ಶನಿವಾರ, ಜನವರಿ 25, 2020
22 °C
ನರೋಣಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ; ಬಂಧಿತರಿಂದ ತಲ್ವಾರ್, ಚಾಕು, ಖಾರದ ಪುಡಿ ವಶ

ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಆಳಂದ ತಾಲ್ಲೂಕಿನ ನರೋಣಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ಭಾರಿ ಪ್ರಮಾಣದ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ಗುರುವಾರ ಬೆಳಗಿನ ಜಾವ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಒಂದು ಬಟನ್‌ ಚಾಕು, ತಲ್ವಾರ್‌, ಖಾರದ ಪುಡಿ, ನೈಲಾನ್‌ ಹಗ್ಗ, ನಾಲ್ಕು ಬೈಕ್‌ಗಳು ಹಾಗೂ ಒಂದು ಮಿನಿ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಚಿಂಚನಸೂರ ಗ್ರಾಮದವರಾದ ಜೀವನ್ ಲಕ್ಷ್ಮಣ ಭಾವಿ (19), ಮಾಪಣ್ಣಾ ಬಂಡೆಪ್ಪ ಮಾವಿನಕರ (19), ದೇವಿಂದ್ರ ಲಕ್ಷ್ಮಣ ಮಾವಿನಕರ (19), ಸನತ್‌ ರೇವಣಸಿದ್ದಪ್ಪಾ ಭಾವಿ (20) ಎಂಬುವವರೇ ಬಂಧಿತರು. ಪೊಲೀಸರ ದಾಳಿಗೆ ಬೆದರಿ ಸೋನಾಜಿ ಪ್ರಕಾಶ ಸಜ್ಜನ, ಮಡಕಿ ಗ್ರಾಮದ ರೋಹನ ಪ್ರಕಾಶ ಕಾಂಬಳೆ ಶಿವು ಚಂದಪ್ಪಾ ವಾಗ್ದರ್ಗಿ ಎಂಬುವವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಬಂಧಿತರು ಬೆಳಿಗ್ಗೆ 4ಕ್ಕೆ ಚಿಂಚನಸೂರ–ಕಲ್ಲಹಂಗರಗಾ ರಸ್ತೆಯ ಮಹಾಪೂರತಾಯಿ ದೇವಸ್ಥಾನಕ್ಕೆ ಹೋಗುವ ಕಮಾನ್‌ ಹತ್ತಿರ ಹೊಂಚು ಹಾಕಿ ನಿಂತಿದ್ದಾಗ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಪೊಲೀಸರು ದರೋಡೆಕೋರರನ್ನು ಬಂಧಿಸಿದರು.

ಅವರಿಂದ ಒಂದು ಕಪ್ಪು ಬಣ್ಣದ ಹೋಂಡಾ ಶೈನ್‌, ನೀಲಿ ಬಣ್ಣದ ಹೋಂಡಾ ಸಿ.ಡಿ. ಡ್ರೀಮ್, ಬಜಾಜ್‌ ಪಲ್ಸರ್‌, ಕೆಂಪು ಬಣ್ಣದ ಹೋಂಡಾ ಶೈನ್‌ ಬೈಕ್‌ ಹಾಗೂ ಟಾಟಾ ಏಸ್‌ ಮಿನಿ ಗೂಡ್ಸ್‌ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾದವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು