ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೊಗರಿ ಖರೀದಿ ಕೇಂದ್ರ ಆರಂಭಿಸಿ’

ಕೋಡ್ಲಿ ಕ್ರಾಸ್‌ನಲ್ಲಿ ರಸ್ತೆ ತಡೆದು ಪ್ರಾಂತ ರೈತ ಸಂಘ ಪ್ರತಿಭಟನೆ
Last Updated 8 ಜನವರಿ 2021, 5:32 IST
ಅಕ್ಷರ ಗಾತ್ರ

ಕಾಳಗಿ: ‘ಕಲಬುರ್ಗಿ ಜಿಲ್ಲೆಯಲ್ಲಿ ಕೂಡಲೇ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ಪ್ರತಿ ಕ್ವಿಂಟಲ್ ತೊಗರಿಗೆ ₹8750 ಬೆಂಬಲ ಬೆಲೆ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ತಾಲ್ಲೂಕಿನ ಕೋಡ್ಲಿ ಕ್ರಾಸ್‌ನಲ್ಲಿ ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.

‘ಜಿಲ್ಲೆಯಾದ್ಯಂತ ತೊಗರಿ ರಾಶಿ ನಡೆಯುತ್ತಿವೆ. ಇದೇ ಸಮಯಕ್ಕೆ ಖರೀದಿ ಕೇಂದ್ರ ತೆರೆದರೆ ಸೂಕ್ತ ಎನಿಸುತ್ತದೆ. ಆದರೆ ಸರ್ಕಾರ ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಶಿಫಾರಸ್ಸಿನಂತೆ ಪ್ರತಿ ಕ್ವಿಂಟಲ್ ತೊಗರಿಗೆ ₹8750 ಬೆಂಬಲ ಬೆಲೆ ನಿಗದಿಪಡಿಸಬೇಕು. ಹೊರದೇಶದ ತೊಗರಿ ಮೇಲೆ ಶೇ 30ರಷ್ಟು ಆಮದು ಸುಂಕ ಹಾಕಬೇಕು. ರೈತರು ಬೆಳೆದ ತೊಗರಿಯನ್ನು ಸರ್ಕಾರ ಸಂಪೂರ್ಣವಾಗಿ ಖರೀದಿ ಮಾಡಬೇಕು’ ಎಂದು ಆಗ್ರಹಿಸಿದರು.

‘ತೊಗರಿ ಖರೀದಿಗೆ ರೈತರ ಹೆಸರು ನೋಂದಣಿ ದಿನಾಂಕವನ್ನು ವಿಸ್ತರಿಸಬೇಕು. ಪ್ರತಿ ಕ್ವಿಂಟಲ್ ತೊಗರಿಗೆ ರಾಜ್ಯ ಸರ್ಕಾರ ₹2000 ಪ್ರೋತ್ಸಾಹ ಧನ ಕೊಡಬೇಕು. ಅತಿವೃಷ್ಟಿಯಿಂದ ಬೆಳೆ ಹಾಳಾದ ರೈತರಿಗೆ ಪರಿಹಾರ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಹೋಬಳಿ ಸಂಚಾಲಕ ಗುರುನಂದೇಶ ಕೋಣಿನ, ಮುಖಂಡರಾದ ಪರಮೇಶ್ವರ ಕಾಂತಾ, ರಾಮಚಂದ್ರ ಮುಕರಂಬಿ, ಶಿವಕುಮಾರ ಪ್ಯಾಟಿಮನಿ, ಸಿದ್ದಯ್ಯ ಅಲ್ಲಾಪುರ, ಶಿವಕುಮಾರ ಪಾಟೀಲ, ನಾಗಯ್ಯಸ್ವಾಮಿ, ಮಲ್ಲು ಚಿಕ್ಕ ಅಗಸಿ ಇದ್ದರು.

ಸರ್ಕಾರಕ್ಕೆ ಬರೆಯಲಾದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಎಪಿಎಂಸಿ ಕಾರ್ಯದರ್ಶಿ ಸವಿತಾ ಪವಾರ ಅವರಿಗೆ ಸಲ್ಲಿಸಲಾಯಿತು. ಕೆಲಕಾಲ ಕಲಬುರ್ಗಿ- ಚಿಂಚೋಳಿ ಮಾರ್ಗ ಸ್ಥಗಿತಗೊಂಡಿದ್ದರಿಂದ ವಾಹನ ಸವಾರರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT