ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ: ವರುಣನ ಆರ್ಭಟ ಜೋರು

ತಾಲ್ಲೂಕಿನ ವಿವಿಧೆಡೆ ಸೇತುವೆ ಮುಳುಗಡೆ, ಹೊಸಳ್ಳಿ ಗ್ರಾಮಕ್ಕೆ ಜಲದಿಗ್ಬಂಧನ
Published 2 ಸೆಪ್ಟೆಂಬರ್ 2024, 4:40 IST
Last Updated 2 ಸೆಪ್ಟೆಂಬರ್ 2024, 4:40 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನಾದ್ಯಂತ ವರುಣನ ಆರ್ಭಟ ಭಾನುವಾರವು ಮುಂದುವರಿದಿದ್ದು, ಜನರು ದಿನವಿಡೀ ಪರದಾಡುವಂತಾಯಿತು.

ತಾಲ್ಲೂಕಿನ ಉಭಯ ನದಿಗಳಾದ ಕಾಗಿಣಾ-ಕಮಲಾವತಿ ನದಿಗಳಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಮೈದುಂಬಿ ಹರಿದವು. ನದಿ ಪಾತ್ರದ ಯಡ್ಡಳ್ಳಿ, ತೆಲ್ಕೂರ, ಕಾಚೂರ, ಬಿಬ್ಬಳ್ಳಿ, ಸಂಗಾವಿ(ಎಂ), ಬಟಗೇರಾ, ಸಿಂಧನಮಡು ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಮತ್ತು ಕೆಲವು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ತಾಲ್ಲೂಕಿನ ಮಳಖೇಡದಿಂದ ಸಂಗಾವಿ(ಎಂ) ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಮೇಲೆ ಕಾಗಿಣಾ ನದಿ ನೀರು ಹರಿದಿದ್ದರಿಂದ ದಿನವಿಡಿ ಸಂಗಾವಿ(ಎಂ) ಗ್ರಾಮದ ಸಂಪರ್ಕ ಸ್ಥಗಿತಗೊಂಡಿತ್ತು. ಜೊತೆಗೆ ಬಿಬ್ಬಳ್ಳಿ, ಯಡ್ಡಳ್ಳಿ ಗ್ರಾಮಗಳ ಸೇತುವೆಯೂ ದಿನವಿಡಿ ಮುಳುಗಿತ್ತು. ಇದರಿಂದ ಗ್ರಾಮಗಳಿಗೆ ತೆರಳುವ ಜನರು ಪರದಾಡುವಂತಾಯಿತು.

ಮಳಖೇಡ ಹಳೆ ಸೇತುವೆ ಮುಳುಗಡೆ: ತಾಲ್ಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಳೆ ಸೇತುವೆ ನದಿ ನೀರಿನ ಪ್ರವಾಹಕ್ಕೆ ಸಂಪೂರ್ಣ ಜಲಾವೃತ್ತಗೊಂಡಿತು. ನೀರು ಬಂದಿದ್ದರಿಂಧ ಹಳೆ ಸೇತುವೆ ಮೇಲಿನ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ನದಿಯತ್ತ ತೆರಳದಂತೆ ಮಳಖೇಡ ಪೊಲೀಸ್ ಠಾಣೆಯ ಪೊಲೀಸರು ಬ್ಯಾರಿಕೇಡ್ ಹಾಕಿ ನದಿಯತ್ತ ಬಂದೋಬಸ್ತ್ ಕೈಗೊಂಡಿದ್ದರು.

ಸಂಗಮೇಶ್ವರ ದೇವಾಲಯ ಜಲಾವೃತ್ತ:ತಾಲ್ಲೂಕಿನ ಸಂಗಾವಿ(ಎಂ) ಗ್ರಾಮದ ಬಳಿ ಕಾಗಿಣಾ ನದಿಗೆ ಹೊಂದಿಕೊಂಡಿರುವ ಸಂಗಮೇಶ್ವರ ದೇವಾಲಯ ಭಾನುವಾರ ಸಂಪೂರ್ಣ ಜಲಾವೃತ್ತಗೊಂಡಿತ್ತು. ಕಾಗಿಣಾ ನದಿ ನೀರು ಮತ್ತು ಬೆಣ್ಣೆ ತೊರೆ ನೀರು ಎರಡು ಕಡೆಯಿಂದ ಬಂದಿದ್ದರಿಂದ ದೇವಾಲಯ ಜಲಾವೃತಗೊಂಡಿತ್ತು.

4 ಗಂಟೆ ರಾಜ್ಯ ಹೆದ್ದಾರಿ ಬಂದ್: ತಾಲ್ಲೂಕಿನ ಕಮಲಾವತಿ ನದಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಬಟಗೇರಾ ಸೇತುವೆ ಸಂಪೂರ್ಣ ಜಲಾವೃತಗೊಂಡು ಸುಮಾರು 4-5 ಗಂಟೆಗಳ ಕಾಲ ರಾಜ್ಯ ಹೆದ್ದಾರಿ-10 ಕಲಬುರಗಿ-ರಿಬ್ಬನಪಲ್ಲಿ ಸಂಪರ್ಕ ಸ್ಥಗಿತಗೊಂಡಿತ್ತು. ಇದರಿಂದಾಗಿ ಕಲಬುರಗಿಯಿಂದ ತೆಲಂಗಾಣ, ಆಂಧ್ರಪ್ರದೇಶ ಮತ್ತು ವಿವಿಧೆಡೆ ತೆರಳುವ ವಾಹನ ಸವಾರರು ಪರದಾಡುವಂತಾಯಿತು. ನದಿಯತ್ತ ತೆರಳದಂತೆ ಸೇಡಂ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥರೆಡ್ಡಿ ಬಂದೋಬಸ್ತ್ ಕೈಗೊಂಡಿದ್ದರು.

ಗ್ರಾಮಕ್ಕೆ ನುಗ್ಗಿದ ನಾಲಾ ನೀರು: ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಮಂಗಲಗಿ ಹಣದಿ ನೀರು ಮುಖ್ಯ ರಸ್ತೆ ಮೂಲಕ ಗ್ರಾಮಕ್ಕೆ ನುಗ್ಗಿದೆ. ಗ್ರಾಮದ ಮಹಾಂತೇಶ್ವರ ಮಠ ಸೇರಿದಂತೆ ವಿವಿಧ ಮನೆಗಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಯಿತು. ಗ್ರಾಮದ ಬಸಮ್ಮ ಮರತೂರ ಅವರ 2 ಚೀಲ ಹೆಸರು, ನೀಲಕಂಠರಾವ ಪಂಚಾಕ್ಷರಿ 2 ಚೀಲ ಹೆಸರಿನ ಚೀಲ ಕಾಯಿ, ಶಿವಯೋಗಿ ಕತಲಗೋಳ ಅವರ ಹೆಸರಿನ ಧಾನ್ಯಗಳು ತೋಯ್ದಿವೆ ಎನ್ನಲಾಗಿದೆ.

‘ರಾತ್ರಿ ಸುರಿದ ಮಳೆಯಿಂದಾಗಿ ನಮ್ಮ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಧವಸ ಧಾನ್ಯಗಳು ತೊಯ್ದಿವೆ. ಗ್ರಾಮ ಆಡಳಿತಾಧಿಕಾರಿಗೆ ಸಂಪರ್ಕಿಸಿದರೆ ಮೊಬೈಲ್ ಸ್ವಿಚ್ ಆಫ್ ಇತ್ತು. ಜನಪ್ರತಿನಿಧಿ ಮತ್ತು ಅಧಿಕಾರಿಗಳು ನಮ್ಮೂರಿಗೆ ಭೇಟಿ ನೀಡಬೇಕು’ ಎಂದು ತೊಟ್ನಳ್ಳಿ ಗ್ರಾಮಸ್ಥ ಶಿವರಾಜ ಪಂಚಾಕ್ಷರಿ ಹೇಳಿದ್ದಾರೆ.

ಸೇಡಂ ತಾಲ್ಲೂಕು ಹೊಸಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಮೇಲೆ ನೀರು ಹರಿಯುತ್ತಿರುವುದು
ಸೇಡಂ ತಾಲ್ಲೂಕು ಹೊಸಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಮೇಲೆ ನೀರು ಹರಿಯುತ್ತಿರುವುದು
ಸೇಡಂ ತಾಲ್ಲೂಕು ಸಂಗಾವಿ(ಎಂ) ಗ್ರಾಮದ ಸಂಗಮೇಶ್ವರ ದೇವಾಲಯ ಜಲಾವೃತಗೊಂಡಿರುವುದು
ಸೇಡಂ ತಾಲ್ಲೂಕು ಸಂಗಾವಿ(ಎಂ) ಗ್ರಾಮದ ಸಂಗಮೇಶ್ವರ ದೇವಾಲಯ ಜಲಾವೃತಗೊಂಡಿರುವುದು
ಭಾನುವಾರ ಹಳೆ ಸೇತುವೆ ಮೇಳೆ ನೀರು ಬಂದಿದ್ದರಿಂದ ಸಾವಿರಾರು ಪ್ರಯಾಣಿಕರು ನೂತನ ಸೇತುವೆ ಮೇಲೆ ಸಂಚರಿಸಿರುವುದು ಖುಷಿ ತಂದಿದೆ.
ಡಾ.ಶರಣಪ್ರಕಾಶ ಪಾಟೀಲ ಸಚಿವ

ಜಲದಿಗ್ಭಂಧನದಲ್ಲಿ 2 ದಿನ ಕಳೆದ ಹೊಸಳ್ಳಿ ಗ್ರಾಮಸ್ಥರು!

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಹೊಸಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ (ಸೇತುವೆ) ನಾಲಾ ನೀರಿನ ಪ್ರವಾಹಕ್ಕೆ ಎರಡು ದಿನ ಸಂಪೂರ್ಣ ಜಲಾವೃತಗೊಂಡಿತ್ತು. ಇದರಿಂದಾಗಿ ಗ್ರಾಮಸ್ಥರು ಎರಡು ದಿನಗಳಲ್ಲಿ ಕಾಲ ಜಲದಿಗ್ಬಂಧನದಲ್ಲಿಯೇ ಕಳೆಯುಂತಾಗಿ ಪರದಾಡಿದರು. ಕೃಷಿ ಕಾರ್ಮಿಕರು ಸರ್ಕಾರಿ ನೌಕರರು ರೈತರು ಹಾಗೂ ಸೇಡಂ ಸೇರಿದಂತೆ ವಿವಿಧೆಡೆ ನಿತ್ಯ ಕೆಲಸಕ್ಕೆ ತೆರಳುವ ಜನ ಅನಿವಾರ್ಯವಾಗಿ ಮನೆಯಲ್ಲಿ ಕಳೆದರು. ಅಲ್ಲದೆ ಶನಿವಾರ ರಾತ್ರಿಯಿಂದ ಭಾನುವಾರ ದಿನವಿಡೀ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುವಂತಾಯಿತು. ‘ನಾಲಾ ನೀರಿಗೆ ನಾವು ಗ್ರಾಮದಿಂದ ಹೊರಗಡೆ ಹೋಗದಂತಾಗಿದ್ದು ಗ್ರಾಮಸ್ಥರೆಲ್ಲರೂ ಪರದಾಡುವಂತಾಗಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮಳಖೇಡ ನೂತನ ಸೇತುವೆಯಿಂದ ಅನುಕೂಲ

ತಾಲ್ಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ನೂತನ ಸೇತುವೆಯನ್ನು ಆಗಸ್ಟ್‌ 24 ರಂದು ಸಚಿವ ಡಾ.ಶರಣಪ್ರಕಾಶ ಮತ್ತು ಸಂಸದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸಿದ್ದರು. ‘ಇಂದಿನಿಂದ ಸೇತುವೆ ಮೇಲೆ ವಾಹನಗಳ ಪ್ರಯಾಣ ಆರಂಭವಾಗಲಿ. ಹಳೆ ಸೇತುವೆ ಕೂಡ ಚಾಲನೆಯಲ್ಲಿರಲಿ’ ಎಂದು ಸೂಚಿಸಿದ್ದರು. ಸೇತುವೆ ಉದ್ಘಾಟನೆಗೊಂಡು 6 ದಿನಗಳು ಕಳೆದಿದ್ದು 7 ದಿನಕ್ಕೆ ಹಳೆ ಸೇತುವೆ ನೀರಲ್ಲಿ ನದಿ ನೀರಿನ ಪ್ರವಾಹದಲ್ಲಿ ಮುಳುಗಿದೆ. ನೂತನ ಸೇತುವೆ ಮೇಲೆ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ದಿನವಿಡಿ ಸಂಚರಿಸಿದವು. ಅಲ್ಲದೆ ನೂತನ ಸೇತುವೆ ಕೊನೆಗೂ ಉದ್ಘಾಟನೆಗೊಂಡು ಉಪಯೋಗಕ್ಕೆ ಬಂದಿದೆ. ಸೇತುವೆಯಿಂದ ಉಪಯೋಗವಾಗಿದೆ ಎಂದು ಸಾರ್ಥಕ ಕ್ಷಣಗಳ ಮಾತುಗಳನ್ನಾಡುತ್ತಿರುವುದು ಬಸ್ ಪ್ರಯಾಣಿಕರಲ್ಲಿ ಲಾರಿ ಚಾಲಕರಲ್ಲಿ ಖಾಸಗಿ ವಾಹಗಳ ಪ್ರಯಾಣಿಕರಲ್ಲಿ ಭಾನುವಾರ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT