ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡ, ಜಾತ್ಯತೀತ ಪಕ್ಷಗಳಿಂದ ಪ್ರತಿಭಟನೆ

ಕೋವಿಡ್ ರೋಗಿಗಳನ್ನು ರಕ್ಷಿಸಿ–ಜನರ ಜೀವ ಉಳಿಸಲು ಒತ್ತಾಯ
Last Updated 1 ಜೂನ್ 2021, 13:06 IST
ಅಕ್ಷರ ಗಾತ್ರ

ಲಬುರ್ಗಿ: ಕೋವಿಡ್‌ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಅವರ ಜೀವವನ್ನು ಉಳಿಸಲು ಅಗತ್ಯವಾದ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏಳು ಎಡ ಹಾಗೂ ಜಾತ್ಯತೀತ ಪಕ್ಷಗಳ ಮುಖಂಡರು ಜಿಲ್ಲೆಯ ವಿವಿಧೆಡೆ ಮಂಗಳವಾರ ಆನ್‌ಲೈನ್ ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆಗಳುಳ್ಳ ಭಿತ್ತಿಪತ್ರಗಳನ್ನು ತಾವು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಪ್ರದರ್ಶಿಸಿದ ಮುಖಂಡರು, ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೇಜವಾಬ್ದಾರಿತನದ ವರ್ತನೆಯ ಕಾರಣ ಸಮರ್ಪಕ ಆಸ್ಪತ್ರೆ, ಚಿಕಿತ್ಸೆ, ಆಮ್ಲಜನಕ ಸಿಗದೆ ಸಹಸ್ರಾರು ಜನರು ಸೋಂಕಿತರಾದರೆ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಕೊರೊನಾದಿಂದ ಮೃತಪಟ್ಟವರು ಹುಳಗಳಂತೆ ನರಳಾಡಿದರು’ ಎಂದು ಟೀಕಿಸಿದರು.

ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ರಾಜ್ಯದಲ್ಲಿ ಆಮ್ಲಜನಕ ಕೊರತೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಒಂದೇ ದಿನದಲ್ಲಿ ವರದಿ ಬರುವಂತೆ ಕ್ರಮಕೈಗೊಳ್ಳಬೇಕು. ತಕ್ಷಣವೇ ಸಮರ್ಪಕ ಪ್ರಮಾಣದಲ್ಲಿ ಆಸ್ಪತ್ರೆಗಳು, ಹಾಸಿಗೆಗಳು, ವೆಂಟಿಲೇಟರ್‌ಗಳು, ಐಸಿಯು ಹಾಸಿಗೆಗಳು ಮತ್ತು ವೈರಾಣು ವಿರೋಧಿ ಔಷಧಿಗಳನ್ನು ಜನರಿಗೆ ದೊರಕುವಂತೆ ಮಾಡಬೇಕು. ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದು ಗಂಭೀರ ರೋಗ ಲಕ್ಷಣಗಳು ಇರುವವರಿಗೆ ಚಿಕಿತ್ಸೆ ದೊರಕುವುದು ಕಷ್ಟವಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಡ್‌ ಬ್ಲಾಕಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಅವಶ್ಯಕ ಔಷಧಿಗಳ ಆಮ್ಲಜನಕಗಳ ಬೆಲೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಅವುಗಳನ್ನು ಕಳ್ಳ ದಾಸ್ತಾನು ಹಾಗೂ ಕಾಳಸಂತೆಯನ್ನು ನಿಗ್ರಹಿಸಬೇಕು. ಮೂರನೇ ಅಲೆಗೆ ಸರ್ಕಾರಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತರು, ಕಾರ್ಮಿಕ ವಿರೋಧಿ ಕಾನೂನುಗಳ ರದ್ದು ಮಾಡಬೇಕು. 200 ದಿನಗಳವರೆಗೆ ಉದ್ಯೋಗ ಖಾತ್ರಿಯನ್ನು ನೀಡಿರಿ ಮತ್ತು ಇದನ್ನು ನಗರಗಳಿಗೂ ವಿಸ್ತರಣೆ ಮಾಡುವುದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ, ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡ್ಯಾಳ, ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಆರ್‌ಪಿಐ (ಅಂಬೇಡ್ಕರ್) ರಾಜ್ಯ ಅಧ್ಯಕ್ಷ ಎ.ಬಿ. ಹೊಸಮನಿ, ಆರ್‌ಪಿಐ (ಕರ್ನಾಟಕ) ಜಿಲ್ಲಾ ನಾಯಕ ಶರಣಬಸಪ್ಪ ಹೇರೂರ, ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ನಾಯಕ ಶಿವಕುಮಾರ ರೇಷ್ಮಿ, ವಿವಿಧ ಸಂಘಟನೆಗಳ ಮುಖಂಡರಾದ ಗಣಪತರಾವ್ ಮಾನೆ, ವಿ.ಜಿ. ದೇಸಾಯಿ, ಡಾ. ಸೀಮಾ ದೇಶಪಾಂಡೆ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT