ಬುಧವಾರ, ಏಪ್ರಿಲ್ 1, 2020
19 °C
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಮೀಸಲಾತಿ ತೀರ್ಪು ಪ್ರಶ್ನಿಸಿ ಮೇಲ್ಮನವಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮೀಸಲಾತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂವಿಧಾನಬದ್ಧ ಹಕ್ಕಾಗಿದೆ. ಆದರೆ, ಸುಪ್ರೀಂಕೋರ್ಟ್‌ ಇತ್ತೀಚೆಗೆ ಇದಕ್ಕೆ ವ್ಯತಿರಿಕ್ತವಾಗಿ ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಬಳಿಕ ಮಾತನಾಡಿದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ, ‘1932ರಲ್ಲಿ ಆದ ಪೂನಾ ಒಪ್ಪಂದದ ಪರಿಣಾಮವೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ರಾಜಕೀಯ, ಶೈಕ್ಷಣಿಕ ಮತ್ತು ಸರ್ಕಾರಿ ಹುದ್ದೆಗಳಲ್ಲಿ ನೇಮಕಾತಿ ಮತ್ತು ಬಡ್ತಿ ಮೀಸಲಾತಿ ಜಾರಿಯಾಗಿದೆ. ಮೀಸಲಾತಿಯು ಇಲ್ಲಿ ನಿಜವಾದ ಅರ್ಥದಲ್ಲಿ ಪ್ರಾತಿನಿಧ್ಯ. ಮೀಸಲಾತಿಯು ಯಾರೂ ಕೊಟ್ಟಂತಹ ಭಿಕ್ಷೆಯಲ್ಲ, ಇದು ಪರಿಶಿಷ್ಟ ಜಾತಿ, ಪಂಗಡಗಳ ಸಂವಿಧಾನಬದ್ಧ ಹಕ್ಕಾಗಿದೆ’ ಎಂದರು.

ಉತ್ತರಾಖಂಡ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಮೀಸಲಾತಿ ಪ್ರಾತಿನಿಧ್ಯ ಕೊರತೆ ಇದ್ದಾಗ ಮುಂದೆ ನೇಮಕ ಮಾಡಿಕೊಳ್ಳಲಾಗುವ ಎಲ್ಲ ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಪರಿಶಿಷ್ಟರನ್ನೇ ಆಯ್ಕೆ ಮಾಡಬೇಕೆಂದು ಉತ್ತರಾಖಂಡ ರಾಜ್ಯ ಹೈಕೋರ್ಟ್‌ ಆದೇಶ ನೀಡಿತ್ತು. ದೇಶದ ಪರಿಶಿಷ್ಟರಿಗೆ ಮತ್ತು ಒಬಿಸಿಗಳಿಗೆ ಪ್ರಾತಿನಿಧಿಕ ಆಧಾರದ ಮೇಲೆ ಮತ್ತು ಮೀಸಲಾತಿ ಅನುಸಾರವಾಗಿ ನೇಮಕಾತಿ ಮತ್ತು ಬಡ್ತಿ ನೀಡುವಲ್ಲಿ ಆಯಾ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಟೀಕಿಸಿದರು.

ನ್ಯಾಯಾಂಗದ ನೇಮಕಾತಿಗಳಲ್ಲಿಯೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಯಾದಗಿರಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಕಲಬುರ್ಗಿ ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಮುಖಂಡರಾದ ಮಲ್ಲಿಕಾರ್ಜುನ ಖನ್ನಾ, ಶಿವಕುಮಾರ ಕೊರಳ್ಳಿ, ಕಪಿಲ್‌ ಸಿಂಗ್‌, ಸಂತೋಷ ಗದ್ದಿ, ಮಹೇಶ ಕೋಕಿಲೆ, ಮಾರುತಿ ಕಟ್ಟಿಮನಿ, ಜೈಕಾಂತ ವಾಘಮೋರೆ, ರಾಜಶೇಖರ ಹೊಸಮನಿ ‍ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು