ಮಂಗಳವಾರ, ಏಪ್ರಿಲ್ 20, 2021
25 °C
ಸರಳವಾಗಿ ನೆರವೇರಿದ ಉಚ್ಚಾಯಿ ಮೆರವಣಿಗೆ, ವಾಣಿಜ್ಯ ಮಳಿಗೆಗಳಿಗೂ ಅವಕಾಶವಿಲ್ಲ

ಅಪ್ಪನ ಜಾತ್ರೆ; ಇಂದು ಸರಳವಾಗಿ ನಡೆಯಲಿದೆ ಶರಣಬಸವೇಶ್ವರರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ, ಇಲ್ಲಿನ ಶರಣಬಸವೇಶ್ವರರ ಉಚ್ಚಾಯಿ ಮಹೋತ್ಸವವನ್ನು ಕೊರೊನಾ ವೈರಾಣು ಹರಡುವ ಭೀತಿಯ ಹಿನ್ನೆಲೆಯಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಡಳಿತ ಕೂಡ ಜಾತ್ರೆ, ಉತ್ಸವಗಳ ಮೇಲೆ ನಿಷೇಧ ಹೇರಿದ್ದರಿಂದ ಕೆಲವೇ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಹಾದಾಸೋಹ ಮನೆಯ ಸದಸ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕೆಲವು ಮುಖಂಡರು ಹಾಗೂ ಭಕ್ತರ ಸಮ್ಮುಖದರಲ್ಲಿ ಉಚ್ಚಾಯಿ ಅಂಗವಾಗಿ ಸಣ್ಣ ರಥವನ್ನು ಎಳೆಯಲಾಯಿತು. ಶರಣಬಸವೇಶ್ವರರಿಗೆ ಜೈಕಾರ ಹಾಕುತ್ತಲೇ ಭಕ್ತರು ದೇವಸ್ಥಾನದ ಮುಂದಿನ ದ್ವಾರದವರೆಗೆ ರಥ ಎಳೆದು, ನಂತರ ಮರಳಿ ಸ್ವಸ್ಥಾನಕ್ಕೆ ತಲುಪಿಸಿದರು.

ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗದಂತೆ ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದರು. ರಸ್ತೆಗೆ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸಿದರು. ದೇವಸ್ಥಾನದ ಆವರಣದಲ್ಲಿ ಕೂಡ ಯಾವುದೇ ವಾಣಿಜ್ಯ ಮಳಿಗೆಗಳನ್ನು ಹಾಕಲು ಅವಕಾಶ ನೀಡಿಲ್ಲ.

ಪ್ರತಿ ವರ್ಷ ಉಚ್ಚಾಯಿ ರಥೋತ್ಸವ ರಾತ್ರಿ ವೇಳೆ ನಡೆಯುವುದು ವಾಡಿಕೆ. ಆದರೆ, ಭಕ್ತರ ಸಂಖ್ಯೆ ಹೆಚ್ಚದಂತೆ ನೋಡಿಕೊಳ್ಳಲು ಈ ಬಾರಿ ಬೆಳಿಗ್ಗೆಯೇ ಉಚ್ಚಾಯಿ ರಥ ಎಳೆಯಲಾಯಿತು. 

ಶುಕ್ರವಾರ ರಥೋತ್ಸವ: ಏ. 2ರಂದು ಶರಣಬಸವೇಶ್ವರರ ರಥೋತ್ಸವವನ್ನು ಕೂಡ ಸರಳವಾಗಿ ಆಚರಿಸಲು ಶರಣಬಸವೇಶ್ವರ ಸಂಸ್ಥಾನ ನಿರ್ಧರಿಸಿದೆ.

ಬೆಳಿಗ್ಗೆಯೇ ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಗುರುಪಾದ ಪೂಜೆ ನೆರವೇರಿಸುವರು. ಬಳಿಕ ಶರಣಬಸವೇಶ್ವರರ ಪ್ರಸಾದ ಬಟ್ಟಲು ಮತ್ತು ಲಿಂಗಸಜ್ಜಿಕೆಯನ್ನು ಭಕ್ತರಿಗೆ ತೋರಿಸುವರು. ಮಧ್ಯಾಹ್ನದ ವೇಳೆಗ ರಥ ಎಳೆಯಲಾಗುವುದು. ಇದಕ್ಕು ಕೂಡ ಭಕ್ತರು ಸೇರಬಾರದು. ಸರಳ ರೀತಿಯಲ್ಲೇ ರಥೋತ್ಸವ ನೆರವೇರಲಿದೆ ಎಂದು ಡಾ.ಶರಣಬಸವಪ್ಪ ಅಪ್ಪ ತಿಳಿಸಿದ್ದಾರೆ.

ಕೋವಿಡ್‌ ವೈರಾಣು ಅತ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಾವು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಅಗತ್ಯವಿದೆ. ಆದ್ದರಿಂದ ಭಕ್ತರು ಮಂದಿರಕ್ಕೆ ಬರದೇ, ಮನೆಯಲ್ಲಿಯೇ ಇದ್ದುಕೊಂಡು ಶರಣಬಸವೇಶ್ವರರ ಕೃಪೆಗೆ ಪಾತ್ರವಾಗಬೇಕು ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು