ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಬಾದ್ ಇಎಸ್‌ಐ ಅಸ್ಪತ್ರೆ ಇನ್ನು ಕೋವಿಡ್ ಕೇಂದ್ರ

ಶಿಥಿಲಾವಸ್ಥೆಯಲ್ಲಿರುವ ಆಸ್ಪತ್ರೆ ಸದ್ಬಳಕೆಗೆ ಸಚಿವ ಮುರುಗೇಶ ನಿರಾಣಿ ಸೂಚನೆ
Last Updated 12 ಮೇ 2021, 11:32 IST
ಅಕ್ಷರ ಗಾತ್ರ

ಕಲಬುರ್ಗಿ: ಪಾಳುಬಿದ್ದಿರುವ ಶಹಾಬಾದ್‌ನ ಕೋವಿಡ್‌ ಕೇರ್ ಕೇಂದ್ರವನ್ನು ಕೋವಿಡ್‌ ಕೇರ್‌ ಕೇಂದ್ರವನ್ನಾಗಿ ಬಳಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದೇ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ಶಹಾಬಾದ್ ತಹಶೀಲ್ದಾರ್ ಸುರೇಶ್ ವರ್ಮಾ, ನಗರಸಭೆ ಆಯುಕ್ತ ಕೆ.ಗುರುಲಿಂಗಪ್ಪ, ಕಂದಾಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆಸಿ ಅತೀ ಶೀಘ್ರದಲ್ಲಿ ಕಾರ್ಯಾರಂಭ ಮಾಡುವಂತೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಬೆಳೆದು ನಿಂತಿರುವ ಗಿಡ–ಗಂಟೆಗಳು, ಬಿರುಕು ಬಿಟ್ಟಿರುವ ಗೋಡೆಗಳು, ಕೈಕೊಟ್ಟಿರುವ ವಿದ್ಯುತ್ ಸಂಪರ್ಕ, ಹಾಳಾಗಿರುವ ಬೆಡ್‍ಗಳು, ಚಿಕಿತ್ಸಾ ಕೊಠಡಿ, ರೋಗಿಗಳು ತಂಗುವ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಸ್ನಾನದ ಕೋಣೆ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಬೇಕೆಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಈ ಆಸ್ಪತ್ರೆಯಲ್ಲಿ ಕಲ್ಪಿಸಬೇಕು. ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಪೂರೈಕೆ, ಕುಡಿಯುವ ನೀರು, ಅಡುಗೆ ಮನೆ, ಶೌಚಾಲಯ ಸೇರಿದಂತೆ ಆಧುನಿಕ ಆಸ್ಪತ್ರೆಗೆ ಇರಬೇಕಾದ ಎಲ್ಲ ಮೂಲಸೌಕರ್ಯಗಳನ್ನೂ ಕಲ್ಪಿಸಬೇಕು. ಇದು ಸಮರೋಪಾದಿಯಲ್ಲಿ ನಡೆಯಬೇಕೆಂದು ಸೂಚಿಸಿದ್ದಾರೆ.

ಎಷ್ಟು ಸಾಧ್ಯವೋ ಅಷ್ಟು ಬೇಗ ಕೋವಿಡ್ ಸೆಂಟರ್ ಕಾರ್ಯಾರಂಭ ಮಾಡಬೇಕು. ಅಧಿಕಾರಿಗಳು ಇಲ್ಲದ ಸಬೂಬು ಹೇಳುವುದು, ಕಾರಣ ಕೊಟ್ಟು ವಿಳಂಬ ಮಾಡುವುದು, ಅನಗತ್ಯವಾಗಿ ಅಸಡ್ಡೆ ತೋರಿದರೆ ಅಂಥವರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ಕೊಟ್ಟಿದ್ದಾರೆ.

ಇಎಸ್‍ಐ ಆಸ್ಪತ್ರೆಯು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾದರೆ ನೂರಾರು ಸಂಖ್ಯೆಯ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಬಹುದು. ಈಗ ಜಿಲ್ಲೆಯಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಹೀಗಾಗಿ ಪಾಳು ಬಿದ್ದಿರುವ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಿ ಭವಿಷ್ಯದಲ್ಲಿಯೂ ಬಳಕೆ ಮಾಡಿಕೊಳ್ಳುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT