ಮಂಗಳವಾರ, ಮಾರ್ಚ್ 2, 2021
21 °C

ಧರಣಿ ಸ್ಥಳದಲ್ಲೇ ಧ್ವಜಾರೋಹಣ ಮಾಡಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಮುಖಂಡರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಮಂಗಳವಾರ, ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮರಡಗಿ ಮಾತನಾಡಿ, ‘ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿರುವ ಕೇಂದ್ರ ಸರ್ಕಾರ ರೈತರನ್ನು ಗುಲಾಮರನ್ನಾಗಿ ಮಾಡುತ್ತಿದೆ. ವ್ಯತಿರಿಕ್ತ ಹವಾಮಾನದ ನಡುವೆಯೂ ಮಸೂದೆಗಳ ವಿರುದ್ಧ ಎರಡು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ಈ ಹೋರಾಟದಲ್ಲಿ ಈಗಾಗಲೇ 130ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೂಡ ರೈತರು ನಿರಂತರ ಧರಣಿ ನಡೆಸುತ್ತಿದ್ದಾರೆ. ಇಷ್ಟಾದರೂ ಯಾವುದೇ ಒಬ್ಬ ಸಚಿವ ಕೂಡ ಕಣ್ಣೆತ್ತಿ ನೋಡಿಲ್ಲ’ ಎಂದರು.

‘ತೊಗರಿಗೆ ₹ 8750 ಬೆಂಬಲ ಬೆಲೆ ನೀಡಬೇಕು, ರೈತರು ಬೆಳೆದಷ್ಟು ತೊಗರಿ ಖರೀದಿಸಬೇಕೆಂದು. ಪೌರ ಕಾರ್ಮಿಕರನ್ನು ಸೇವಾ ಹಿರಿತನದ ಅಧಾರದ ಮೇಲೆ ಕಾಯಂ ಮಾಡಬೇಕು ಮತ್ತು ಹಿಂದೆ ನಿರ್ಧರಿಸಿದಂತೆ 272 ಪೌರ ಕಾರ್ಮಿರಿಗೆ 30X40 ನಿವೇಶನ ಹಂಚಿಕೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು’ ಮುಖಂಡ ಸುನೀಲ ಮಾನಪಡೆ ಒತ್ತಾಯಿಸಿದರು.

ರೈತ ಮುಖಂಡರಾದ ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ, ಮಲ್ಲಣಗೌಡ ಬನ್ನೂರು, ಎಸ್.ಎಫ್.ಐ. ಮುಖಂಡ ಸಿದ್ದು ಪಾಳಾ, ಅಹಿಂದ ಚಿಂತಕರ ವೇದಿಕೆಯ ಸಾಯಬಣ್ಣ ಜಮಾದಾರ, ಕಾಂಗ್ರೆಸ್ ಯುವ ಮುಖಂಡ ಪ್ರಜ್ಞಾನಂದ, ಮಕ್ಕಳ ಹಕ್ಕುಗಳ ಹೋರಾಟಗಾರ ವಿಠ್ಠಲ ಚಿಕಣಿ, ನೀರು ಸರಬರಾಜು ಗುತ್ತಿಗೆ ನೌಕರರ ಸಂಘದ ನಾಗರಾಜ, ಪೌರ ಕಾರ್ಮಿಕರ ಸಂಘದ ಕಮಲಾಬಾಯಿ, ಸಿದ್ಧಪ್ಪ ಪುಟಗಿ, ಅಂಬಾರಾಯ, ಸೋನುಬಾಯಿ, ಕಾಂತಮ್ಮ, ಮರೆಮ್ಮ, ಲಕ್ಷ್ಮೀಬಾಯಿ, ಪಾರ್ವತಿ ಹಾಜರಿದ್ದರು.

‘ಸಂವಿಧಾನಕ್ಕೆ ಮೀರಿದ್ದು ಯಾವುದೂ ಇಲ್ಲ’

ಕಲಬುರ್ಗಿ: ನಗರದ ಡಾ.ಅಂಬೇಡ್ಕರ್‌ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಕರ್ನಾಟಕ ಪೀಪಲ್ಸ್ ಎಜುಕೇಶನ್‌ ಸೊಸೈಟಿ– ಕಲಬುರ್ಗಿ ಹಮ್ಮಿಕೊಂಡ 72ನೇ ಗಣರಾಜ್ಯೋತ್ಸವದದಲ್ಲಿ ವಿಶೇಷ ಉಪನ್ಯಾಸ ನಡೆಯಿತು.

ಕಾಲೇಜಿನ ಪ್ರಾಚಾರ್ಯ ಡಾ.ಐ.ಎಸ್. ವಿದ್ಯಾಸಾಗರ ಮಾತನಾಡಿ, ಭಾರತದ ಸಂವಿಧಾನ ರಚನೆಯಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮೂರು ವರ್ಷ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಸಂವಿಧಾನ ರಚನೆ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಪಡೆಯುವುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಸಂವಿಧಾನ ರಚಿಸುವುದಾಗತ್ತು. ಸಂವಿಧಾನ ದೇಶದ ಶ್ರೇಷ್ಠ ಕಾನೂನು, ಅದನ್ನು ಮೀರುವ ಅಧಿಕಾರ ಯಾರಿಗೂ ಇಲ್ಲ’ ಎಂದರು.

ಧ್ವಜಾರೋಹಣ ನೇರವೇರಿಸಿದ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯಾದರ್ಶಿ ಮಾರುತಿರಾವ ಡಿ. ಮಾಲೆ ಮಾತನಾಡಿ, ಭಾರತ ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಅಂಬೇಡ್ಕರ್‌ ಅವರನ್ನು ಅರ್ಥಮಾಡಿಕೊಳ್ಳಬೇಕು. ಭಾರತದ ಸಂವಿಧಾನವು ಬೌದ್ಧ  ಧರ್ಮದ ತಳಹದಿಯಲ್ಲಿ ರಚನೆಗೊಂಡಿದೆ ಎಂದರು.

ಕೆಪಿಇ ಸಂಸ್ಥೆಯ ಸದಸ್ಯ ಶಾಂತಪ್ಪ ಸೂರನ,  ನಿವೃತ್ತ ಪ್ರಾಚಾರ್ಯಾ ಚಂದ್ರಶೇಖರ ಶೀಲವಂತ, ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯಾ ಚಂದ್ರಶೇಖರ ಹಾಗೂ ಕೆಪಿಇ ಸಂಸ್ಥೆಯ ವಿವಿಧ ಶಾಲಾ ಕಾಲೇಜಿನ ಮುಖ್ಯಸ್ಥರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಇತಿಹಾಸ ಪ್ರಾಧ್ಯಾಪಕ ಗಾಂಧೀಜಿ ಮೋಳಕೆರೆ ನಿರೂಪಿಸಿದರು. ನಾಗಭೂಷಣ, ಸುರೇಖಾ ಇಂಗನ್ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು