ಮಂಗಳವಾರ, ಮಾರ್ಚ್ 2, 2021
18 °C
ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪಟೇಲ್‌

ಸಿಯುಕೆ ಕಲಹಕ್ಕೆ ಹೊಸ ತಿರುವು: ಅಧಿಕಾರ ವಹಿಸಿಕೊಂಡ ಹಂಗಾಮಿ ಕುಲಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಮುಷ್ತಾಕ್ ಅಹ್ಮದ್ ಐ. ಪಟೇಲ್ ಅವರು, ತಮ್ಮನ್ನು ಮಾತೃ ವಿಶ್ವವಿದ್ಯಾಲಯಕ್ಕೆ ಕಳಿಸುವ ಹಂಗಾಮಿ ಕುಲಪತಿ ಕ್ರಮವನ್ನು ಪ್ರತಿಭಟಿಸಿ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದರೂ, ಹಂಗಾಮಿ ಕುಲಸಚಿವರಾಗಿ ಬಸವರಾಜ ಡೋಣೂರ ಅಧಿಕಾರ ವಹಿಸಿಕೊಂಡಿದ್ದಾರೆ.

ಏತನ್ಮಧ್ಯೆ, ಪಟೇಲ್‌ ಅವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ‘ಹಂಗಾಮಿ ಕುಲಪತಿ ಪ್ರೊ.ಎಂ.ವಿ. ಅಳಗವಾಡಿ ಅವರು ನಿಯಮಬಾಹಿರವಾಗಿ ನನ್ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ಪೂರ್ಣಾವಾಧಿ ಕುಲಸಚಿವ ಹುದ್ದೆಯ ಅವಧಿ ಐದು ವರ್ಷಗಳಿದ್ದು, ಅವಧಿ ಮುಗಿಯುವ ಮುನ್ನವೇ ಈ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ, ಕೆಲ ಪ್ರಾಧ್ಯಾಪಕರನ್ನು ಕಳಿಸಿ ಮಾನಸಿಕ ಹಿಂಸೆ ನೀಡುವ ಮೂಲಕ ನನ್ನ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನನಗೆ ಭದ್ರತೆ ನೀಡಬೇಕು’ ಎಂದು ನರೋಣಾ ಪೊಲೀಸರಿಗೆ ದೂರು ನೀಡಿದ್ದಾರೆ.

‘ಪಟೇಲ್‌ ಅವರು ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳು ನಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೂ, ನಾವು ಕುಲಪತಿ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ಹೋಗಲಿ: ‘ಪಟೇಲ್ ಅವರಿಗೆ ಅನ್ಯಾಯವಾಗಿದ್ದರೆ ನ್ಯಾಯಾಲಯಕ್ಕೆ ಹೋಗಬಹುದಾಗಿದೆ. ನನ್ನ ಅಧಿಕಾರ ಬಳಸಿ ಅವರನ್ನು ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡಿ, ಅವರು ಪ್ರಾಧ್ಯಾಪಕರಾಗಿರುವ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯಕ್ಕೆ ತೆರಳುವಂತೆ ತಿಳಿಸಿದ್ದೇನೆ. ಇದೇ 29ರಂದು ವಿ.ವಿ.ಯ ಕಾರ್ಯಕಾರಿ ಮಂಡಳಿ (ಇ.ಸಿ.) ಸಭೆ ಕರೆದಿದ್ದು, ಕುಲಸಚಿವರನ್ನು ಬಿಡುಗಡೆಗೊಳಿಸಿದ್ದಕ್ಕೆ ಒಪ್ಪಿಗೆ ಪಡೆಯಲಿದ್ದೇನೆ’ ಎಂದು ಅಳಗವಾಡಿ ಪ್ರತಿಕ್ರಿಯಿಸಿದರು.

‘ಸೇವಾ ಹಿರಿತನ ಕಡೆಗಣನೆ’

‘ವಿಶ್ವವಿದ್ಯಾಲಯದಲ್ಲಿ ನಾನು ಸೇವಾ ಹಿರಿತನ ಹೊಂದಿದ್ದು, ಇದನ್ನು ಕಡೆಗಣಿಸಿ ಬಸವರಾಜ ಡೋಣೂರ ಅವರನ್ನೇ ಏಕೆ ಕುಲಸಚಿವರನ್ನಾಗಿ ನೇಮಕ ಮಾಡಿದ್ದೀರಿ’ ಎಂದು ಪ್ರಶ್ನಿಸಿ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರೊ.ಶಿವಗಂಗಾ ರುಮ್ಮಾ ಅವರು ಹಂಗಾಮಿ ಕುಲಪತಿಗೆ ಪತ್ರ ಬರೆದಿದ್ದಾರೆ.

‘ಹಿಂದಿನ ಕುಲಪತಿ ಪ್ರೊ. ಮಹೇಶ್ವರಯ್ಯ ಅವರು ಪ್ರೊ.ರೊಮಾಟೆ ಜಾನ್ ಅವರನ್ನು ಹಂಗಾಮಿ ಕುಲಪತಿಯನ್ನಾಗಿ ನೇಮಿಸಿದಾಗ ನೀವೇ ಅದನ್ನು ಪ್ರಶ್ನಿಸಿ ಹಿರಿತನದ ಆಧಾರದ ಮೇಲೆ ಕುಲಪತಿ ನೇಮಕವಾಗಿಲ್ಲ ಎಂದು ತಕರಾರು ಮಾಡಿ ಅಧಿಕಾರ ವಹಿಸಿಕೊಂಡಿದ್ದೀರಿ. ಆ ನಿಯಮ ನನ್ನ ವಿಷಯದಲ್ಲಿ ಪಾಲಿಸಲು ನಿಮಗೆ ಏನು ಸಮಸ್ಯೆ’ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು