ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: 25 ಸಾವಿರ ಜನರಿಗೆ ಬ್ಯಾಗ್‌ ವಿತರಣೆ

ನೋಂದಣಿ ಕಾರ್ಯದಲ್ಲಿ ಗೊಂದಲವಾಗದಂತೆ ನೋಡಿಕೊಳ್ಳಿ: ಕಮಕನೂರ
Last Updated 18 ಜನವರಿ 2020, 9:45 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾವಿರಾರು ಸಂಖ್ಯೆಯಲ್ಲಿ ನೋಂದಾಯಿತ ಪ್ರತಿನಿಧಿಗಳು ಆಗಮಿಸಲಿದ್ದು, ಅವರಿಗೆ ಟ್ರಾವೆಲಿಂಗ್ ಬ್ಯಾಗ್ ನೀಡುವ ಸಂದರ್ಭದಲ್ಲಿ ಯಾವುದೇ ಗೊಂದಲವಾಗದಂತೆ ಸೂಕ್ತ ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಾಹಿತ್ಯ ಸಮ್ಮೇಳನದ ನೋಂದಣಿ ಸಮಿತಿ ಅಧ್ಯಕ್ಷ ತಿಪ್ಪಣಪ್ಪ ಕಮಕನೂರ್ ತಿಳಿಸಿದರು.

ಶುಕ್ರವಾರ ಸಮ್ಮೇಳನದ ನೋಂದಣಿ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೂರದಿಂದ ಬರುವ ಪ್ರತಿನಿಧಿಗಳಿಗೆ ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಮಾತನಾಡಿ ನೋಂದಾಯಿತ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳಿಗೆ ನೆನಪಿನಂಗಳದಲ್ಲಿ ಉಳಿಯುವಂತೆ ಪೆನ್ನು, ಪ್ಯಾಡ್ ಒಳಗೊಂಡ ಉತ್ತಮ ಗುಣಮಟ್ಟದ ಟ್ರಾವೆಲಿಂಗ್ ಬ್ಯಾಗ್ ವಿತರಣೆ ಮಾಡಬೇಕು. ಅಂದಾಜು 25 ಸಾವಿರ ನೊಂದಾಯಿತರಿಗೆ ಬ್ಯಾಗ್ ವಿತಸಲಾಗುತ್ತದೆ ಎಂದರು.

ಸಮಿತಿಯ ಕಾರ್ಯಾಧ್ಯಕ್ಷ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ ಮಾತನಾಡಿ ಈ ಬಾರಿ ಸಮ್ಮೇಳನದಲ್ಲಿ ಹೆಚ್ಚಿನ ಪಾರದರ್ಶಕತೆ ಕಾಪಾಡಲು ಪ್ರತಿ ರಸೀದಿಗಳ ಮೇಲೆ ಬಾರ್‌ಕೋಡ್‌ ಅಳವಡಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಬಾರಕೋಡ್ ಇಲ್ಲದ ನೋಂದಣಿ ರಸೀದಿಗಳು ನೀಡಲಾಗಿದೆ ಎಂಬ ಮಾಹಿತಿ ಬಂದಿರುವುದರಿಂದ ಬಾರ್‌ಕೋಡ್‌ ಹೊಂದಿರುವ ಹಾಗೂ ಬಾರ್ ಕೋಡ್ ಇಲ್ಲದ ರಸೀದಿಗಳಿಗೆ ಪ್ರತ್ಯೇಕವಾದ ಕೌಂಟರ್‌ ತೆರೆಯಲಾಗುವುದು ಎಂದು ಹೇಳಿದರು.

ಟ್ರಾವೆಲಿಂಗ್ ಬ್ಯಾಗ್ ಮತ್ತು ಬ್ಯಾಡ್ಜ್‌ ಆಯ್ಕೆ: ಪ್ರತಿನಿಧಿಗಳು ಸೇರಿದಂತೆ ಇನ್ನಿತರರಿಗೆ ಲ್ಯಾಪ್‌ಟಾಪ್‌ ಬ್ಯಾಗ್‌ ಬದಲು ಟ್ರಾವೆಲಿಂಗ್ ಬ್ಯಾಗ್‌ ನೀಡಬೇಕು ಎಂಬ ನಿರ್ಣಯ ಕೈಗೊಂಡ ಸಮಿತಿ ಟ್ರಾವೆಲಿಂಗ್ ಬ್ಯಾಗ್ ಮತ್ತು ಸಮ್ಮೇಳನದಲ್ಲಿ ನೀಡಲಾಗುವ ಬ್ಯಾಡ್ಜ್‌ ವಿನ್ಯಾಸಗಳಿಗೂ ಅನುಮೋದನೆ ನೀಡಿತು. ಟ್ರಾವೆಲಿಂಗ್ ಬ್ಯಾಗ್ ಮೇಲೆ ಹಳದಿ ಮತ್ತು ಕೆಂಪು ಬಣ್ಣದ ಪಟ್ಟಿ ಇರಲಿದ್ದು, ಪಟ್ಟಿಯ ಮೇಲ್ಭಾಗದಲ್ಲಿ ಸಮ್ಮೇಳನದ ಲಾಂಛನ ಇರಲಿದೆ. ಬ್ಯಾಡ್ಜಸ್ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಮಧ್ಯದಲ್ಲಿ ಸಮ್ಮೇಳನದ ಲಾಂಛನ ಇರಲಿದೆ.

ಸೂಕ್ತ ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ‘ರಾಜ್ಯದಾದ್ಯಂತ ಬರುವ ಪ್ರತಿನಿಧಿಗಳಿಗೆ ಬ್ಯಾಗ್ ವಿತರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಈಗಾಗಲೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲಲ್ಲಿ ಸಿ.ಸಿ.ಟಿ.ವಿ., ಡ್ರೋನ್ ಕ್ಯಾಮೆರಾ ಅಳವಡಿಸಲಾಗುತ್ತದೆ’ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕರಾವ ರಘೋಜಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮುನಾವರ್ ದೌಲಾ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಬನ್ಸಿ ಪವಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿಪಾಟೀಲ, ಕಸಾಪ ಪ್ರತಿನಿಧಿ ಅಂಬಾಜಿ ಕವಲಗಾ ಹಾಗೂ ಸಮಿತಿಯ ಿತರ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT