ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ರಸ್ತೆಗಳ ಮಾಹಿತಿ ಕೊರತೆ; ತಪ್ಪದ ಪರದಾಟ

ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳದ ಪಾಲಿಕೆ: ಸಾರ್ವಜನಿಕರ ಅಸಮಾಧಾನ
Last Updated 23 ಜನವರಿ 2023, 4:45 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನವಾದ ಕಲಬುರಗಿ ನಗರ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ರಾಜ್ಯದ ಅತಿ ದೊಡ್ಡ ಜಿಲ್ಲೆಗಳ ಪೈಕಿ ಒಂದಾದ ಕಲಬುರಗಿ ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ. ಇಲ್ಲಿ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳಿವೆ. ಆದರೆ ಇಲ್ಲಿ ಬರುವ ಪ್ರವಾಸಿಗರಿಗೆ, ಹೊಸಬರಿಗೆ ಯಾವ ಸ್ಥಳ, ಸ್ಮಾರಕ ಎಲ್ಲಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಸಾಕುಸಾಕಾಗುತ್ತದೆ. ಕಾರಣ; ಇಲ್ಲಿ ಮಾಹಿತಿ ಅಥವಾ ಮಾರ್ಗದರ್ಶನ ಫಲಕ ಸುಲಭವಾಗಿ ಕಾಣಿಸುವುದೇ ಇಲ್ಲ!

ಹೌದು, ಕಲಬುರಗಿ ನಗರದಲ್ಲಿ ಬಹುತೇಕ ಮುಖ್ಯರಸ್ತೆ, ಅಡ್ಡ ರಸ್ತೆಗಳಿಗೆ ನಾಮಫಲಕಗಳೇ ಇಲ್ಲ. ಸುಮಾರು 64 ಚ.ಕಿ.ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ನಗರ 1090 ಕಿ.ಮೀ.ನಷ್ಟು ರಸ್ತೆ ಹೊಂದಿದೆ. ಈ ಮೊದಲು ಗುಲಬರ್ಗಾ ಆಗಿದ್ದ ನಗರದ ಹೆಸರು 2014ರ ನವೆಂಬರ್ 1ರ ನಂತರ ಕಲಬುರಗಿ ಆಗಿ ಬದಲಾಯಿತು. 1965ರಲ್ಲೇ ಅಸ್ತಿತ್ವಕ್ಕೆ ಬಂದಿದ್ದ ಕಲಬುರಗಿ ನಗರಸಭೆ 1982 ಅಕ್ಟೋಬರ್‌ 2ರಂದು ಮಹಾನಗರ ಪಾಲಿಕೆ ಮೇಲ್ದೆರ್ಜೆಗೇರಿತು.

‌ಮಹಾನಗರ ಪಾಲಿಕೆಯಾದರೂ ಕಲಬುರಗಿಯ ಸ್ಥಿತಿಗತಿಯಲ್ಲಿ ಹೆಚ್ಚೇನೂ ಬದಲಾವಣೆಗಳು ಆಗಿಲ್ಲ. ನಗರದ ಹಲವು ಮುಖ್ಯರಸ್ತೆ, ಅಡ್ಡರಸ್ತೆಗಳಿಗೆ ನಾಮಫಲಕಗಳೇ ಇಲ್ಲ. ನಗರಕ್ಕೆ ಬರುವ ಹೊಸಬರಿಗೆ ಮುಖ್ಯರಸ್ತೆ, ಅಡ್ಡರಸ್ತೆ ಯಾವುದು? ಗೊತ್ತೇ ಆಗುವುದಿಲ್ಲ. ಇನ್ನು ಅಲ್ಲಲ್ಲಿ ಇರುವ ಕೆಲ ಫಲಕಗಳ ಮೇಲೆ ಕೆಲವರು ತಮ್ಮ ಸಂಸ್ಥೆ, ಕಾರ್ಯಕ್ರಮದ ಪ್ರಚಾರಕ್ಕೆ ಕರಪತ್ರಗಳನ್ನು ಅಂಟಿಸಿ ನಗರದ ಅಂದ ಹಾಳುಗೆಡವಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಫಲಕಗಳಿದ್ದರೂ ಅವು ಸ್ಪಷ್ಟವಾಗಿ ಕಾಣುವುದಿಲ್ಲ.

‘ಬುದ್ಧ ವಿಹಾರ’ ಎಂಬ ನಾಮಫಲಕ ರೈಲು ನಿಲ್ದಾಣದ ಆವರಣ ಎದುರು ಇದೆ. ಅಸಲಿಗೆ ಬುದ್ಧ ವಿಹಾರ ಇರುವುದು ಅಲ್ಲಿಂದ 7 ಕಿ.ಮೀ. ದೂರ. ಬುದ್ಧ ವಿಹಾರದ ಬಳಿ ತೆರಳಿದರೆ, ಅಲ್ಲಿ ಅದರ ನಾಮಫಲಕವೇ ಕಾಣಿಸುವುದಿಲ್ಲ. ಇನ್ನು ಅನ್ನಪೂರ್ಣ ವೃತ್ತ ಎಂದು ಹಲವರು ಲೀಲಾಜಾಲವಾಗಿ ಹೇಳುತ್ತಾರೆ. ಆದರೆ, ಅಲ್ಲಿ ಅದರ ನಾಮಫಲಕವೇ ಇಲ್ಲ. ಆದರೆ, ಅಲ್ಲಿ ಅನ್ನಪೂರ್ಣ ವೃತ್ತ ಎಂಬ ಹೆಸರು ಯಾಕೆ ಬಂತು? ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ವೃತ್ತಕ್ಕೆ ತಿಮ್ಮಾಪುರಿ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಇನ್ನೂ ಸ್ಪಷ್ಟವಾದ ಉತ್ತರ ಸಿಕಿಲ್ಲ.

ಇನ್ನು ವೆಂಕಟೇಶ ನಗರ, ಓಂನಗರ, ಜಯನಗರ, ಗೋದುತಾಯಿ ನಗರ, ಮಹಾವೀರ ನಗರ, ಆನಂದ ನಗರ ಮುಂತಾದ ಕಡೆ ಅಷ್ಟೇ ಅಲ್ಲ, ನಗರದ ಯಾವುದೇ ಭಾಗದಲ್ಲಿ ಓಡಾಡಿದರೂ ನಾವು ಯಾವ ಭಾಗದಲ್ಲಿ ಇದ್ದೇವೆ? ಯಾವ ಬಡಾವಣೆಯಲ್ಲಿ ಇದ್ದೇವೆ ಎಂಬುದು ಗೊತ್ತಾಗುವುದಿಲ್ಲ. ಬೇರೆ ಊರಿನಿಂದ ಬರುವವರಿಗೆ ನಮ್ಮ ಮನೆಯ ವಿಳಾಸ ಹೇಳಲು ಕಷ್ಟವಾಗುತ್ತದೆ? ಯಾವ ಮುಖ್ಯರಸ್ತೆ, ಅಡ್ಡರಸ್ತೆ ಎಂದು ಕೇಳಿದರೆ, ಹೇಳಲು ಆಗುವುದಿಲ್ಲ’ ಎಂದು ಸ್ಥಳೀಯರಾದ ಗಿರಿಜಮ್ಮ ತಿಳಿಸಿದರು.

‘ನಗರಕ್ಕೆ ಬರುವ ಹೊಸಬರು ಅಥವಾ ನಮ್ಮ ಸಂಬಂಧಿಕರು ಬಸ್‌ ಅಥವಾ ರೈಲು ಮೂಲಕ ನಮ್ಮ ಬಡಾವಣೆಯವರೆಗೆ ಬರುತ್ತಾರೆ. ಆದರೆ,ಅಅಲ್ಲಿಂದ ನಮ್ಮ ಮನೆಗೆ ಬರಲು ಅವರಿಗೆ ಕಷ್ಟವಾಗುತ್ತದೆ. ನಮ್ಮ ಮನೆ ಹುಡುಕುವುದು ಅವರಿಗೆ ಕಷ್ಟವಾಗುತ್ತದೆ. ನಾವೇ ಅವರ ಬಳಿ ತೆರಳಿ, ಮನೆಗೆ ಕರೆ ತರಬೇಕಾಗುತ್ತದೆ. ಇಲ್ಲದಿದ್ದರೆ, ಅವರು ದಾರಿ ತಪ್ಪುತ್ತಾರೆ.

ರಾಯಚೂರಿನಿಂದ ಬಂದ ಕಾರ್ಮಿಕ ಲಕ್ಷ್ಮಣ ಅವರು ನಾಮಫಲಕ ಇರದ ಕಾರಣ ತಾವು ತಲುಪಬೇಕಾದ ಸ್ಥಳ ಪದೇ ಪದೇ ಕೇಳಿಕೊಂಡು ಹೋಗಬೇಕಾಯಿತು ಎಂದರು. ಇನ್ನು ಇಲ್ಲಿ ಉರ್ದು, ಹಿಂದಿ ಕೂಡ ಹೆಚ್ಚಾಗಿ ಮಾತನಾಡುವುದರಿಂದ, ಕೆಲವರು ವಿಳಾಸ ಕೇಳಿದರೂ ಭಾಷಾ ಗೊಂದಲದಿಂದಾಗಿ ಸಮಸ್ಯೆ ಅನುಭವಿಸುವವರೇ ಹೆಚ್ಚು.

‘ನಗರದಲ್ಲಿ ರಸ್ತೆ, ಅಡ್ಡರಸ್ತೆ, ಸರ್ಕಲ್‌ಗಳಿಗೆ ಸೂಕ್ತ ನಾಮಫಲಕಗಳಿಲ್ಲ ಯಾಕೆ? ಎಂಬ ಪ್ರಶ್ನೆಯನ್ನು ಮಹಾನಗರ ಪಾಲಿಕೆಗೆ ತೆಗೆದುಕೊಂಡು ಹೋದರೆ ಹಣವಿಲ್ಲ, ಅನುದಾನವಿಲ್ಲ ಎಂಬ ಉತ್ತರ ಬರುತ್ತದೆ. ನಾಮಕರಣಕ್ಕೆ ಮುಖ್ಯರಸ್ತೆ, ಅಡ್ಡರಸ್ತೆಗಳನ್ನು ಗುರುತು ಮಾಡಿ ಇಟ್ಟಿದ್ದೇವೆ. ಅನುದಾನದ ಸಮಸ್ಯೆಯಿಂದ ಜಾರಿಯಾಗಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿ ಆರ್‌.ಪಿ.ಜಾಧವ್‌.

‘ಈಗಿರುವ ಫಲಕಗಳ ಬೋರ್ಡ್‌ಗಳ ಮೇಲೆ ಕರಪತ್ರ ಅಂಟಿಸುವವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಈಗಾಗಲೇ ಕೆಲ ಪ್ರಕರಣಗಳಲ್ಲಿ ದಂಡ ಹಾಕಿದ್ದೇವೆ. ನಾಮಫಲಕಗಳ ಮೇಲೆ ಪೋಸ್ಟರ್‌, ‌ಕರ‍ಪತ್ರ ಹಚ್ಚಬಾರದು ಎಂಬ ಜಾಗ್ರತೆ ಜನರಲ್ಲೂ ಇರಬೇಕು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT