ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 85 ಸಮ್ಮೇಳನಾಧ್ಯಕ್ಷರ ಚಿತ್ರ, ಮಾಹಿತಿ

ಸಮ್ಮೇಳನ 100X60 ಅಳತೆಯ ಕಲಾ ಗ್ಯಾಲರಿ, 100 ಮಳಿಗೆಗಳ ನಿರ್ಮಾಣಕ್ಕೆ ಮುಂದಾದ ಚಿತ್ರಕಲಾ ಸಮಿತಿ
Last Updated 29 ಜನವರಿ 2020, 9:07 IST
ಅಕ್ಷರ ಗಾತ್ರ

ಕಲಬುರ್ಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಒಂದೇ ಗ್ಯಾಲರಿಯಲ್ಲಿ ಎಲ್ಲ 85 ಸಮ್ಮೇಳನಗಳ ಸರ್ವಾಧ್ಯಕ್ಷರ ಚಿತ್ರಗಳು ನೋಡಲು ಸಿಗಲಿವೆ!

ಸಮ್ಮೇಳನದ ಚಿತ್ರಕಲಾ ಸಮಿತಿಯು 100X60 ಅಳತೆಯ ಕಲಾ ಗ್ಯಾಲರಿ ನಿರ್ಮಿಸುತ್ತಿದೆ. ಇದರಲ್ಲಿ ಎಲ್ಲ ಸಮ್ಮೇಳನಗಳ ಅಧ್ಯಕ್ಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಅನಾದಿ ಕಾಲದ ಶಿಲಾಶಾಸನಗಳ ಕುರಿತ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಪ್ರತಿಯೊಂದಕ್ಕೂ ಪುಟ್ಟ ಟಿಪ್ಪಣೆ ಇರುವ ಕಿರುಹೊತ್ತಿಗೆಗಳನ್ನೂ ಮಾಡಿದ್ದು, ಉಚಿತವಾಗಿ ನೀಡಲಾಗುವುದು.

₹ 13.75 ಲಕ್ಷ ವೆಚ್ಚದಲ್ಲಿ ಇದೇ ಮೊದಲ ಬಾರಿಗೆ ಬೃಹತ್‌ ಪ್ರಮಾಣದ ಕಲಾ ಶಿಬಿರ ನಡೆಸಲು ತಯಾರಿ ನಡೆದಿದೆ. ಇದರಲ್ಲಿ ಚಿತ್ರಕಲೆ, ಛಾಯಾಚಿತ್ರ ಹಾಗೂ ಶಿಲ್ಪಕಲೆ ಎಂದು ಮೂರು ಭಾಗ ಮಾಡಲಾಗಿದೆ. ಕಲಾ ಗ್ಯಾಲರಿ ಹೊರತಾಗಿ ಒಟ್ಟು 100 ಮಳಿಗೆಗಳನ್ನೂ ಇದಕ್ಕೆ ಮೀಸಲಿಡಲಾಗಿದೆ.

ಪ್ರಬುದ್ಧ ಕಲಾಕೃತಿಗಳು: ರಾಜ್ಯದ ಬೇರೆಬೇರೆ ಭಾಗಗಳಿಂದ ಅಪಾರ ಪ್ರಮಾಣದ ಕಲಾಕೃತಿಗಳು ಹರಿದುಬಂದಿವೆ. ಅವುಗಳಲ್ಲಿ 325 ಕಲಾಕೃತಿಗಳನ್ನು ಪ್ರಬುದ್ಧತೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. 125 ಕಲಾಕೃತಿ ಪ್ರದರ್ಶನ ಮಾಡಲು ಉದ್ದೇಶಿಸಲಾಗಿತ್ತು. ಎಲ್ಲರಿಗೂ ಅವಕಾಶ ನೀಡಲು ಯತ್ನಿಸಲಾಗುವುದು ಎಂದು ಸಮಿತಿ ಮುಂಖಂಡರು ತಿಳಿಸಿದ್ದಾರೆ.

ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಗಿದ್ದು, ಅವುಗಳಲ್ಲಿ 730 ಕಲಾಕೃತಿಗಳು ಸಿದ್ಧವಾಗಿವೆ. ಈ ಪೈಕಿ 23 ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳನ್ನೂ ಪ್ರದರ್ಶನ ಮಾಡಲಾಗುವುದು. ಇದರೊಂದಿಗೆ ಕಲ್ಯಾಣ ಕರ್ನಾಟಕದ ಸಂಕ್ಷಿಪ್ತ ಮಾಹಿತಿಯುಳ್ಳ ಕಿರು ಪುಸ್ತಕವನ್ನೂ ನೀಡಲಾಗುವುದು.

ವಿಶೇಷ ಕಲಾಶಿಬಿರ:ಲಲಿತ ಕಲಾ ಅಕಾಡೆಮಿಯಿಂದ ಗೌರವ ಸಂಭಾವಣೆ ಸಮೇತ, ಕಲಾ ಶಿಬಿರ ನಡೆಯಲಿದೆ. 20 ಹಿರಿಯ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆ ಕುರಿತು ಇವರು ಕುಂಚಕಾವ್ಯಗಳನ್ನು ಸಿದ್ಧಪಡಿಸಲಿದ್ದಾರೆ. ಈ ಎಲ್ಲ ಕಲಾವಿದರಿಗೂ ಅಕಾಡೆಮಿಯಿಂದ ಗೌರವ ಸಂಭಾವಣೆ ನೀಡಲಾಗುತ್ತಿದೆ. ಜತೆಗೆ, ಅವರ ಕಲಾಕೃತಿಗಳನ್ನು ಸಮ್ಮೇಳನದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. 20 ವಿಶಿಷ್ಟ ರೀತಿಯ ಕಲಾಕುಂಚಗಳು ಈ ಭಾಗದ ವೈಶಿಷ್ಟ್ಯವನ್ನು ಹೊರ ಜಗತ್ತಿಗೆ ತೋರಿಸಲಿವೆ.

ಈ ಭಾಗದಲ್ಲಿ ಹುಟ್ಟಿ ಬೆಳದು, ಲೋಕ ಪ್ರಸಿದ್ಧರಾದ ವಿಜ್ಞಾನೇಶ್ವರರಂಥ ನಾಯಕರ ಚಿತ್ರಗಳನ್ನೂ ಸಂಗ್ರಹಿಸಲಾಗಿದೆ. ಐತಿಹಾಸಿಕ ಸ್ಥಳಗಳಾದ ಸ್ಲೀಪಿಂಗ್‌ ಬುದ್ಧ, ಮಳಕೇಡ, ಶರಣಬಸವೇಶ್ವರ ದೇವಸ್ಥಾನ, ದರ್ಗಾ, ಸನ್ನತಿ ಮುಂತಾದ ಸ್ಥಳಗಳನ್ನು ಒಂದೇ ವೇದಿಕೆಯಲ್ಲಿ ತೋರಿಸಲಾಗುತ್ತಿದೆ.

ಶಿಲ್ಪಕಲಾ ಶಿಬಿರದಲ್ಲಿ ಈಗಾಗಲೇ ಕೆತ್ತನೆ ಮಾಡಲಾದ ಆಧುನಿಕ ಸ್ಪರ್ಶ ಹೊಂದಿದ ಶಿಲ್ಪಗಳ ಜತೆಗೆ, ಕೆಲವು ಐತಿಹಾಸಿಕ ಶಿಲ್ಪಕಲಾಕೃತಿಗಳನ್ನೂ ಪ್ರದರ್ಶಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT