ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೌರ್ಜನ್ಯ ಆರೋಪ: ಕೋಲಿ ಸಮುದಾಯದಿಂದ ಪ್ರತಿಭಟನೆ

Published 19 ಮಾರ್ಚ್ 2024, 4:42 IST
Last Updated 19 ಮಾರ್ಚ್ 2024, 4:42 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಕೋಲಿ– ಕಬ್ಬಲಿಗ ಸಮಾಜದ ಮೇಲೆ ದೌರ್ಜನ್ಯ, ಸರಣಿ ಕೊಲೆ, ಕೊಲೆ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿ ಜಿಲ್ಲಾ ಕೋಲಿ– ಕಬ್ಬಲಿಗ ಸಮನ್ವಯ ಸಮಿತಿಯ ಮುಖಂಡರು ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮರವಣಿಗೆ ನಡೆಸಿದರು.

ಜಗತ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೋಲಿ ಸಮಾಜದವರ ಮೇಲೆ ಪ್ರಚೋದಿತ ಆತ್ಮಹತ್ಯೆ, ಬಾಲಕಿಯರ ಮೇಲೆ ಅತ್ಯಾಚಾರ, ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚುತ್ತಿವೆ. ಸಮಾಜವನ್ನು ಗುರಿಯಾಗಿಸಿಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೆದರಿಸುವ ತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಫಜಲಪುರದ ಸಾಗನೂರ ಗ್ರಾಮದ ಗಿರೀಶ ಚಕ್ರ ಅವರ ಏಳಿಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೊಲೆ ಮಾಡಿದ್ದಾರೆ. ಇದರ ಹಿಂದೆ ಕಾಣದ ಕೈಗಳಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸೈಬಣ್ಣ ಜಮಾದಾರ್ ಅವರಿಗೆ ಕೊಲೆ ಬೆದರಿಕೆಯ ಫೋನ್‌ ಕರೆಗಳು ಬರುತ್ತಿವೆ. ಕರೆ ಮಾಡಿದವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಪಾದಿಸಿದರು.

ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ಪ್ರಚೋದಿತ ಆತ್ಮಹತ್ಯೆ ಸಂಬಂಧ ನ್ಯಾಯ ಒದಗಿಸಿಲ್ಲ. 45 ದಿನ ಧರಣಿ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. ಇದುವರೆಗೂ ಸಾಧ್ಯವಾಗಿಲ್ಲ. ತಾಡತೆಗನೂರ ಗ್ರಾಮದ ಶಿವಶರಣ, ಕೋಡ್ಲಿ ಗ್ರಾಮದ ದತ್ತಪ್ಪ ಆತ್ಮಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಶಾಸಕ ಡಾ. ಅಜಯ್ ಸಿಂಗ್ ಮನೆ ಆವರಣದಲ್ಲಿ ದೇವಪ್ಪ ನಾಟೀಕಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಇಂತಹ ಹಲವು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಸಮಾಜದ ಮೇಲೆ ಆಗುತ್ತಿರುವ ಅನ್ಯಾಯಗಳಿಗೆ ಕಾನೂನು ಕ್ರಮ ಜರುಗಿಸದೆ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೊತಲಪ್ಪ ಸ್ವಾಮೀಜಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ಬಸವರಾಜ ಹರವಾಳ, ಬಸವರಾಜ ಸಪ್ಪನಗೋಳ, ಮಹಾರಾಯ ಅಗಸಿ, ಪ್ರೇಮ ಕೋಲಿ, ಚಂದ್ರಕಾಂತ ಕಿರಸಾವಳಗಿ, ಮಲ್ಲಿಕಾರ್ಜುನ ಚಲ್ರ, ಚಂದ್ರಕಾಂತ ಶಖಾಪೂರ, ಶರಣು ಜಮಾದಾರ, ಗುಂಡು ಐನಾಪೂರ, ಸಂತೋಷ ಜಮಾದಾರ, ಪ್ರವೀಣ ತೆಗ್ಗಳ್ಳಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT