ಮಂಗಳವಾರ, ನವೆಂಬರ್ 24, 2020
20 °C

PV Web Exclusive: ಕಲಬುರ್ಗಿಯಲ್ಲಿ ಕನ್ನಡದ ಕಂಪು ಪಸರಿಸಿದ ಕನ್ನಡ ಸಾಹಿತ್ಯ ಸಂಘ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

‘ಸಂಘದ ಶಿಸ್ತಾದ ವ್ಯವಸ್ಥೆ, ಅಚ್ಚುಕಟ್ಟುತನ, ಗೆಳೆಯರಲ್ಲಿ ಮೂಡಿದ್ದ ಸ್ನೇಹಸೌಹಾರ್ದಗಳನ್ನು ಕಂಡು ನನಗೆ ಅತ್ಯಾನಂದವಾಯಿತು’ ಎಂದು ಅ.ನ. ಕೃಷ್ಣರಾಯರು ಕಲಬುರ್ಗಿಯ ಕನ್ನಡ ಸಾಹಿತ್ಯ ಸಂಘವನ್ನು ಬಣ್ಣಿಸಿದ್ದರು. ‘ಸಂಘದ ಕೆಲಸ ಚೆನ್ನಾಗಿ ನಡೆಯುತ್ತಿದೆ. ಹೀಗೆಯೇ ಮುಂದೆ ಸಾಗಲಿ’ ಎಂದು ವಿ.ಕೃ. ಗೋಕಾಕರು ಹಾರೈಸಿದ್ದರು.

ಉರ್ದು ಮತ್ತು ಮರಾಠಿ ಭಾಷೆಯ ಅಬ್ಬರದ ಮಧ್ಯೆಯೂ ಕಲಬುರ್ಗಿ ಪರಿಸರದಲ್ಲಿ ಕನ್ನಡದ ಕಂಪು ಪಸರಿಸಿದ ಹೆಮ್ಮೆ ‘ಕನ್ನಡ ಸಾಹಿತ್ಯ ಸಂಘ’ಕ್ಕೆ ಸಲ್ಲಬೇಕು ಎಂದು ಸಂಘದ ಚಟುವಟಿಕೆ ದೀರ್ಘಕಾಲದಿಂದ ಬಲ್ಲ ಎಲ್ಲರೂ ಹೇಳುವ ಮಾತು.

ಕಲಬುರ್ಗಿ ನಗರದ ಜಗತ್‌ ಸರ್ಕಲ್‌ ಬಳಿ ದರ್ಗಾ ರಸ್ತೆಯಲ್ಲಿರುವ ಈ ಸಂಘ, ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಭದ್ರ ನೆಲೆ ಒದಗಿಸಿಕೊಟ್ಟಿತ್ತು. ಈ ಚಟುವಟಿಕೆಗಳಿಗಾಗಿಯೇ ಸಂಘದ ಆವರಣದಲ್ಲಿ ‘ಶ್ರೀರಂಗ ಮಂದಿರ’ ಬಯಲು ನಾಟ್ಯ ಮಂದಿರವೂ ತಲೆ ಎತ್ತಿತ್ತು. 

ಬೀದರ್‌, ಅವಿಭಜಿತ ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್‌ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದವು. ನಿಜಾಮ ಆಡಳಿತದಲ್ಲಿ ಉರ್ದು ಭಾಷೆ ಉತ್ತುಂಗದಲ್ಲಿತ್ತು. ಕಲಬುರ್ಗಿಯು ಮಹಾರಾಷ್ಟ್ರದ ಗಡಿಯಲ್ಲೇ ಇರುವುದರಿಂದ ಇಲ್ಲಿ ಮರಾಠಿ ಭಾಷೆಯ ಪ್ರಭಾವವೂ ಹೆಚ್ಚಾಗಿತ್ತು. ಹೀಗಾಗಿ ಇಲ್ಲಿ ಕನ್ನಡ ನಲುಗಿತ್ತು. 

ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ ಸೇರಿ ಈ ಭಾಗದ ಬಹಳಷ್ಟು ಮಹನೀಯರು ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿದ್ದರು. 1928ರಲ್ಲಿ ಕಲಬುರ್ಗಿಯಲ್ಲಿ ಬಿ.ಎಂ. ಶ್ರೀಕಂಠಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ 14ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಭಾಗದಲ್ಲಿ ಕನ್ನಡ ಜಾಗೃತಿಗೆ ಭದ್ರ ಅಡಿಪಾಯ ಹಾಕಿತು. 


ಕಲಬುರ್ಗಿಯ ಜಗತ್ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ  ಸಂಘ (ಫೊಟೊ ಕೃಪೆ- ಪ್ರಶಾಂತ್  ಎಚ್. ಜಿ)

ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದು ಮತ್ತು ಆ ಮೂಲಕ ಕನ್ನಡ ಭಾಷೆ ಉಳಿಸಿ–ಬೆಳೆಸುವ ಉದ್ದೇಶದಿಂದ ಹಲವು ಮಹನಿಯರು ಸೇರಿಕೊಂಡು ಕಲಬುರ್ಗಿಯ ಜಗತ್‌ ಪ್ರದೇಶದಲ್ಲಿ 1940ರಲ್ಲಿ ಕಟ್ಟಡವೊಂದನ್ನು ಬಾಡಿಗೆ ಪಡೆದು ವಾಚನಾಲಯ ಆರಂಭಿಸಿದರು.  ಎಲ್ಲ ಭಾಷೆಗಳ ದಿನಪತ್ರಿಕೆಗಳನ್ನೂ ಅಲ್ಲಿಗೆ ತರಿಸಿ ಜನರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಕೆಲಸಕ್ಕೆ ಮುನ್ನುಡಿ ಬರೆದರು. ಆ ನಂತರ ತವಗ ಭೀಮಸೇನರಾಯರ ನೇತೃತ್ವದಲ್ಲಿ ‘ವಿದ್ಯಾರ್ಥಿಗಳ ಅಭ್ಯಾಸ ಕೂಟ’ ಆರಂಭವಾಯಿತು.

ಕನ್ನಡ ಸಾಹಿತ್ಯ ಸಂಘಕ್ಕೆ ಅಧಿಕೃತ ಮುದ್ರೆ ದೊರೆತಿದ್ದು 1941ರಲ್ಲಿ. ಈ ಸಂಘಕ್ಕೆ ಭದ್ರ ನೆಲೆ ಕಲ್ಪಿಸಲು  ಬನ್ನಿಕೊಪ್ಪದ ಭೂಮರೆಡ್ಡಿ ಬಸಪ್ಪ ಅವರು ಒಂದು ಸಾವಿರ ರೂಪಾಯಿ, ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿದ್ದ ದೊಡ್ಡಪ್ಪ ಅಪ್ಪ ಅವರು ₹500 ದೇಣಿಗೆ ನೀಡಿದರು. ಕಪಟ್ರಾಳ ಕೃಷ್ಣರಾಯರು, ತವಗ ಭೀಮಸೇನರಾಯರು, ಅಶ್ವತ್ಥರಾವ್‌ ವಕೀಲರು, ಎಸ್‌.ಹನುಮಂತರಾಯರು, ಮಲ್ಲಾಪುರ ಶ್ರೀನಿವಾಸರಾಯರು, ದತ್ತಾತ್ರೇಯರಾವ್‌ ಅವರಾಧಿ  ಹಾಗೂ ಇನ್ನೂ ಹಲವರು ಸೇರಿ ಈ ಸಂಘದ ಚಟುವಟಿಕೆಗಳ ರೂಪುರೇಷೆ ಹೇಗಿರಬೇಕು ಎಂದು ನಿರ್ಧರಿಸಿದರು. ಸಂಘಕ್ಕೊಂದು ಸ್ವಂತ ನೆಲೆ ಕಲ್ಪಿಸುವ ಚಿಂತನೆ ಅವರದ್ದಾಗಿತ್ತು. 

ಅಷ್ಟೊತ್ತಿಗಾಗಲೇ ಆಗಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಅಜೀಜ್‌ ಖಾನ್‌ ಮಾಸ್ತರ್‌ ಅವರು ತಮ್ಮ ಮನೆಯನ್ನು 11 ಸಾವಿರಕ್ಕೆ ಮಾರಾಟ ಮಾಡುವ ವಿಷಯ ತಿಳಿದು ಅದನ್ನು ಖರೀದಿಸಲು ಇವರೆಲ್ಲ ಮುಂದಾದರು. ಹನುಮಂತರಾವ ಕಕ್ಕೇರಿ ವಕೀಲರು ನೀಡಿದ ₹6 ಸಾವಿರ ಕೈಗಡ ಸೇರಿ ಒಟ್ಟಾರೆ 11 ಸಾವಿರದಲ್ಲಿ ಜಗತ್‌ ಪ್ರದೇಶದಲ್ಲಿಯ ಈ ಕಟ್ಟಡ ಖರೀದಿಸಿದರು. ಆಗಿನ ಕನ್ನಡ ಅಭಿಮಾನಿ ನೌಕರರು ಒಂದು ತಿಂಗಳ ವೇತನವನ್ನೂ ನೀಡಿ ಸಂಘದ ಚಟುವಟಿಕೆಗಳಿಗೆ ನೀರೆರೆದು ಪೋಷಿಸಿದರು.

ಬೆಂಗಳೂರಿನ ಸಾಹಿತ್ಯ ಪರಿಷನ್ಮಂದಿರ, ಧಾರವಾಡದ ವಿದ್ಯಾವರ್ಧಕ ಸಂಘ, ಶಿವಮೊಗ್ಗದ ಸಾಹಿತ್ಯ ಸಂಘ ಹಾಗೂ ಕಲಬುರ್ಗಿಯ ಕನ್ನಡ ಸಾಹಿತ್ಯ ಸಂಘ ಇವು ಮಾತ್ರ 1941ರಲ್ಲಿ ಸ್ವಂತ ಕಟ್ಟಡ ಹೊಂದಿದ್ದ ಸಂಘಗಳಾಗಿದ್ದವು. ಇಲ್ಲಿಯ ಹಿರಿಯ ಸಾಹಿತಿಗಳು ಈಗಲೂ ಇದನ್ನು ಹೇಳಿಕೊಂಡು ಹೆಮ್ಮೆಪಡುತ್ತಾರೆ.

ಶ್ರೀಮಂತರಾಯ ಪಾಂಡುರಂಗರಾವ ದೇಶಮುಖ ಅವರು ಈ ಸಂಘದ ಪ್ರಥಮ ಅಧ್ಯಕ್ಷರಾದರು. ಆ ನಂತರ ಸಂಜೀವಕುಮಾರ ವಕೀಲರು, ಭೀಮಸೇನರಾವ ತವಗ ಅವರು ಅಧ್ಯಕ್ಷರಾದರು. 

ನಾಡಹಬ್ಬ, ಸಾಹಿತ್ಯೋತ್ಸವ, ವ್ಯಾಖ್ಯಾನ, ನಾಟಕ, ಜಯಂತ್ಯುತ್ಸವ, ಪ್ರಮುಖ ಸಾಹಿತಿಗಳನ್ನು ಆಹ್ವಾನಿಸಿ ಉಪನ್ಯಾಸಗೋಷ್ಠಿ ಏರ್ಪಡಿಸುವುದು ಹೀಗೆ ಹಲವು ಚಟುವಟಿಕೆಗಳನ್ನು ನಡೆಸುತ್ತ ಈ ಸಂಘ ಸಕ್ರಿಯವಾಯಿತು. ದೊಡ್ಡ ಗ್ರಂಥ ಭಂಡಾರವನ್ನೂ ಈ ಸಂಘ ಹೊಂದಿದ್ದು ಈಗಲೂ ಗ್ರಂಥಾಲಯ, ವಾಚನಾಲಯಗಳು ಕಾರ್ಯನಿರ್ವಹಿಸುತ್ತಿವೆ. 

ಪ್ರಸ್ತುತ ಈ ಸಂಘಕ್ಕೆ ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಅಧ್ಯಕ್ಷರಾಗಿದ್ದಾರೆ. ಕೈಲಾಸನಾಥ ದೀಕ್ಷಿತ (ಕಾರ್ಯದರ್ಶಿ), ಪ್ರಭಾಕರ ಸಾತಖೇಡ, ಹನಮಂತರಾಯ ಕಾನಿಹಾಳ, ಕಾಂತರಾಜ ತವಗ, ಶೋಭಾ ರಂಜೋಳಕರ (ಧರ್ಮದರ್ಶಿಗಳು), ಡಾ.ಮಲ್ಹಾರರಾವ್‌ ಮಲ್ಲೆ (ಸಹ ಸದಸ್ಯರು) ಅವರು ಸಂಘದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.


ಪ್ರೊ.ವಸಂತ ಕುಷ್ಟಗಿ

ಗ್ರಂಥಗಳ ಪ್ರಕಟ: ಕನ್ನಡ ಸಾಹಿತ್ಯ ಸಂಘವು ಕನ್ನಡ ಚಟುವಟಿಕೆಗಳ ಜೊತೆಗೆ ಗ್ರಂಥಗಳನ್ನೂ ಪ್ರಕಟಿಸಿದೆ. ಅವುಗಳಲ್ಲಿ ಪ್ರಮುಖವಾದ ಪ್ರಕಟಣೆಗಳ ಪಟ್ಟಿ ಇಲ್ಲಿದೆ.

1.ಲಕ್ಷ್ಮೀಶನ ಕನ್ನಡ ಜೈಮಿನಿಭಾರತಕ್ಕೆ ಮುನ್ನುಡಿ–ಡಾ.ದ.ರಾ.ಬೇಂದ್ರೆ

2.ಬೇಂದ್ರೆ ಹಾಗೂ ಕನ್ನಡ ಕಾವ್ಯ–ಪ್ರೊ.ಕೀರ್ತಿನಾಥ ಕುರ್ತಕೋಟಿ

3.ಕನ್ನಡ ಭಗವದ್ಗೀತೆ–ವೆಂಕಟರಾವ ನಾಯಕ

4.ಹಾಲು ಜೇನು–ಜಯತೀರ್ಥ ರಾಜಪುರೋಹಿತ

5.ಸಿಂಹನಾದ–ರಸಿಕ ಪುತ್ತಿಗೆ

6.ಕನಕದಾಸರ ಗೀತೆಗಳು–ಪ್ರೊ.ವಸಂತ ಕುಷ್ಟಗಿ

7.ಅಧ್ಯಯನದ ಹಾದಿಯಲ್ಲಿ–ಜಯತೀರ್ಥ ರಾಜಪುರೋಹಿತ

8.ಶ್ರೀರಾಮಲೀಲಾಮೃತ–ವೆಂಕಟರಾವ ನಾಯಕ

9. ‘ತವಗಶ್ರೀ’ ಸಂಭಾವನಾಗ್ರಂಥ– ಸಂಪಾದಕರು: ಜಯತೀರ್ಥ ರಾಜಪುರೋಹಿತ, ಪ್ರೊ.ವಸಂತ ಕುಷ್ಟಗಿ.

 (ಪೂರಕ ಮಾಹಿತಿ: ಕನ್ನಡ ಸಾಹಿತ್ಯ ಸಂಘ ಪ್ರಕಟಿಸಿರುವ ‘ತವಗಶ್ರೀ’ ಸಂಭಾವನಾಗ್ರಂಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು