ಶನಿವಾರ, ಜನವರಿ 29, 2022
22 °C

ಸಾವಿತ್ರಿಬಾಯಿ ಫುಲೆ ವಿಚಾರ ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್: ‘ವೈಚಾರಿಕ ಚಿಂತನೆ ಮತ್ತು ತ್ಯಾಗ ಮನೋಭಾವನೆಯಿಂದ ಭಾರತೀಯ ಸಮಾಜವನ್ನು ಸಮೃದ್ಧಗೊಳಿಸಿದ ಸಾವಿತ್ರಿಬಾಯಿ ಫುಲೆಯವರು ದೇಶ ಕಂಡ ಮಹಾನ್ ಮಹಿಳೆ ಹಾಗೂ ದೇಶ ಕಂಡ ಮೊದಲ ಮಹಿಳಾ ಶಿಕ್ಷಕಿ’ ಎಂದು ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಹೇಳಿದರು.

ಸೋಮವಾರ ನಗರದ ಬಸವೇಶ್ವರ ಕೋಚಿಂಗ್ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಆಯೋಜಿಸಲಾದ ಸಾವಿತ್ರಿಬಾಯಿ ಫುಲೆಯವರ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಕೇವಲ 13ನೇ ವಯಸ್ಸಿನಲ್ಲಿಯೇ ಮದುವೆಯಾದ ಸಾವಿತ್ರಿಬಾಯಿಗೆ ಅಕ್ಷರ, ಪುಸ್ತಕ ಜ್ಞಾನವಿರಲಿಲ್ಲ. ಆದರೆ ವಿದ್ಯೆ ಕಲಿಯಬೇಕೆಂಬ ಆಸೆ ಇತ್ತು. ಇವರ ಆಸೆಗೆ ಒತ್ತಾಸೆಯಾಗಿ ನಿಂತವರು ಆ ಕಾಲಕ್ಕೆ ಪ್ರಗತಿಪರ ಚಿಂತನೆಯ ಪತಿ ಜ್ಯೋತಿಬಾ ಫುಲೆಯವರು. ಇವರ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಶಿಕ್ಷಣ ಪಡೆದರು. ಆಗಿನ ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಶಿಕ್ಷಕಿಯ ತರಬೇತಿ ಪಡೆದು 17ನೇ ವಯಸ್ಸಿಗೆ ಶಿಕ್ಷಕಿಯಾದರು. ಮಹಿಳೆ ಸಬಲಳಾಗಬೇಕೆಂದರೆ ಅವಳಿಗೆ ಶಿಕ್ಷಣ ನೀಡುವುದು ಅಗತ್ಯವೆಂದು ಅರಿತು, ಫಾತಿಮಾ ಶೇಖ ಸಹಕಾರ ಪಡೆದು ಶಿಕ್ಷಣ ನೀಡಲು ಪ್ರಾರಂಭಿಸಿದರು ಎಂದು ತಿಳಿಸಿದರು.

ಕೆಲ ಸಂಪ್ರದಾಯಸ್ಥರು ಸಾವಿತ್ರಿಬಾಯಿಯವರ ಕಾರ್ಯ ಸಹಿಸಲಾಗದೇ ಕಾಟ ನೀಡಲು ಪ್ರಾರಂಭಿಸಿದರು. ಆದರೂ ಎದೆಗುಂದದೆ ಬಿಡೇವಾಡದಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ನಿರ್ಲಕ್ಷಿತ ಬಾಲಕಿಯರಿಗೆ, ಅವಕಾಶ ವಂಚಿತ ಹೆಣ್ಣು ಮಕ್ಕಳಿಗಾಗಿ ಹಾಗೂ ದಿಕ್ಕೆಟ್ಟ ಸ್ರ್ತೀಯರಿಗೆ ಶಾಲೆ ಆರಂಭಿಸಿ ಹೊಸ ಇತಿಹಾಸವನ್ನೇ ಬರೆದರು. ತಳವರ್ಗದ ಅನಕ್ಷರಸ್ಥ ಸಾವಿತ್ರಿಬಾಯಿ ಅಕ್ಷರ ಕಲಿತು, ಶಿಕ್ಷಣವಂಚಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಕರುಣಾಮಯಿ. ಆದ್ದರಿಂದ ಶಿಕ್ಷಕರ ದಿನಾಚರಣೆನ್ನು ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಆಗಬೇಕು ಎಂದು ಆಗ್ರಹಿಸಿದರು.

ವಾಡಿ-ಶಹಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್,  ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ,
ಸದಸ್ಯರಾದ ಪ್ರವೀಣ ರಾಜನ್, ನಾಗಣ್ಣ ರಾಂಪೂರೆ, ಶಾಂತಪ್ಪ ಹಡಪದ, ಸ್ನೇಹಲ್ ಜಾಯಿ, ರಮೇಶ, ಪೂಜಪ್ಪ ಮೇತ್ರೆ,ಮರಲಿಂಗ ಕಮರಡಗಿ, ಗುರು ರೇವಣಸಿದ್ದ ಪೂಜಾರಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.