ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಇಟಕಾಲ್‌ನಲ್ಲಿ 100ಕ್ಕೂ ಅಧಿಕ ಸರ್ಕಾರಿ ನೌಕರರು!

Published 2 ಜುಲೈ 2023, 4:54 IST
Last Updated 2 ಜುಲೈ 2023, 4:54 IST
ಅಕ್ಷರ ಗಾತ್ರ

ಅವಿನಾಶ ಬೋರಂಚಿ

ಸೇಡಂ: ತಾಲ್ಲೂಕಿನ ಇಟಕಾಲ್ ಗ್ರಾಮವೊಂದರಲ್ಲಿಯೇ 100ಕ್ಕೂ ಅಧಿಕ ಸರ್ಕಾರಿ ನೌಕರರು ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕ ಗ್ರಾಮದಲ್ಲಿ 100 ಸರ್ಕಾರಿ ನೌಕರರಿದ್ದಾರಾ ಎಂದು ಅಚ್ಚರಿಯೆನಿಸಿದರೂ ಇದು ಸತ್ಯ.

ಸುಮಾರು 5 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಿದೆ. 250ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಯಲ್ಲೀಗ ಅಧ್ಯಯನ ಮಾಡುತ್ತಿದ್ದಾರೆ. ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಿದೆ. ಕೃಷಿಯನ್ನೇ  ಮೂಲ ಕಾಯಕವನ್ನಾಗಿಸಿಕೊಂಡಿದ್ದಾರೆ ಗ್ರಾಮಸ್ಥರು. ಭತ್ತ ಅವರ ಪ್ರಮುಖ ಬೆಳೆ.

ತೆಲುಗು ಪ್ರಭಾವದ ಗಡಿನಾಡ ಗ್ರಾಮದ ಯುವಕರು ಸರ್ಕಾರಿ ವೃತ್ತಿ ಪಡೆಯಬೇಕೆಂಬ ದಿಟ್ಟತನವನ್ನು ರೂಢಿಸಿಕೊಳ್ಳುತ್ತಿರುವುದು ಶ್ಲಾಘನೀಯ
ಶಿವಶಂಕ್ರಯ್ಯಸ್ವಾಮಿ ಇಮಡಾಪುರ, ಅಧ್ಯಕ್ಷರು, ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕ ಸೇಡಂ

ನಿಖರ ಮಾಹಿತಿ ಕಲೆಹಾಕಿದಾಗ 102ಕ್ಕೂ ಅಧಿಕ ಮಂದಿ ಪ್ರಸ್ತುತ ಸರ್ಕಾರಿ ನೌಕರಿಯಲ್ಲಿದ್ದಾರೆ ಎಂಬ ಪಟ್ಟಿ ಸಿದ್ಧಗೊಂಡಿತು. ನಿವೃತ್ತರಾದವರಾದರನ್ನು ಸೇರಿಸಿದರೆ 150ರ ಗಡಿ ದಾಟುತ್ತದೆ ಎಂಬ ಮಾಹಿತಿಯೂ ಸಿಕ್ಕಿತು.

ಮನೆಯಲ್ಲಿ ಶೈಕ್ಷಣಿಕ ವಾತಾವರಣ ಬೆಳೆಯಲು ಗ್ರಾಮದ ಹಿರಿಯರ ಮಾರ್ಗದರ್ಶನ ಮತ್ತು ತಿಳಿವಳಿಕೆಯ ಮಾತುಗಳೇ ಸ್ಪೂರ್ತಿ.
ಅರವಿಂದ ಪಸಾರ, ಶಿಕ್ಷಕ (ಗ್ರಾಮಸ್ಥ)

ಸರ್ಕಾರ ಆಹ್ವಾನಿಸುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಹುದ್ದೆಗಿಟ್ಟಿಸಿಕೊಳ್ಳುವುದು ಈ ಗ್ರಾಮದಲ್ಲಿ ರಕ್ತದಲ್ಲಿಯೇ ಬಂದಿದೆ ಎನ್ನುವಂತೆ ಹುದ್ದೆ ಪಡೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಈಚೆಗೆ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಐದು ಜನ ಯುವಕರು ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ.

‘ಶಾಲಾ-ಕಾಲೇಜಿನ ವಸತಿ ನಿಲಯಗಳಲ್ಲಿ ಅಡುಗೆ ಮಾಡುವವರಿಂದ ಒಳಗೊಂಡು ಡಿಎಸ್‌ಪಿ ಹುದ್ದೆವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪೊಲೀಸ್, ಪುರಸಭೆ, ಆರೋಗ್ಯ, ಶಿಕ್ಷಣ, ವೈದ್ಯಕೀಯ, ಪಶು ಸಂಗೋಪನೆ, ಜೆಸ್ಕಾಂ, ಕಂದಾಯ, ಅಂಚೆ, ಸೈನಿಕ ಹೀಗೆ 10ಕ್ಕೂ ಅಧಿಕ ಇಲಾಖೆಗಳಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಶಿಕ್ಷಣ ಇಲಾಖೆಯಲ್ಲಿಯೇ ಸುಮಾರು 35ಕ್ಕೂ ಅಧಿಕ ನೌಕರರು ಕೆಲಸವನ್ನು ಪ್ರಸ್ತುತ ನಿರ್ವಹಿಸುತ್ತಿದ್ದಾರೆ. ರಾಜ್ಯ ಅಥವಾ ಕೇಂದ್ರ ಸರ್ಕಾರ ಯಾವುದೇ ಹುದ್ದೆ ಆಹ್ವಾನಿಸಿದರೆ ತಕ್ಷಣ ಅರ್ಜಿ ಸಲ್ಲಿಸಿ, ಅದಕ್ಕೆ ಸೂಕ್ತ ತಯಾರಿ ನಡೆಸುವ ಗ್ರಾಮದ ಪರಂಪರೆ ಬೆಳೆಯುತ್ತಿದೆ. ಜೊತೆಗೆ ಬೇರೆ ಊರಿಂದ ಗ್ರಾಮದಲ್ಲಿ ನೆಲೆಸಿ ಓದಿದ ಆಶಪ್ಪ ಪೂಜಾರಿ ತಹಶೀಲ್ದಾರ್ ಆಗಿದ್ದಾರೆ’ ಎನ್ನುತ್ತಾರೆ ಗ್ರಾಮದ ಜಾಫರ್ ಅಲಿ ಮತ್ತು ನರೇಂದ್ರ ನಾಯ್ಡು.

ಒಂದೇ ಮನೆಯಲ್ಲಿ ಏಳು ಶಿಕ್ಷಕರು

ಗ್ರಾಮದ ಪಸಾರ ಮನೆತನವೊಂದರಲ್ಲಿಯೇ ಸುಮಾರು ಎಳಕ್ಕೂ ಅಧಿಕ ಜನರು ಸರ್ಕಾರಿ ನೌಕರರಿದ್ದಾರೆ. ಜೊತೆಗೆ ಗ್ರಾಮದಲ್ಲಿ ಸರ್ಕಾರಿ ನೌಕರಿಯ ಜೊತೆಗೆ ಖಾಸಗಿ ವೈದ್ಯ ಎಂಜಿನಿಯರ್ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮೂರು ಹೀಗೆಯೇ ಮುಂದುವರಿದರೆ ಸ್ವಾವಲಂಬಿ ಗ್ರಾಮವಾಗಬಹುದು ಎನ್ನುತ್ತಾರೆ ಶಿಕ್ಷಕ ಅರವಿಂದ ಪಸಾರ.

ಪಟ್ಟಿ

ಯಾವ ಕ್ಷೇತ್ರ ;ಎಷ್ಟು ನೌಕರರು

ಪೊಲೀಸ್;10

ಪ್ರಥಮ ದರ್ಜೆ ಸಹಾಯಕ;5

ದ್ವಿತೀಯ ದರ್ಜೆ ಸಹಾಯಕ;3

ಪುರಸಭೆ;10

ಆರೋಗ್ಯ;10

ಪ್ರಾಧ್ಯಾಪಕ;1

ಜೆಸ್ಕಾಂ;8

ವಸತಿ ನಿಲಯ;5

ಅಂಗನವಾಡಿ;6

ಶಿಕ್ಷಣ;30

ಅಂಚೆ ಕಚೇರಿ;03

ಬಿಎಸ್ಎಫ್;1

ಮೊರಾರ್ಜಿ ಶಾಲೆ;2

ಪಶು ಸಂಗೋಪನೆ;3

ಇಟಕಾಲ್ ಗ್ರಾಮ
ಇಟಕಾಲ್ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT