ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ಲೆಕ್ಕಪತ್ರಗಳ ದಾಖಲೆ ಇಲ್ಲವೆಂದ ಪಿಡಿಒ

ಭಾಗೋಡಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರದ ತನಿಖೆ
Last Updated 5 ಮೇ 2020, 11:10 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ಭಾಗೋಡಿ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಯೋಜನೆಗಳಲ್ಲಿ ಅವ್ಯವಹಾರ, ಹಣ ದುರ್ಬಳಕೆ ಆಗಿದೆ ಎಂದು ಆರು ಜನ ಸದಸ್ಯರು ಸಲ್ಲಿಸಿದ ದೂರಿನ ಕುರಿತು ಕಚೇರಿಯಲ್ಲಿ ಲೆಕ್ಕಪತ್ರದ ದಾಖಲೆ, ಖರ್ಚು ವೆಚ್ಚದ ವೋಚರ್ ಇಲ್ಲ ಎಂದು ಪಿಡಿಒ ಹೇಳಿದಾಗ ತನಿಖಾಧಿಕಾರಿ ಹೌಹಾರಿದ ಘಟನೆ ಸೋಮವಾರ ಇಲ್ಲಿ ಜರುಗಿತು.

ದೂರಿನ ತನಿಖೆ ನಡೆಸಿ ವರದಿ ನೀಡುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಧರ್ ಅವರನ್ನು ತನಿಖಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಅಧಿಕಾರಿ ಅನೀತಾ.ಕೆ ನೇಮಕ ಮಾಡಿದ್ದಾರೆ.

ಶ್ರೀಧರ್ ಅವರು ಸರ್ವ ಸದಸ್ಯರ ವಿಶೇಷ ಸಭೆ ಕರೆದಿದ್ದರು. ತನಿಖೆ ಮಾಡುವುದು ಬಿಟ್ಟು ಸಭೆ ಕರೆದು ಅವ್ಯವಹಾರ ಮುಚ್ಚಿ ಹಾಕಲು ಅಧಿಕಾರಿ ಮುಂದಾಗಿದ್ದಾರೆ ಎಂದು ಸದಸ್ಯರಾದ ಮಲ್ಲಿಕಾರ್ಜುನ ದೊಡ್ಡಮನಿ, ಗಣಪತಿ ಅವರು ಸಭೆಯಲ್ಲಿ ಆಕ್ರೋಶ ವ್ಯಕ್ತ ಮಾಡಿದರು.

ಲೆಕ್ಕಪತ್ರದ ದಾಖಲೆಪತ್ರ, ಹಣಕಾಸಿನ ವೋಚರ್ ಕೊಡಿ ಎಂದು ಪಿಡಿಒ ಪ್ರಕಾಶ ಅವರಿಗೆ ಶ್ರೀಧರ್‌ ಸೂಚಿಸಿದರು. ಯಾವುದೇ ದಾಖಲೆ ಪತ್ರ, ವೋಚರ್ ಇಲ್ಲ. ಮೊದಲೇ ಹೇಳಿದ್ದರೆ ಸಿದ್ಧ ಮಾಡಿಕೊಂಡಿರುತ್ತಿದ್ದೆ ಎಂದು ಪಿಡಿಒ ಹಾರಿಕೆ ಉತ್ತರ ನೀಡಿದರು.

ಲೆಕ್ಕಪತ್ರದ ದಾಖಲೆ ಇಲ್ಲದೆ ತನಿಖೆ ಮಾಡಲು ಆಗುವುದಿಲ್ಲ ಎಂದು ಶ್ರೀಧರ್‌ ತನಿಖೆಯನ್ನು ಕೈ ಬಿಟ್ಟರು. ಉತ್ತರ ನೀಡಲು ವಿಫಲರಾದ ಪ್ರಕಾಶ ಅವರು ಸಭೆಯಿಂದ ಎದ್ದು ಹೋದರು. ಕಿರಿಯ ಎಂಜಿನಿಯರ್‌ ಜಾಫರ್ ಸುಮ್ಮನೆ ಕುಳಿತಿದ್ದರು. ಹಣಕಾಸಿನ ದಾಖಲೆ ಪತ್ರ, ವೋಚರ್ ಹಾಜರುಪಡಿಸಲು ಹತ್ತು ದಿನಗಳ ಕಾಲಾವಕಾಶ ನೀಡಬೇಕು ಎಂದು ಪ್ರಕಾಶ್‌ ಅವರು ಶ್ರೀಧರ್‌ ಅವರಿಗೆ ಪತ್ರ ಬರೆದುಕೊಟ್ಟರು.

ಅದರಂತೆ ಕಾಲಾವಕಾಶ ನೀಡಿ ಶ್ರೀಧರ್ ಅವರು ಸಭೆಯಿಂದ ನಿರ್ಗಮಿಸಿದರು. ವಿಶೇಷ ಸಭೆಯ ನಡಾವಳಿ ಪುಸ್ತಕದಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸದಸ್ಯರು ಸಹಿ ಮಾಡಿದ್ದರು. ಆದರೆ, ತನಿಖಾಧಿಕಾರಿ ಸಭಾ ನಡಾವಳಿ ಬರೆಯದೆ, ಸಹಿ ಮಾಡದೆ ಹೋಗಿದ್ದಕ್ಕೆ ಸದಸ್ಯರಿಂದ ಅನುಮಾನ ವ್ಯಕ್ತವಾದವು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಮ್ಮವ್ವಾ ಚೌಧರಿ, ಉಪಾಧ್ಯಕ್ಷೆ ಸುನೀತಾ ಮ್ಯಾಗೇರಿ, ಮಲ್ಲಿಕಾರ್ಜುನ ದೊಡ್ಡಮನಿ, ದೇವಿಂದ್ರ ನಾಟಿಕಾರ, ಶಿವಕುಮಾರ ಕಲಬುರ್ಗಿ, ಮಂಜುನಾಥ ಪೂಜಾರಿ, ಶಿವರಾಜ ಬಾವಿ, ತಿಪ್ಪಣ್ಣ ಅಪ್ಪೋಜಿ, ಸುಶೀಲಾ ನಾಯಕ, ಜುಲ್ಫೆಕರ್ ಖಾಜಿ ಇದ್ದರು.

ಸದಸ್ಯರಲ್ಲದ ಅನೇಕ ಮುಖಂಡರು, ಸದಸ್ಯೆಯರ ಗಂಡಂದಿರು, ಮಕ್ಕಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸದಸ್ಯರಲ್ಲದವರನ್ನು ಸಭೆಯಲ್ಲಿ ಕೂಡಿಸಿಕೊಂಡು ತನಿಖಾಧಿಕಾರಿಯೇ ಸಭೆಯ ಶಿಷ್ಟಾಚಾರ ಉಲ್ಲಂಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT