ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪೌರ ಕಾರ್ಮಿಕರಿಗೆ ಶರ್ಟ್ ವಿತರಣೆಗೆ ಅಸಮಾಧಾನ

ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಸಭೆ
Last Updated 30 ಸೆಪ್ಟೆಂಬರ್ 2022, 16:44 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ, ರವಿಕೆ ಬದಲು ಶರ್ಟ್ ವಿತರಿಸಿದ್ದಕ್ಕೆ ಸಿಡಿಮಿಡಿಗೊಂಡ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಇದರ ಕುರಿತು 15 ದಿನಗಳಲ್ಲಿ ಆಯೋಗಕ್ಕೆ ವರದಿ ನೀಡುವಂತೆ ಕಲಬುರಗಿ ಜಿಲ್ಲಾಡಳಿತಕ್ಕೆ ಸೂಚಿಸಿತು.

ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ಅಧ್ಯಕ್ಷತೆಯಲ್ಲಿ ಶುಕ್ರವಾರ ಮ್ಯಾನುವೆಲ್ ಸ್ಲ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ–2013ರ ಅನುಷ್ಠಾನದ ಕುರಿತು ಜಿಲ್ಲಾಡಳಿತ, ಜಿಲ್ಲಾ ಮಟ್ಟದ ಇತರೆ ಇಲಾಖೆಗಳು ಹಾಗೂ ಪೌರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘ಮಹಿಳಾ ಕಾರ್ಮಿಕರಿಗೆ ಎಲ್ಲೆಡೆ ಸೀರೆ, ರವಿಕೆ ವಿತರಿಸಲಾಗುತ್ತಿದೆ. ಇಲ್ಲೇಕೆ ಹೀಗೆ? ಈ ವ್ಯವಸ್ಥೆ ಸರಿಪಡಿಸದಿದ್ದರೆ, ಆಯೊಗವು ಸ್ವಯಂ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಿದೆ’ ಎಂದು ಅವರು ತಿಳಿಸಿದರು. ‘ಇದರ ಬಗ್ಗೆ ವರದಿ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರಿಗೆ ನಿರ್ದೇಶನ ನೀಡಿದರು.

ಪೌರಕಾರ್ಮಿಕರಿಗೆ ರಾಜ್ಯದಾದ್ಯಂತ ಏಕರೂಪದ ರಕ್ಷಣಾತ್ಮಕ ಪರಿಕರಗಳು ಮತ್ತು ಸಮವಸ್ತ್ರ ಸಂಹಿತೆ ಸಿದ್ಧವಾಗಿದ್ದು, ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಶೀಘ್ರದಲ್ಲಿಯೇ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

‘ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿನ ಸಮುದಾಯದ ಶೌಚಾಲಯದ ಮಲ–ಮೂತ್ರವನ್ನು ನೇರವಾಗಿ ಒಳಚರಂಡಿಗೆ ಬಿಡಲಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. 2017ರಲ್ಲಿ ಅಂದಿನ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸರಿಪಡಿಸುವಂತೆ ಸೂಚಿಸಿದರೂ, ಇದು ಕಾರ್ಯರೂಪಕ್ಕೆ ಬಂದಿಲ್ಲ. 15 ದಿನದಲ್ಲಿ ಇದನ್ನು ಸರಿಪಡಿಸಬೇಕು’ ಎಂದ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಎಚ್ಚರಿಕೆ ನೀಡಿದರು.

‘ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ 10–15 ವರ್ಷಗಳಿಂದ ದುಡಿಯುತ್ತಿರುವ 96 ಮಂದಿ ಗ್ರೂಪ್ ‘ಡಿ’ ಹೊರಗುತ್ತಿಗೆ ಸಿಬ್ಬಂದಿಗೆ ಕೆಲಸದಿಂದ ತೆಗೆಯಲಾಗಿದೆ ಎಂದು ಕೆಲವರು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿ’ ಎಂದು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರನ್ನು ಪ್ರಶ್ನಿಸಿದರು.

‘ಕೋವಿಡ್ ಮುನ್ನ 96 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಕೋವಿಡ್ ವೇಳೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಅವರನ್ನು ಮತ್ತೆ 1 ವರ್ಷಕ್ಕೆ ಕೆಲಸಕ್ಕೆ ತೆಗೆದುಕೊಂಡೆವು. ಕೋವಿಡ್ ಬಳಿಕ ನಂತರ ಸರ್ಕಾರದ ನಿರ್ದೇಶನದಂತೆ ಅವರಿಗೆ ವೇತನ ನೀಡಿ ಕೆಲಸದಿಂದ ತೆಗೆಯಲಾಗಿದೆ. ಪ್ರಸ್ತುತ ಸಂಸ್ಥೆಗೆ ಮಂಜೂರಾಗಿರುವ ಹುದ್ದೆಗೆ ಎದುರಾಗಿ ಹಿಂದೆ ಕೆಲಸ ನಿರ್ವಹಿಸಿದ ಸಿಬ್ಬಂದಿಗಳನ್ನೇ ಹೊರಗುತ್ತಿಗೆ ಮೂಲಕ ತೆಗೆದುಕೊಳ್ಳಲಾಗಿದೆ. 96 ನೌಕರರು ಹೆಚ್ಚುವರಿಯಾಗಿದ್ದು, ಈ ಬಗ್ಗೆ ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಬೇಕಿದ್ದು, ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ನೀರಿನ ಬಾಟಲ್ ಕೊಡಿ: ಬೆಳಿಗ್ಗೆ ಕಸಗುಡಿಸಲು ಬರುವ ಪೌರಕಾರ್ಮಿಕರಿಗೆ ರಸ್ತೆಗಳ ಪ್ರಮುಖ ಪಾಯಿಂಟ್‍ಗಳಲ್ಲಿ ಕುಡಿಯುವ ನೀರಿನ ಬಾಟಲ್ ಪೂರೈಸಬೇಕು ಎಂದು ಪೌರ ಸಂಸ್ಥೆಗಳ ಮುಖ್ಯಸ್ಥರಿಗೆ ಅಧ್ಯಕ್ಷರು ಸೂಚನೆ ನೀಡಿದರು.

ಸಭೆಯಲ್ಲಿ ಅಯೋಗದ ಸದಸ್ಯರಾದ ಗೀತಾ ವಾಡೆಕರ್, ವಿಜಯ ಕುಮಾರ, ಕಾರ್ಯದರ್ಶಿ ಚಂದ್ರಕಲಾ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ, ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಪ್ರಕಾಶ ರಜಪೂತ್, ಜಿ.ಪಂ. ಉಪ ಕಾರ್ಯದರ್ಶಿ ಬಿ.ಎಸ್.ರಾಠೋಡ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಶಿವಶರಣಪ್ಪ ಬೆಣ್ಣೂರ ಇದ್ದರು.

‘ಒಡಿಶಾ ಮಾದರಿ ವಿಶ್ರಾಂತಿ ಗೃಹ ನಿರ್ಮಿಸಿ’

‘ಒಡಿಶಾದ ಭುವನೇಶ್ವರದಲ್ಲಿ ಪೌರಕಾರ್ಮಿಕರಿಗೆ ತಮ್ಮ ಪರಿಕರಗಳನ್ನು ಇಡಲು, ಶೌಚಾಲಯ ಬಳಸಲು ಮತ್ತು ವಿಶ್ರಾಂತಿಗೆ ತುಂಬಾ ಅಚ್ಚುಕಟ್ಟಾದ ವಿಶ್ರಾಂತಿ ಗೃಹ ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ನಿರ್ಮಿಸಲು ವಿನ್ಯಾಸವನ್ನು ಸದ್ಯದಲ್ಲಿ ಅಂತಿಮಗೊಳಿಸಿ ಎಲ್ಲಾ ಜಿಲ್ಲೆಗಳಿಗೂ ಕಳುಹಿಸಲಾಗುವುದು’ ಎಂದು ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ತಿಳಿಸಿದರು.

‘ಇದಕ್ಕಾಗಿ ನಗರೋತ್ಥಾನ ಯೋಜನೆ, 15ನೇ ಹಣಕಾಸು ಅನುದಾನ ಬಳಸಿಕೊಳ್ಳಬೇಕು’ ಎಂದರು.

ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ಜಾಧವ ಮಾತನಾಡಿ, ‘ಪ್ರಸ್ತುತ ಆರಂಭಿಕ ಹಂತವಾಗಿ ಕಲಬುರಗಿ ನಗರದಲ್ಲಿ 4 ರೆಸ್ಟ್ ರೂಮ್ ನಿರ್ಮಾಣಕ್ಕೆ ಎಸ್‌ಎಫ್‌ಸಿ ಅನುದಾನದಡಿ ₹ 1.2 ಕೋಟಿ ಅನುದಾನ ಕಾಯ್ದಿರಿಸಿದೆ’ ಎಂದರು.

‘43 ಸಾವಿರ ಪೌರಕಾರ್ಮಿಕರ ಕಾಯಂಗೆ ಚಾಲನೆ‘

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಶಿಫಾರಸಿನ ಮೇರೆಗೆ ರಾಜ್ಯದಾದ್ಯಂತ ಇರುವ 43 ಸಾವಿರ ಪೌರ ಕಾರ್ಮಿಕರ ಕಾಯಂ ಮಾಡಲು ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಆಯೋಗದ ಅಧ್ಯಕ್ಷ ಎಂ. ಶಿವಣ್ಣ ತಿಳಿಸಿದರು.

‘ಗುತ್ತಿಗೆ ಪದ್ಧತಿಯಡಿ ಗುತ್ತಿಗೆ ಪಡೆದ ಸಂಸ್ಥೆಗಳು ಪೌರಕಾರ್ಮಿಕರಿಗೆ ಸರಿಯಾಗಿ ಕನಿಷ್ಠ ವೇತನ ನೀಡುತ್ತಿಲ್ಲ. ಸಕಾಲಕ್ಕೆ ಬರುತ್ತಿಲ್ಲ. ಪಿಎಫ್, ಇಎಸ್‌ಐ ಕಡಿತ ಮಾಡುತ್ತಿಲ್ಲ ಎಂಬಿತ್ಯಾದಿ ದೂರುಗಳು ಸಾಮಾನ್ಯವಾದ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಸೇವೆಯನ್ನು ಪಡೆಯಲು ಅನುಸರಿಸುತ್ತಿರುವ ಗುತ್ತಿಗೆ ಪದ್ಧತಿ ರದ್ದತಿಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಪೌರಕಾರ್ಮಿಕರ ಜೀವನ ಹಸನಗೊಳಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11,133 ಪೌರ ಕಾರ್ಮಿಕರನ್ನು ಕಾಯಂ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ
ಎಂ. ಶಿವಣ್ಣ

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ

ಪೌರ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳು ಗುರತಿನ ಚೀಟಿ ನೀಡಬೇಕು. ಇದರ ಆಧಾರದ ಮೇಲೆ ನಾವು ನಿಗಮದಿಂದ ಅವರ ಆರ್ಥಿಕ ಚೇತರಿಕೆ ಸಾಲ–ಸೌಲಭ್ಯ ನೀಡಲಾಗುವುದು
ಕೆ.ಪಿ.ವೆಂಕಟೇಶ
ಅಧ್ಯಕ್ಷ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT