ಗುರುವಾರ , ಫೆಬ್ರವರಿ 27, 2020
19 °C
3 ಎಸ್‌ಪಿಗಳು, 15 ಎಎಸ್‌ಪಿಗಳು, 75 ಇನ್‌ಸ್ಪೆಕ್ಟರ್‌, 200 ಸಬ್‌ಇನ್‌ಸ್ಪೆಕ್ಟರ್‌, 10 ಕೆಎಸ್‌ಆರ್‌ಪಿ– 15 ಡಿಎಆರ್‌ ತುಕಡಿ

ಭದ್ರತೆಗೆ 4 ಸಾವಿರ ಪೊಲೀಸರು ಸನ್ನದ್ಧ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಾಹಿತ್ಯ ಸಮ್ಮೇಳನ ನಡೆಯುವ ಮೂರೂ ದಿನ ಬಿಗಿ ಪೊಲೀಸ್‌ ಭದ್ರತೆ ಒದಗಿಸಲು 4ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಅಕ್ರಮಗಳ ಕೃತ್ಯ ಎಸಗುವವರ ಮೇಲೆ ಹದ್ದಿನ ಕಣ್ಣಿಡಲು ನಗರದ ಪ್ರಮುಖ ವೃತ್ತ, ರಸ್ತೆ, ಚೌಕ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದೆ.

ಭದ್ರತೆ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ, ‘10 ಕೆಎಸ್ಆರ್‌‍ಪಿ ತುಕಡಿಗಳು, 15 ಡಿಎಆರ್‌ ತುಕಡಿಗಳು ದಿನದ 24 ಗಂಟೆಯೂ ಕಾವಲು ಕಾಯಲಿವೆ. ನಗರದ 1,000 ಪೊಲೀಸರಿಗೆ ಈಗಾಗಲೇ ತರಬೇತಿ ತಾಲೀಮು ನೀಡಲಾಗಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ 3,000 ಪೊಲೀಸರನ್ನು ಕರೆಸಲಾಗುತ್ತದೆ’ ಎಂದರು.

‘ಮೂವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತೆಯ ಮೇಲುಸ್ತುವಾರಿ ವಹಿಸುತ್ತಾರೆ. ನಾನು ಮೇಲ್ವಿಚಾರಣೆ ಮಾಡುತ್ತೇನೆ. 15 ಎಸಿಪಿಗಳು. 75 ಇನ್‌ಸ್ಪೆಕ್ಟರ್‌ಗಳು, 200 ಸಬ್‌ಇನ್‌ಸ್ಪೆಕ್ಟರ್‌ಗಳು ಕಾರ್ಯನಿರ್ವಹಿಸಲಿದ್ದಾರೆ’ ಎಂದೂ ತಿಳಿಸಿದರು.

ಡ್ರೋಣ್‌ ಕಾವಲು: ‘ಮೆರವಣಿಗೆ ನಡೆಯುವ ವೇಳೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಯಾವುದೇ ಅಕ್ರಮ, ಅವಘಡ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಎರಡು ಡ್ರೋಣ್‌ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣು ಇಡಲಾಗುತ್ತದೆ. ಮೆರವಣಿಗೆಯ ಸಂಭ್ರಮಕ್ಕೆ ಕಿಂಚಿತ್ತೂ ತೊಂದರೆ ಆಗದಂತೆ ಕಣ್ಣಿಟ್ಟು ಕಾಯುವುದು ನಮ್ಮ ಜವಾಬ್ದಾರಿ’ ಎಂದು ಕಮಿಷನರ್‌ ಪ್ರತಿಕ್ರಿಯಿಸಿದರು.

ಇದರೊಂದಿಗೆ ಸಮ್ಮೇಳನದ ವೇದಿಕೆ ಬಳಿ ಒಂದು ಡ್ರೋಣ್‌ ಯಾವಾಗಲೂ ಚಲನೆಯಲ್ಲಿ ಇರುತ್ತದೆ. ಇದರ ಮಾನಿಟರ್‌ ಮಾಡಲು, ಸೂಕ್ಷ್ಮತೆಗಳನ್ನು ಪರಿಶೀಲಿಸಲು ಒಂದು ತಂಡ ಸದಾ ಸಿದ್ಧವಾಗಿರುತ್ತದೆ.

ಈಗಾಗಲೇ ರೌಡಿಶೀಟರ್‌ಗಳ ಪರೇಡ್‌ ನಡೆಸಿ ಎಚ್ಚರಿಕೆ ನೀಡಲಾಗಿದೆ. ಜೇಬುಗಳ್ಳರು, ಚೈನ್ ಕಳ್ಳರು, ದೊಂಬಿಯಂಥ ಘಟನೆಗಳಲ್ಲಿ ಪಾಲ್ಗೊಂಡವರ ಮೇಲೆ ಸದಾ ಕಣ್ಣಿಡಲಾಗುತ್ತಿದೆ. 

ಜನದಟ್ಟಣೆ, ಸಂಚಾರ ನಿಯಂತ್ರಣ

ಮೂರೂ ದಿನ ನಗರದಲ್ಲಿ ಜನದಟ್ಟಣೆ ಹಾಗೂ ಸಂಚಾರ ನಿಯಂತ್ರಣಕ್ಕೆ ಆದ್ಯತೆ ನೀಡಲಾಗಿದೆ. ವಿಶೇಷವಾಗಿ 3 ಎಸಿಪಿಗಳು, 15 ಇನ್‌ಸ್ಪೆಕ್ಟರ್‌ಗಳು ಹಾಗೂ 700 ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಸಂಚಾರ ನಿಯಂತ್ರಣಕ್ಕಾಗಿಯೇ ನಿಯೋಜಿಸಲಾಗುವುದು. ಮಹಿಳಾ ಸಿಬ್ಬಂದಿಯನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲು ಉದ್ದೇಶಿಸಲಾಗಿದೆ. ಅಗತ್ಯ ವಾಹನಗಳು ಹಾಗೂ ಬ್ಯಾರಿಕೇಡ್‌ಗಳನ್ನು ನೆರೆಯ ಜಿಲ್ಲೆಗಳಿಂದ ಕೂಡ ತರಿಸಿಕೊಳ್ಳಲಾಗುವುದು.

ವಸತಿ ವ್ಯವಸ್ಥೆ

ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಗರದ ವಿವಿಧ ಕಲ್ಯಾಣ ಮಂಟಪ, ನಾಗೇನಹಳ್ಳಿಯ ಪೊಲೀಸ್‌ ತರಬೇತಿ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಬೆಡ್‌ಗಳನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಮೆರವಣಿಗೆ ವೇಳೆ ಮಾತ್ರ ಸಂಚಾರ ಮಾರ್ಗ ಬದಲಾಯಿಸುತ್ತೇವೆ. ಸಮ್ಮೇಳನವು ವಿಶ್ವವಿದ್ಯಾಲಯ ಕಾಂಪೌಂಡ್‌ ಒಳಗೇ ನಡೆಯುವುದರಿಂದ ನಗರದ ಬೇರೆ ಕಡೆ ಸಂಚಾರ ಮಾರ್ಗ ಬದಲಾಯಿಸುವ ಅಗತ್ಯವಿಲ್ಲ ಎಂಬುದು ಸಂಚಾರ ಪೊಲೀಸರ ಹೇಳಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು