ಗುರುವಾರ , ಆಗಸ್ಟ್ 11, 2022
23 °C
ನೀಲಕಂಠ ಕಾಳೇಶ್ವರ ಗುಡಿಗೆ ನುಗ್ಗಿದ ನೀರು

ಕಾಳಗಿ: ಉಕ್ಕಿ ಹರಿದ ರೌದ್ರಾವತಿ ನದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ತಾಲ್ಲೂಕಿನ ಎಲ್ಲೆಡೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಗುರುವಾರ ಇಲ್ಲಿನ ರೌದ್ರಾವತಿ ನದಿ ತುಂಬಿ ಉಕ್ಕಿ ಹರಿಯಿತು. ಅದಲ್ಲದೆ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನದೊಳಗೆ ನುಗ್ಗಿದ ನೀರು ಭಕ್ತರ ದರ್ಶನಕ್ಕೆ ತೊಂದರೆ ಉಂಟುಮಾಡಿತು.

ಒಂದು ಕಡೆ ಹೇರೂರ ಬೆಣ್ಣೆತೊರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ನೀರನ್ನು ಹೊರಬಿಡಲಾಗುತ್ತಿದೆ. ಅದರಂತೆ ಗುರುವಾರ 21 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ. ಮತ್ತೊಂದಡೆ ಚಿಂಚೋಳಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಅಲ್ಲಿನ ನೀರು ಕೂಡ ಈಕಡೆ ಹರಿದುಬರುತ್ತಿದೆ. ಈ ಎರಡು ಕಡೆಯ ನೀರಿನಿಂದ ರೌದ್ರಾವತಿ ನದಿ ತುಂಬಿ ಹರಿದಿದೆ.

ಬೆಣ್ಣೆತೊರಾ ನೀರಿಗೆ ಹೆಬ್ಬಾಳ, ಕಣಸೂರ, ಮಲಘಾಣ, ಡೊಣ್ಣೂರ, ತೆಂಗಳಿ ಹಳ್ಳಗಳು ಸಂಪೂರ್ಣ ತುಂಬಿಕೊಂಡು ಸೇಡಂ ತಾಲ್ಲೂಕಿನ ಕಾಗಿಣಾ ನದಿ ಕಡೆಗೆ ಮುಖಮಾಡಿವೆ. ಇತ್ತ ಹಲಚೇರಾ, ಹೊಸಳ್ಳಿ, ರಾಜಾಪುರ, ಭರತನೂರ ಕಡೆಯಿಂದ ಹರಿದುಬಂದ ಚಿಂಚೋಳಿ ತಾಲ್ಲೂಕಿನ ನೀರು ರೌದ್ರಾವತಿ ನದಿಗೆ ಸೇರಿ ಮಲಘಾಣ ಹಳ್ಳ ಸೇರುತ್ತಿದೆ.

ಇದರಿಂದಾಗಿ ಕಾಳಗಿ- ಭರತನೂರ- ಕೊಡದೂರ- ಮಲಘಾಣ ಸಂಪರ್ಕ ಸೇತುವೆಗಳ ಮೇಲಿಂದ ನೀರು ಹರಿದು ಈ ಊರುಗಳ ಸಂಪರ್ಕ ಕಡಿತಗೊಂಡಿದೆ. ಅಧಿಕ ಅಮಾವಾಸ್ಯೆ ಆಗಿದ್ದರಿಂದ ಈ ದಿನ ಬಹಳಷ್ಟು ಭಕ್ತರು ನೀಲಕಂಠ ಕಾಳೇಶ್ವರ ದರ್ಶನಕ್ಕೆ ಬಂದಿದ್ದರು. ಆದರೆ ನದಿ ಉಕ್ಕಿಹರಿದು ದೇವಸ್ಥಾನದೊಳಗೆ ನುಗ್ಗಿದ ನೀರು ಭಕ್ತರಿಗೆ ತೊಂದರೆ ಉಂಟುಮಾಡಿತು.

ಹಾಗೆಯೇ ಕೋಡ್ಲಿ ವಡೆಯ ಹನುಮಾನ ದೇವಸ್ಥಾನಕ್ಕೆ ತೆರಳುವ ಮಾರ್ಗಮಧ್ಯೆ ನಾಲೆಯೊಂದು ತುಂಬಿ ಹರಿದು ವಾಹನ ಓಡಾಟಕ್ಕೆ ಅಡಚಣೆ ಉಂಟುಮಾಡಿತು. ಆದರೂ ಭಕ್ತರು ನೀರೊಳಗೆ ನುಗ್ಗಿ ದೇವರ ದರ್ಶನ ಮಾಡಿದರು. ಈ ಮಧ್ಯೆಯೂ ಆಗಾಗ ಮಳೆ ಬರುತ್ತಲೆ ಇತ್ತು. ಈ ಮಳೆಗೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದರು.

ಮನೆಗಳಿಗೆ ನೀರು: ಮಲಘಾಣದಲ್ಲಿ 20 ಮನೆ ಮತ್ತು ನಿಪ್ಪಾಣಿ ಗ್ರಾಮದಲ್ಲಿ 37 ಮನೆಗಳಿಗೆ ನೀರು ನುಗ್ಗಿದೆ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು