ್ಲಿ ರಂಗಾಯಣ ಸ್ಥಾಪನೆ ಆಗಿದೆ. ಆದರೆ, ಅದರಿಂದ ಪ್ರಯೋಜನ ಇಲ್ಲದಂತಾಗಿದೆ ಎಂದು ಹೇಳಿದರು.

ಸರ್ಕಾರದಿಂದ ಬಿಡುಗಡೆ ಆದ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಮೈಸೂರಿನಲ್ಲಿ ರಾಷ್ಟ್ರಮಟ್ಟದ ಕಲಾವಿದರನ್ನು ಕರೆಸಿ ರಂಗೋತ್ಸವ ನಡೆಸಲಾಗುತ್ತದೆ. ಮಹೇಶ ಪಾಟೀಲ ಅವರು ಅಧಿಕಾರ ವಹಿಸಿಕೊಂಡ ನಂತರ ಅಂಥಹ ಯಾವುದೇ ಕಾರ್ಯಕ್ರಗಳು ಇಲ್ಲಿ ನಡೆದಿಲ್ಲ ಎಂದರು.

ಈ ಬಗ್ಗೆ ಡಿಸೆಂಬರ್‌ 30ರ ಒಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಸಚಿವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಒಕ್ಕೂಟದ ಸದಸ್ಯರು ಖರ್ಗೆ ಪೆಟ್ರೋಲ್‌ ಪಂಪ್‌ನಿಂದ ರಂಗಾಯಣದವರೆಗೆ ಮೆರವಣಿಗೆ ನಡೆಸಿದರು.

ಕಲಬುರ್ಗಿ ಆರ್ಟ್‌ ಥಿಯೇಟರ್‌ನ ಸುನಿಲ ಮಾನಪಡೆ, ವಿ.ಎನ್‌.ಅಕ್ಕಿ, ವಿಜಯ ಹಾಗರಗುಂಡಗಿ, ಅಶೋಕ ಚಿತ್ತಕೋಟಿ, ಲಕ್ಷ್ಮಣ ಮಂಡಲಗೇರಾ, ಮಲ್ಲಿಕಾರ್ಜುನ ದೊಡ್ಡಮನಿ ರಾಜಕುಮಾರ ಎಸ್‌.ಕೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.