ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಕಲುಷಿತ ನೀರಿನ ಸಮಸ್ಯೆ ಪತ್ತೆಗೆ ‘ರೋಬೊ’

Published 28 ಸೆಪ್ಟೆಂಬರ್ 2023, 6:11 IST
Last Updated 28 ಸೆಪ್ಟೆಂಬರ್ 2023, 6:11 IST
ಅಕ್ಷರ ಗಾತ್ರ

ಕಲಬುರಗಿ: ನೀರು ಪೂರೈಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯದಲ್ಲೆ ಮೊದಲ ಬಾರಿಗೆ ಕಲಬುರಗಿಯಲ್ಲಿ ಜರ್ಮನ ತಂತ್ರಜ್ಞಾನ ಆಧಾರಿತ ‘ರೋಬೊ’ ಬಳಸಲಾಗುತ್ತಿದೆ. ಈ ವ್ಯವಸ್ಥೆಯ ಹೆಸರು ಸ್ಮಾಲ್ ಪುಶ್ ಟೀಥರ್ ಟೆಕ್ನಾಲಜಿ.

ನೀರು ಪೂರೈಕೆಯಲ್ಲಿ ಎದುರಾಗುವ ಪೈಪ್‌ಲೈನ್ ಬ್ಲಾಕೇಜ್‌, ಕಡಿಮೆ ಒತ್ತಡದ ನೀರು ಸರಬರಾಜು ಹಾಗೂ ಪೂರೈಕೆ ವೇಳೆ ನೀರು ಕಲುಷಿತಗೊಳ್ಳಲು ಕಾರಣವಾಗುವ ಅಂಶಗಳ ಪತ್ತೆಗೆ ಈ ರೋಬೊದಲ್ಲಿ ಅಳವಡಿಸಿರುವ ಕ್ಯಾಮೆರಾ ನೆರವಾಗುತ್ತಿದೆ.

ನಗರದ ಕುಡಿಯುವ ನೀರು ಸರಬರಾಜು ವ್ಯವಸ್ಥೆಯ ಹೊಣೆ ಹೊತ್ತಿರುವ ಎಲ್‌ ಅಂಡ್‌ ಟಿ ಕಂಪನಿಯು ಈ ತಂತ್ರಜ್ಞಾನ ಬಳಸುತ್ತಿದೆ ಎಂದು ಕಲಬುರಗಿ ಕೆಯುಡಬ್ಲ್ಯುಎಸ್‌ಎಂಪಿ-ಕೆಯುಐಡಿಎಫ್‍ಸಿ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ನಗರದ ನೀರು ಪೂರೈಕೆಯ ಪೈಪ್‍ಲೈನ್‍ನಲ್ಲಿ ಕಡಿಮೆ ಒತ್ತಡ, ಬ್ಲಾಕೇಜ್‌ ಹಾಗೂ ಕಲುಷಿತಗೊಳ್ಳುವ ಸ್ಥಳಗಳನ್ನು ಕಂಡುಹಿಡಿಯಲು ಸ್ಮಾಲ್ ಪುಶ್ ಕ್ಯಾಮೆರಾವನ್ನು ಪೈಪ್‍ ಒಳಗೆ ತೂರಿಸಲಾಗುತ್ತದೆ. ಸುಮಾರು 100 ಮೀಟರ್‌ವರೆಗೆ ಈ ಕ್ಯಾಮೆರಾ ನುಗ್ಗಿಸಬಹುದು. ಇದು ಪೈಪ್‍ಲೈನ್‍ನಲ್ಲಿರುವ ಬ್ಲಾಕೇಜ್‌, ಕಡಿಮೆ ಒತ್ತಡ ಹಾಗೂ ಏಕೆ ಕಲುಷಿತವಾಗುತ್ತಿದೆ ಎಂಬುದೆಲ್ಲ ಆಂತರಿಕ ಸಂಪರ್ಕ ಹೊಂದಿರುವ ತಂತ್ರಜ್ಞಾನದ ನೆರವಿನಿಂದ ಲ್ಯಾಪ್‌ಟಾಪ್ ಸ್ಕ್ರೀನ್ ಮೇಲೆ ಚಿತ್ರಣ ಮೂಡುತ್ತದೆ. ಆಗ ನಿರ್ದಿಷ್ಟ ಸ್ಥಳದಲ್ಲಿ ಅಗೆದು ಪೈಪ್‌ಲೈನ್ ಕತ್ತರಿಸಿ ಮತ್ತೆ ದುರಸ್ತಿ ಮಾಡಿ ಸಮಸ್ಯೆ ಸರಿಪಡಿಸಲಾಗುತ್ತಿದೆ.

ಕಲಬುರಗಿ ನಗರದಲ್ಲಿ ನೀರು ಸರಬರಾಜು ಮಾಡುವ ಪೈಪ್‌ಲೈನ್ ಜಾಲ 15ರಿಂದ 20 ವರ್ಷಗಳಷ್ಟು ಹಳೆಯದಾಗಿದೆ. ಹೀಗಾಗಿ ಇತ್ತೀಚೆಗೆ ನೀರು ಕಲುಷಿತಗೊಳ್ಳುವ ಹಾಗೂ ಕಡಿಮೆ ಒತ್ತಡದ ದೂರುಗಳು ಹೆಚ್ಚಾಗಿ ದಾಖಲಾಗುತ್ತಿವೆ. ಈ ತಂತ್ರಜ್ಞಾನ ಬಳಕೆಯಿಂದ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎನ್ನುತ್ತಾರೆ ಅಧಿಕಾರಿಗಳು.

‘ಕಳೆದ 17 ದಿನಗಳಲ್ಲಿ ನಗರದಲ್ಲಿ ಪ್ರಾಯೋಗಿಕವಾಗಿ ವಾರ್ಡ್‌ ಸಂಖ್ಯೆ 52, 53 ಮತ್ತು 54ರಲ್ಲಿ ಕೆಲವು ಸ್ಥಳಗಳಾದ ತಾರಫೈಲ್‍ನ 2,3,5,6 ಹಾಗೂ 13ನೇ ಕ್ರಾಸ್‍ನಲ್ಲಿ, ಬುದ್ಧನಗರ, ರೆಹಮತ್ ನಗರ, ಪಂಚಶೀಲ ನಗರ, ಜೆಮ್‍ಶೆಟ್ಟಿ ನಗರ ಹಾಗೂ ಜಿಡಿಎ ಇನ್ನಿತರ ಪ್ರದೇಶಗಳಲ್ಲಿ ಕಳೆದ ಹಲವು ವರ್ಷಗಳಿಂದ ಇದ್ದ ಬ್ಲಾಕೇಜ್ ಕಲುಷಿತ ನೀರಿನ ಸಮಸ್ಯೆಗಳನ್ನು ಈ ಹೊಸ ತಂತ್ರಜ್ಞಾನವನ್ನು ಬಳಿಸಿ ಪತ್ತೆ ಹಚ್ಚಿ ಪರಿಹರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಈ ರೋಬೊ ಉಪಯೋಗದಿಂದ ಕಾರ್ಮಿಕರ ಸಮಯ– ಶ್ರಮದ ಪೋಲು ತಪ್ಪಿಸಬಹುದು. ಸಿಕ್ಕ-ಸಿಕ್ಕಲ್ಲಿ ರಸ್ತೆ ಅಗೆಯುವುದಕ್ಕೆ ಬ್ರೇಕ್ ಬೀಳಲಿದೆ. ಜೊತೆಗೆ ದುರಸ್ತಿಗೆ ಹಿಡಿಯುವ ಖರ್ಚು ಕೂಡ ತಗ್ಗಲಿದೆ’ ಎನ್ನುತ್ತಾರೆ ಕಲಬುರಗಿ ಮಹಾನಗರ ಪಾಲಿಕೆ ಎಂಜಿನಿಯರ್‌ ಶಿವಕುಮಾರ ಪಾಟೀಲ.

‘ಈ ಸ್ಮಾಲ್ ಪುಶ್ ಟೀಥರ್ ಟೆಕ್ನಾಲಜಿಯು ಜರ್ಮನ ತಂತ್ರಜ್ಞಾನವಾಗಿದೆ. ಇದೊಂದು ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು, ಕಂಪನಿಯು ಒಪ್ಪಂದ ಮಾಡಿಕೊಂಡು ಇದರ ಸೇವೆ ಪಡೆಯುತ್ತಿದೆ’ ಎಂದು ಎಲ್‌ ಅಂಡ್‌ ಟಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲಸಂಗ್ರಹಾಗಾರಗಳ ಶುಚಿಗೆ ‘ಮೆಚ್ಚುಗೆ ಪತ್ರ’

ಕಲಬುರಗಿ ನಗರದ ಎಲ್ಲಾ ಮೇಲ್ಮಟ್ಟ ಹಾಗೂ ಕೆಳಮಟ್ಟದ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಿರುವುದನ್ನು ಪರಿಶೀಲಿಸಿ (ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಕೆಯುಐಡಿಎಫ್‍ಸಿ ವತಿಯಿಂದ) ಕೆಯುಐಡಿಎಫ್‌ಸಿ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಕಾಂತರಾಜ್ ಕೆ. ಅವರು 2023ರ ಸೆ.22ರಂದು ನಗರ ನೀರು ಸರಬರಾಜು ಹೊಣೆ ಹೊತ್ತಿರುವ ಎಲ್ ಅಂಡ್ ಟಿ ಕಂಪನಿಗೆ ‘ಮೆಚ್ಚುಗೆ ಪತ್ರ’ವನ್ನು ನೀಡಿದ್ದಾರೆ. ನಗರದ ಸಾರ್ವಜನಿಕರ ಆರೋಗ್ಯ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಯ ಉದ್ದೇಶದಿಂದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಆಗಸ್ಟ್‌ 25ರಂದು ಸಭೆ ನಡೆಸಿ ನಗರದ ಎಲ್ಲಾ ಮೇಲ್ಮಟ್ಟ ಮತ್ತು ಕೆಳಮಟ್ಟ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಲು ಸೂಚಿಸಿದ್ದರು. ಮೊದಲನೇ ಬಾರಿಗೆ ಕಲಬುರಗಿ ನಗರದಲ್ಲಿ 2022ರ ಸೆಪ್ಟೆಂಬರ್‌ದಿಂದ ನವೆಂಬರ್‌ ತನಕ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಲಾಗಿದೆ. ಈಗ 2ನೇ ಬಾರಿಗೆ 2023ರ ಸೆ.4ರಿಂದ ಇಲ್ಲಿಯವರೆಗೆ 12 ಜಲಸಂಗ್ರಹಾಗಾರಗಳನ್ನು ಶುಚಿಗೊಳಿಸಲಾಗಿದೆ. ಇನ್ನುಳಿದ ಜಲಸಂಗ್ರಹಾಗಾರಗಳನ್ನು 2023ರ ಅಕ್ಟೋಬರ್‌ ಒಳಗೆ ಸ್ವಚ್ಛಗೊಳಿಸುವಂತೆ ಎಲ್‌ ಅಂಡ್ ಟಿ ಕಂಪನಿಗೆ ಸೂಚಿಸಲಾಗಿದೆ.

ಕಲಬುರಗಿ ನಗರದ ಮೇಲ್ಮಟ್ಟ ಹಾಗೂ ಕೆಳಮಟ್ಟದ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಿರುವುದನ್ನು ಪರಿಶೀಲಿಸಿ (ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಕೆಯುಐಡಿಎಫ್‍ಸಿಯಿಂದ) ಕೆಯುಐಡಿಎಫ್‌ಸಿ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಕಾಂತರಾಜ್ ಕೆ. ಎಲ್ ಅಂಡ್ ಟಿ ಕಂಪನಿ ಅಧಿಕಾರಿಗೆ ‘ಮೆಚ್ಚುಗೆ ಪತ್ರ’  ನೀಡಿದರು
ಕಲಬುರಗಿ ನಗರದ ಮೇಲ್ಮಟ್ಟ ಹಾಗೂ ಕೆಳಮಟ್ಟದ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಿರುವುದನ್ನು ಪರಿಶೀಲಿಸಿ (ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಕೆಯುಐಡಿಎಫ್‍ಸಿಯಿಂದ) ಕೆಯುಐಡಿಎಫ್‌ಸಿ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಕಾಂತರಾಜ್ ಕೆ. ಎಲ್ ಅಂಡ್ ಟಿ ಕಂಪನಿ ಅಧಿಕಾರಿಗೆ ‘ಮೆಚ್ಚುಗೆ ಪತ್ರ’  ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT