ಬುಧವಾರ, ಜೂನ್ 16, 2021
21 °C
ನಗರ ಪ್ರದೇಶದ ಉದ್ದಿಮೆಗಳಿಗೆ ಇಲ್ಲದ ನಿರ್ಬಂಧ ನರೇಗಾಕ್ಕೆ ಏಕೆ?

ನರೇಗಾ ಕಾಮಗಾರಿ ಸ್ಥಗಿತಕ್ಕೆ ಆರ್‌ಕೆಎಸ್‌ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಬುಧವಾರದಿಂದ ಜಾರಿಗೆ ಬರುವಂತೆ ಕೊರೊನಾ ಕಾರಣ ನೀಡಿ ರಾಜ್ಯ ಸರ್ಕಾರ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಥಗಿತಗೊಳಿಸಿರುವುದು ದುಡಿದು ತಿನ್ನುವ ಬಡವರ ಒಪ್ಪತ್ತಿನ ಗಂಜಿಯನ್ನೂ ಕಿತ್ತುಕೊಂಡಂತೆ ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್‌) ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎಸ್‌. ಸುನೀತ್‌ಕುಮಾರ್, ಕಾರ್ಯದರ್ಶಿ ಎಚ್‌.ವಿ.ದಿವಾಕರ, ‘ಲಾಕ್‌ ಡೌನ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳನ್ನೊಳಗೊಂಡು ಬೆಂಗಳೂರು, ಮುಂಬೈ, ಹೈದರಾಬಾದ್, ಪುಣೆ ಹೀಗೆ ಮಹಾ ನಗರಗಳಿಗೆ ವಲಸೆ ಹೋಗಿರುವ ಸಾವಿರಾರು ಕಾರ್ಮಿಕರು ಮತ್ತೆ ತಮ್ಮ ತಮ್ಮ ಹಳ್ಳಿಗಳಿಗೆ ಹಿಂತಿರುಗುತ್ತಿದ್ದಾರೆ. ಇನ್ನು ಮುಂದಿನ ಜೀವನ ಹೇಗೆ? ಒಪ್ಪತ್ತಿನ ಊಟಕ್ಕೆ ಏನು ಮಾಡಬೇಕು? ಎಂದು ಈ ಕಾರ್ಮಿಕರು ಆತಂಕದಲ್ಲಿದ್ದಾರೆ. ಮುಂದಿನ ದಿನಗಳ ಕುರಿತು ಭಯದಲ್ಲಿರುವ ಇವರಿಗೆ ರಾಜ್ಯ ಸರ್ಕಾರವು ಮತ್ತೊಂದು ಆಘಾತವನ್ನು ನೀಡಿದೆ’ ಎಂದು ಟೀಕಿಸಿದ್ದಾರೆ.

‘ಕೊರೊನಾ ಸೋಂಕು ರೋಗ ಮತ್ತು ಅದರ ಪರಿಣಾಮವಾಗಿ ನಿತ್ಯವೂ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಅದನ್ನು ಲೆಕ್ಕಿಸದೇ, ಬೃಹತ್ ಕೈಗಾರಿಕೆಗಳು ಮತ್ತು ವಿವಿಧ ಉದ್ದಿಮೆಗಳಲ್ಲಿ ಸಹಸ್ರಾರು ಜನರು ಉಸಿರು ಗಟ್ಟುವಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿ ಕೊಟ್ಟಿರುವ ರಾಜ್ಯ ಸರ್ಕಾರವು ಬಯಲಿನಲ್ಲಿ ಬೀಸುಗಾಳಿಯಲ್ಲಿ ಬಿಡಿ ಬಿಡಿಯಾಗಿ ಮಾಡುವಂತಹ ಉದ್ಯೋಗ ಖಾತ್ರಿ ಯೋಜನೆ ಕೆಲಸಗಳನ್ನು ನಿಲ್ಲಿಸಿ, ರಾಜ್ಯದೆಲ್ಲೆಡೆ ಸಹಸ್ರಾರು ಬಡವರು ಸೇರಿದಂತೆ ರಾಜ್ಯದ ಲಕ್ಷಾಂತರ ಬಡ ಕೂಲಿಕಾರರ ಕೆಲಸಗಳನ್ನು ಕಿತ್ತುಕೊಂಡಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯು ಮೌಖಿಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.