ಭಾನುವಾರ, ಜನವರಿ 19, 2020
20 °C
ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರಾಷ್ಟ್ರಪತಿಗೆ ಮನವಿ ಸಲ್ಲಿಕೆ

ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಚಿಂಚೋಳಿ ತಾಲ್ಲೂಕಿನ ಯಾಕಾಪುರ ಗ್ರಾಮದಲ್ಲಿ ಎಂಟು ವರ್ಷದ ಬಾಲಕಿ ಹಾಗೂ ಹೈದರಾಬಾದ್‌ನ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೂರಾರು ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ದೇಶದಾದ್ಯಂತ ಮಹಿಳೆಯರು, ಮಕ್ಕಳು ಹಾಗೂ ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚುತ್ತಿವೆ. ಇದು ನಾಗರಿಕ ಸಮಾಜವು ತಲೆ ತಗ್ಗಿಸುವಂಥದ್ದು. ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಕ್ರಮ ಕೈಗೊಳ್ಳಲು ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಹೆಚ್ಚುತ್ತಿರುವ ಕೊಲೆ ಹಾಗೂ ಅತ್ಯಾಚಾರದ ಪ್ರಕರಣಗಳು ಆಡಳಿತ ವೈಫಲ್ಯದ ಸೂಚನೆಗಳಾಗಿವೆ. ಬೇಟಿ ಪಡಾವೊ, ಬೇಟಿ ಬಚಾವೊ ಎಂಬುದು ಬರೀ ಘೋಷಣೆಯಾಗಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಅಧಿಕಾರದಲ್ಲಿರುವವರೇ ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಶಾಸಕರೇ ಹನಿಟ್ರ್ಯಾಪ್‌ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ರಾಜಕಾರಣಗಳೇ ಇಂತಹ ಕುಕೃತ್ಯಗಳಲ್ಲಿ ತೊಡಗಿದ್ದರಿಂದ ಕೆಳಹಂತದಲ್ಲಿರುವವರಿಗೆ ಯಾವುದೇ ಭಯ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.‌

ನ್ಯಾಯಾಲಯದ ಬಾಗಿಲು ಸಹ ನೊಂದವರಿಗಾಗಿ ಬೇಗ ತೆರೆಯುವುದೇ ಇಲ್ಲ. ವಿಚಾರಣೆಯಲ್ಲಿ ವಿಳಂಬ ಹಾಗೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದು ಸಹ ಇಂತಹ ಪ್ರಕರಣಗಳು ಹೆಚ್ಚಲು ಕಾರಣವಾಗಿವೆ. ಉತ್ತರ ಪ್ರದೇಶದ ಉನ್ನಾವೊ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕನೇ ಸಂತ್ರಸ್ಥೆಯನ್ನು ಕೊಲೆ ಮಾಡುವುದನ್ನು ದೇಶವೇ ನೋಡಿದೆ. ನಮೋ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಅತ್ಯಾಚಾರ, ಕೊಲೆಯ ಪ್ರಕರಣವನ್ನು ತನ್ನ ಹೇಯ ಕೋಮುವಾದಿ ಅಜೆಂಡಾಕ್ಕೆ ತಕ್ಕಂತೆ ದುಷ್ಟ ಪ್ರಚಾರಕ್ಕೆ ಇಳಿದಿರುವುದು ಕ್ರೌರ್ಯರ ಪರಮಾವಧಿ ಎಂದು ಟೀಕಿಸಿದರು.‌

ಆರೋಪಿಗಳಿಗೆ ತ್ವರಿತ ನ್ಯಾಯಾಲಯದ ಮೂಲಕ ಉಗ್ರ ಶಿಕ್ಷೆ ವಿಧಿಸಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ ಈವರೆಗೆ ನಡೆದ ಇಂತಹ ಪ್ರಕರಣಗಳ ಕುರಿತು ವಾಸ್ತವದಲ್ಲಿ ಇರುವ ಪರಿಸ್ಥಿತಿಯ ಸಮಗ್ರ ಮಾಹಿತಿಯನ್ನು ಜನತೆಯ ಮುಂದೆ ತರಬೇಕು. ಮಹಿಳೆಯರ, ಮಕ್ಕಳ ಸಂಪೂರ್ಣ ಸಂರಕ್ಷಣೆ ಕುರಿತಂತೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕೆ. ನೀಲಾ, ನಂದಾದೇವಿ ಮಂಗೋಡಿ, ಅಮೀನಾ ಬೇಗಂ, ಅಶ್ವಿನಿ ಮದನಕರ್, ಲವಿತ್ರಾ ವಸ್ತ್ರದ, ಡಾ.ಪ್ರಭು ಖಾನಾಪುರೆ, ವಿಠಲ ಚಿಕಣಿ, ಡಾ.ಶಾಂತಾ ಮಠ, ವರ್ಷಾ ಬಾಣಿ, ಶಿಲ್ಪಾ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು