ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದೋಷ, ದ್ವೇಷ ಬಿಟ್ಟರೆ ವ್ಯಕ್ತಿತ್ವಕ್ಕೆ ಮಿಂಚು’

ಶಾಂತಪ್ಪ ಪಾಟೀಲ ನರಿಬೋಳರ 11ನೇ ಪುಣ್ಯಸ್ಮರಣೆ; ಇಬ್ಬರು ಸಾಧಕರಿಗೆ ‘ಶಾಂತಶ್ರೀ’ ಪ್ರಶಸ್ತಿ ಪ್ರದಾನ
Published : 12 ಸೆಪ್ಟೆಂಬರ್ 2024, 16:02 IST
Last Updated : 12 ಸೆಪ್ಟೆಂಬರ್ 2024, 16:02 IST
ಫಾಲೋ ಮಾಡಿ
Comments

ಕಲಬುರಗಿ: ‘ಜೀವನದಲ್ಲಿ ಎರಡನ್ನು ದೂರವಿಟ್ಟರೆ ಮಾನವರಿಂದ ಮಹಾಮಾನವ, ಮಹಾಮಾನವರಿಂದ ದೇವ ಮಾನವರಾಗಲು ಸಾಧ್ಯ. ಮೊದಲನೆಯದ್ದು ದೋಷ ಹಾಗೂ ಎರಡನೆಯದ್ದು ದ್ವೇಷ’ ಎಂದು ಡಿವೈಎಸ್ಪಿ ಬಸವೇಶ್ವರ ಹೀರಾ ಅಭಿಪ್ರಾಯಪಟ್ಟರು.

ಶಾಂತಪ್ಪ ಪಾಟೀಲ ನರಿಬೋಳ ಪ್ರತಿಷ್ಠಾನದಿಂದ ನಗರದ ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಪ್ಪ ಪಾಟೀಲ ನರಿಬೋಳರ ಅವರ 11ನೇ ಪುಣ್ಯಸ್ಮರಣೆ ಹಾಗೂ ಶಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಅವರು ಮಾತನಾಡಿದರು.

‘ಅವರು ಹಾಗೆ, ಇವರು ಹೀಗೆ ಎಂದು ದೋಷ ಹುಡುಕುವುದು ಬಿಡಬೇಕು. ಜೊತೆಗೆ ದೋಷ ಸಿಗದಿದ್ದಾಗ ದ್ವೇಷಿಸಲು ಶುರು ಮಾಡುತ್ತೇವೆ. ಅದನ್ನು ಬಿಡಬೇಕು. ಆಗ ಸುತ್ತಲಿನವರು ನಮ್ಮನ್ನು ಪ್ರೀತಿ, ಗೌರವದಿಂದ ಕಾಣುತ್ತಾರೆ. ಇವೆರಡನ್ನೂ ಬಿಡಬೇಕಾದರೆ ಸಜ್ಜನರ ಒಡನಾಟ, ಕಡಿಮೆ ಮಾತಾಡಿ, ಆಲಿಸುವುದನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು.

ಶಾಂತಶ್ರೀ ಪ್ರಶಸ್ತಿ ಸ್ವೀಕರಿಸಿದ ಬಿಜೆಪಿ‌ ಮುಖಂಡ ಮಲ್ಲಿನಾಥಗೌಡ‌ ಪಾಟೀಲ ಮಾತನಾಡಿ, ‘ಬ‌ದುಕಿನಲ್ಲಿ ಆಸ್ತಿಗಿಂತಲೂ ನೀತಿ ಮುಖ್ಯ. ಸಮಾಧಾನ‌, ಸುಖ–ಶಾಂತಿ ಇಲ್ಲದಿದ್ದರೆ ನೂರಾರು ಕೋಟಿ ಆಸ್ತಿ‌ ಮಾಡಿ ಇದ್ದರೂ ಪ್ರಯೋಜನವಿಲ್ಲ’ ಎಂದರು.

ಸಾಹಿತಿ ಕಾವ್ಯಶ್ರೀ ಮಹಾಂಗಾವಕರ್‌ ಮಾತನಾಡಿ, ‘ಶಾಂತಪ್ಪ ಪಾಟೀಲ ಅರಿವಿನ ಕುರುಹು ಆಗಿದ್ದರು. ಇಡೀ ಕನ್ನಡ ಸಾಹಿತ್ಯ ಚೆನ್ನಾಗಿ ಅರ್ಥೈಸಿಕೊಂಡಿದ್ದರು. ಹಳೆಗನ್ನಡದ ವಾಕ್ಯಗಳನ್ನು ಪಟಪಟನೆ ಹೇಳುತ್ತಿದ್ದರು. ಪಳಗಿದ ಆಲೋಚನೆ ಅವರಲ್ಲಿತ್ತು. ಶಾಂತಪ್ಪ ಅವರ ಒಳ್ಳೆಯತನ ಘಮಲು‌ ಸಮಾಜದಲ್ಲಿ ಇಂದಿಗೂ ಜೀವಂತವಾಗಿದೆ’ ಎಂದು ಬಣ್ಣಿಸಿದರು.

ಭಾರತೀಯ ಯುವ‌ ಕಾಂಗ್ರೆಸ್ ಮಾಧ್ಯಮ ‌ವಿಭಾಗದ ರಾಷ್ಟ್ರೀಯ ಸಂಯೋಜಕ ಚೇತನ ಗೋನಾಯಕ ಮಾತನಾಡಿ, ‘ನಾಡು‌, ನುಡಿ‌, ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ಬಂದಾಗ ಗಟ್ಟಿಯಾಗಿ ಧ್ವನಿ ಎತ್ತುವ ವ್ಯಕ್ತಿ ಎಂ.ಎಸ್.ಪಾಟೀಲ ನರಿಬೋಳರು. ಅವರು ಕಲ್ಯಾಣ ಕರ್ನಾಟಕ‌ ಭಾಗದ ವಾಟಾಳ್ ನಾಗರಾಜ್’ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ‌ ಗ್ರಾಮೀಣ ‌ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ರುದನೂರ ತೋಂಟದಾರ್ಯ ಸಿದ್ಧಲಿಂಗೇಶ್ವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಶಾಂತಪ್ಪ ಪಾಟೀಲ ನರಿಬೋಳ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್‌.ಪಾಟೀಲ ನರಿಬೋಳ ಗಣ್ಯರನ್ನು ಸ್ವಾಗತಿಸಿದರು.

ಅರವಿಂದ ಗುರೂಜಿ, ಮಲ್ಲನಗೌಡ ಕಲ್ಲೂರ‌ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT