ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆ ಸ್ವಲ್ಪ ಬಿಡುವು ನೀಡಿದೆ. ಇದರಿಂದ ಜಲಾಶಯಗಳ ಒಳ ಹರಿವು ತಗ್ಗಿದೆ. ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ 2200 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಜಲಾಶಯಕ್ಕೆ 1600 ಕ್ಯುಸೆಕ್ ಒಳಹರಿವಿದೆ. ಸದ್ಯ ಜಲಾಶಯದ ನೀರಿನ ಮಟ್ಟ 490.15 ಮೀಟರ್ ಇದೆ. ಜಲಾಶಯದ ನೀರು ಸಂಗ್ರಹಣೆಯ ಗರಿಷ್ಠ ಮಟ್ಟ 491 ಮೀಟರ್ ಆಗಿದೆ ಎಂದು ಎಇಇ ಅಮೃತ ಪವಾರ ಮತ್ತು ವಿನಾಯಕ ಚವ್ಹಾಣ ತಿಳಿಸಿದ್ದಾರೆ.
ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಒಳ ಹರಿವು ಭಾರಿ ಪ್ರಮಾಣದಲ್ಲಿ ತಗ್ಗಿದೆ. ಇದರಿಂದ ಹಗಲಿನಲ್ಲಿ ನದಿಗೆ ನೀರು ಬಿಡುವುದು ನಿಲ್ಲಿಸಲಾಗಿತ್ತು. ಆದರೆ ರಾತ್ರಿ 8 ಗಂಟೆಯಿಂದ 1ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ ಎಂದು ಎಇಇ ಚೇತನ ಕಳಸ್ಕರ್ ಮಾಹಿತಿ ನೀಡಿದರು.
ಜಲಾಶಯದ ನೀರು ಸಂಗ್ರಹಣೆಯ ಗರಿಷ್ಠ ಮಟ್ಟ 1618 ಅಡಿಯಿದೆ. ಸೋಮವಾರ ಬೆಳಿಗ್ಗೆ 1613.75 ಅಡಿ ಇದ್ದ ನೀರಿನ ಮಟ್ಟ ರಾತ್ರಿ 8 ಗಂಟೆ ಸುಮಾರಿಗೆ 1616 ಅಡಿ ತಲುಪಿದ್ದು, ಒಂದೇ ದಿನ 2.5 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಸದ್ಯ ಒಳಹರಿವು 521 ಕ್ಯುಸೆಕ್ ಇದೆ.
ಎರಡೂ ಜಲಾಶಯಗಳಿಂದ ನದಿಗೆ ನೀರು ಬಿಡುವುದು ಮುಂದುವರಿದಿದ್ದರಿಂದ ಮುಲ್ಲಾಮಾರಿ ನದಿಯಲ್ಲಿ ಈಗಲೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ನಾಗರಾಜ ಜಲಾಶಯದಿಂದ 4ಸಾವಿರ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ತಾಜಲಾಪುರ, ಗಾರಂಪಳ್ಳಿ ಸೇತುವೆಗಳು ಮುಳುಗಿದ್ದವು. ಚಿಮ್ಮನಚೋಡ ಸೇತುವೆ ಬೆಡ್‌ಗೆ ಸಂಪರ್ಕಿಸಿ ನೀರು ಹರಿದಿದೆ. ಸಂಗಮೇಶ್ವರ ದೇವಾಲಯ ಎರಡನೇ ದಿನವೂ ಜಲಾವೃತವಾಗಿತ್ತು. ಇದರ ಜತೆಗೆ ಭಕ್ತಂಪಳ್ಳಿ, ಗರಕಪಳ್ಳಿ ಸೇತುವೆಯೂ ಮುಳುಗಡೆಯಾಗಿತ್ತು. ಇದರಿಂದ ಸಂಪರ್ಕ ಕಡಿತವಾಗಿದೆ. ಸೇತುವೆ ಮುಳುಗಡೆಯಾಗಿ ಪ್ರವಾಹ ಸ್ಥಿತಿ ಉಂಟಾದ ತಾಲ್ಲೂಕಿನ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಪ್ರಭುಲಿಂಗ ವಾಲಿ ಭೇಟಿ ನೀಡಿ ಪರಿಶೀಲಿಸಿದರು.
10 ಮನೆಗಳಿಗೆ ಹಾನಿ: ‘ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ಮತ್ತೆ 10 ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದ ಮನೆಗಳ ಗೋಡೆಗಳು ಉರುಳಿ ಬಿದ್ದಿರುವ ಕುರಿತು ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.
3 ಕೆರೆಗಳು ಭರ್ತಿ: ‘ತಾಲ್ಲೂಕಿನಲ್ಲಿ ಸೋಮವಾರ 3 ಕೆರೆಗಳು ಭರ್ತಿಯಾಗಿದ್ದು ಈ ಮೂಲಕ ತಾಲ್ಲೂಕಿನಲ್ಲಿ ತುಂಬಿದ ಕೆರೆಗಳ ಸಂಖ್ಯೆ 17ಕ್ಕೇರಿದೆ. ಕೋಡ್ಲಿ ಅಲ್ಲಾಪುರ, ಹಸರಗುಂಡಗಿ, ಹೂಡದಳ್ಳಿಗಳು ಭರ್ತಿಯಾದರೆ, ಸಾಲೇಬೀರನಹಳ್ಳಿ, ಕೊಳ್ಳೂರು, ತುಮಕುಂಟಾ ಕೆರೆ ಭರ್ತಿಯಾಗಬೇಕಿದೆ’ ಎಂದು ಸಣ್ಣ ನೀರಾವರಿ ಎಇಇ ಶಿವಾಜಿ ಜಾಧವ ತಿಳಿಸಿದರು.
ಬೆಳೆಹಾನಿ ಕುರಿತು ವರದಿ ಕಳುಹಿಸಲು ಮೇಲಧಿಕಾರಿಗಳು ಸೂಚಿಸಿದ್ದಾರೆ. ಮಂಗಳವಾರದಿಂದ ಸಮೀಕ್ಷೆ ನಡೆಸಿ ವಾಸ್ತವಿಕ ವರದಿ ನೀಡಲಾಗುವುದು.– ವೀರಶೆಟ್ಟಿ ರಾಠೋಡ್, ಸಹಾಯಕ ಕೃಷಿ ನಿರ್ದೆಶಕ ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.